ಬೆಂಗಳೂರು,ಮಾ.12- ಕೇಂದ್ರ ಸರ್ಕಾರ ನಿನ್ನೆ ಸಿಎಎ ಅನ್ನು ಜಾರಿಗೊಳಿಸಿ ಅಸೂಚನೆ ಹೊರಡಿಸಿದೆ. ಈ ಹಿನ್ನಲೆಯಲ್ಲಿ ನಾವು ನಗರದಾದ್ಯಂತ ಎಚ್ಚರಿಕೆ ವಹಿಸಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಈವರೆಗೂ ನಗರದಲ್ಲಿ ಸಿಎಎ ಕುರಿತು ಯಾವುದೇ ರೀತಿಯ ಪ್ರತಿಭಟನೆಯಾಗಿಲ್ಲ. ನಾವು ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ಪೂರ್ವ ತಯಾರಿ ಹಿನ್ನೆಲೆಯಲ್ಲಿ ಸಿಐಎಸ್‍ಎಫ್ ಒಂದು ತುಕಡಿ ನಿಯೋಜಿಸಲಾಗಿದ್ದು, ಜೆಜೆನಗರ ಸೇರಿದಂತೆ ನಗರದ ಅನೇಕ ಕಡೆ ಪಂಥಸಂಚಲನ ನಡೆಸಿದ್ದೇವೆ ಎಂದು ಆಯುಕ್ತರು ತಿಳಿಸಿದರು.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೆರಿದಂತೆ 10 ಮಂದಿ ಗಣ್ಯರಿಗೆ ಬಂದಿರುವ ಇಮೇಲ್ ಬೆದರಿಕೆ ಕುರಿತು ಸಿಐಡಿ ಮೂಲಕ ಸಿಬಿಐ ಇಂಟೆರ್ ಪೋಲ್ ಗೆ ಮಾಹಿತಿ ನೀಡಿದ್ದೇವೆ. ಇದನ್ನು ಕೇಂದ್ರ ತನಿಖಾ ಸಂಸ್ಥೆಗಳು ಮುಂದಿನ ಕ್ರಮ ಕೈಗೊಳ್ಳಲಿವೆ.
ಈ ಹಿಂದೆ ನಗರದ ಶಾಲಾಕಾಲೇಜುಗಳಿಗೆ ಬಂದಿದ್ದ ಬಾಂಬ್ ಬೆದರಿಕೆಗಳಂತಹ ಇಮೇಲ್ ಸಂದೇಶದ ಬಗ್ಗೆ ತನಿಖೆ ನಡೆಸುತ್ತಿದ್ದು, ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಆಯುಕ್ತರು ಹೇಳಿದರು.