Thursday, May 2, 2024
Homeಜಿಲ್ಲಾ ಸುದ್ದಿಗಳುದೇವೇಗೌಡರು ಪಾಲ್ಗೊಂಡಿದ್ದ ಸಭೆಯಲ್ಲಿ ಭದ್ರತಾ ಲೋಪ : ಜೆಡಿಎಸ್ ದೂರು

ದೇವೇಗೌಡರು ಪಾಲ್ಗೊಂಡಿದ್ದ ಸಭೆಯಲ್ಲಿ ಭದ್ರತಾ ಲೋಪ : ಜೆಡಿಎಸ್ ದೂರು

ಬೆಂಗಳೂರು,ಏ.16-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್-ಬಿಜೆಪಿ ನಾಯಕರಿದ್ದ ಸಭೆಗೆ ಸೂಕ್ತ ಭದ್ರತೆ ಒದಗಿಸದೆ ಲೋಪವಾಗಿದೆ ಎಂದು ಆರೋಪಿಸಿ ತುಮಕೂರು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಜೆಡಿಎಸ್ ದೂರು ನೀಡಿದೆ. ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ ಅವರು ದೂರು ನೀಡಿದ್ದು, ತುಮಕೂರು ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಬೆಂಬಲಿಸಿ ನಿನ್ನೆ ತುಮಕೂರಿನ ಕುಂಚಿಟಿಗ ಸಮುದಾಯ ಭವನದಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರ ಸಭೆಯನ್ನು ನಡೆಸಲಾಯಿತು.

ಆ ಸಭೆಯ ಅಧ್ಯಕ್ಷತೆಯನ್ನು ದೇವೇಗೌಡರು ವಹಿಸಿದ್ದರು. ಸಭೆಯ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಕಾಂಗ್ರೆಸ್ ಬೆಂಬಲಿತ ಮಹಿಳೆ ಸಭಾಂಗಣಕ್ಕೆ ಆಗಮಿಸಿ ವೇದಿಕೆಯತ್ತ ಬಂದಿದ್ದಾರೆ. ವೇದಿಕೆಗೆ ಸೂಕ್ತ ಭದ್ರತೆಯನ್ನು ಒದಗಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ಭದ್ರತಾ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಘಟನೆಗೆ ಕಾರಣರಾದವರನ್ನು ಬಂಧಿಸಲು ಸೂಕ್ತ ತನಿಖೆ ನಡೆಸಬೇಕು, ಘಟನಾ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಾಜಣ್ಣ ಅವರ ಪ್ರಚೋದನೆ ಮತ್ತು ಕುಮ್ಮಕಿನಿಂದ ಕಾಂಗ್ರೆಸ್ ಬೆಂಬಲಿತ ಮಹಿಳೆ ದೇವೇಗೌಡರಿದ್ದ ವೇದಿಕೆಯತ್ತ ಆಗಮಿಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಸಲಿರುವ ಸಭೆಗಳಿಗೆ ಸೂಕ್ತ ಭದ್ರತಾವ್ಯವಸ್ಥೆಯನ್ನು ಕೈಗೊಳ್ಳಲು ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ.

RELATED ARTICLES

Latest News