Thursday, May 2, 2024
Homeರಾಜಕೀಯವಿಧಾನಸಭಾ ಚುನಾವಣೆ ಯಡವಟ್ಟುಗಳಿಂದ ಎಚ್ಚೆತ್ತ ಬಿಜೆಪಿ ಎಚ್ಚರಿಕೆಯ ಹೆಜ್ಜೆ

ವಿಧಾನಸಭಾ ಚುನಾವಣೆ ಯಡವಟ್ಟುಗಳಿಂದ ಎಚ್ಚೆತ್ತ ಬಿಜೆಪಿ ಎಚ್ಚರಿಕೆಯ ಹೆಜ್ಜೆ

ಬೆಂಗಳೂರು,ಏ.16- ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿರುವ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಮಾಡಿಕೊಂಡ ಎಡವಟ್ಟುಗಳಿಗೆ ಪೂರ್ಣ ವಿರಾಮ ಹಾಕಿ, ದೇಶಕ್ಕೆ ಮೋದಿ ಅಗತ್ಯತೆಯ ಬಗ್ಗೆ ಪ್ರಚಾರ ನಡೆಸುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಒಂದಿಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡ ಪರಿಣಾಮ ಫಲಿತಾಂಶದಲ್ಲಿ ಭಾರೀ ಹಿನ್ನಡೆಯಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಕಮಲ ನಾಯಕರು ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲು ಹಿಂದೇಟು ಹಾಕುತ್ತಿದ್ದಾರೆ.

ಉಗ್ರ ಹಿಂದುತ್ವ, ಮೃದು ಹಿಂದುತ್ವ, ಟಿಪ್ಪು ಸುಲ್ತಾನ್, ಉರಿಗೌಡ ನಂಜೇಗೌಡ, ಕೋಮು ಧ್ರುವೀಕರಣ ಇಂತಹ ಯಾವುದೇ ವಿಷಯಗಳನ್ನು ಮತದಾರರ ಮುಂದೆ ಪ್ರಸ್ತಾಪಿಸದೆ ಕೇವಲ ಮೋದಿ ಮತ್ತು ಅಭಿವೃದ್ಧಿ ಮಂತ್ರವನ್ನು ಪಠಿಸುತ್ತಿದ್ದಾರೆ.

ಸಾಮಾನ್ಯವಾಗಿ ಬಿಜೆಪಿ ಚುನಾವಣಾ ಸಂದರ್ಭದಲ್ಲಿ ಹಿಂದುತ್ವ ಹಾಗೂ ಒಂದು ಸಮುದಾಯದವರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟಲು ಕೆಲವು ಭಾವನಾತ್ಮಕ ಅಸ್ತ್ರಗಳನ್ನು ಬಳಸುತಿತ್ತು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಎಲ್ಲ ವಿಷಯಗಳು ಕೈ ಕೊಟ್ಟಿದ್ದರಿಂದ ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ.

ಹಿಂದಿನ ಚುನಾವನೆಯಲ್ಲಿ ಸಾವರ್ಕರ್, ಟಿಪ್ಪು, ಹಿಜಾಬ್, ಹಲಾಲ್, ಜಟ್ಕಾ, ಆಝಾನ್, ಮೀಸಲಾತಿ, ಪಠ್ಯ ಬದಲಾವಣೆ, ವ್ಯಾಪಾರ ಬಹಿಷ್ಕಾರದ ಸದ್ದು ಜೋರಾಗಿತ್ತು. ಬಿಜೆಪಿಯ ನಾಯಕರು ಹಿಂದುತ್ವದ ಕುರಿತಾಗಿ ನೀಡುತ್ತಿದ್ದ ಹೇಳಿಕೆಗಳು, ಆರೋಪ ಪ್ರತ್ಯಾರೋಪಗಳು ಚುನಾವಣಾ ಬಿಸಿಯನ್ನು ಏರಿಸಿತ್ತು. ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳೀನ್‍ಕುಮಾರ್ ಕಟೀಲ್ ಅವರು 2023ರ ವಿಧಾನಸಭೆ ಚುನಾವಣೆಯನ್ನು ಸಾರ್ವಕರ್ ವರ್ಸಸ್ ಟಿಪ್ಪು ನಡುವಿನ ಚುನಾವಣೆ ಎಂದೇ ಬಿಂಬಿಸಿದ್ದರು.

ಇದಕ್ಕೆ ಸಿ.ಟಿ.ರವಿ, ಪ್ರತಾಪ್ ಸಿಂಹ, ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ಹಲವು ನಾಯಕರು ಸಾಥ್ ನೀಡಿದ್ದರು.ದಕ್ಷಿಣ ಕನ್ನಡ ಜಿಲ್ಲೆ, ಶಿವಮೊಗ್ಗದಲ್ಲಿ ನಡೆದ ಕೋಮು ಸಂಘರ್ಷ, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ, ಇದಕ್ಕೆ ಪ್ರತಿಕಾರವಾಗಿ ನಡೆದ ಫಾಝಿಲ್ ಹತ್ಯೆ ಪ್ರಕರಣ, ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ ಹಾಗೂ ಅದಕ್ಕೆ ಸಂಬಂಧಿಸಿದಂತೆ ನಡೆದ ಕೋಮು ಘರ್ಷಣೆಗಳು ಚುನಾವಣಾ ವಿಚಾರವಾಗಿದ್ದವು.

ಅಂದು ಸಚಿವರಾಗಿದ್ದ ಮುನಿರತ್ನ ಅವರು ಉರಿಗೌಡ ನಂಜೇಗೌಡ ಹೆಸರಿನಲ್ಲಿ ಸಿನಿಮಾವನ್ನು ತೆಗೆಯಲು ಸಿದ್ದರಾಗಿದ್ದರು. ಉರಿಗೌಡ – ನಂಜೇಗೌಡ ಹೆಸರನ್ನು ವೃಷಬಾದ್ರಿ ಪ್ರೊಡಕ್ಷನ್ ಬ್ಯಾನರ್‍ನಡಿ ನೊಂದಾಯಿಸಿಕೊಂಡು, ಕುರುಕ್ಷೇತ್ರ ಮಾದರಿಯಲ್ಲಿ ಅದ್ದೂರಿಯಾಗಿ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದರು. ಇದರ ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು. ಈ ಮೂಲಕ ವಿಧಾನಸಭೆ ಚುನಾವಣೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಂದುತ್ವದ ಆಧಾರಲ್ಲೇ ಬಿಜೆಪಿ ಎದುರಿಸಿತ್ತು.

ಕಾಂಗ್ರೆಸ್ ಗ್ಯಾರಂಟಿ ಘೋಷಣೆಗಳು, ಶೇ.40ರಷ್ಟು ಕಮಿಷನ್ ಆರೋಪ, ಕೋವಿಡ್ ಅಕ್ರಮಗಳ ಆರೋಪ, ಭ್ರಷ್ಟಾಚಾರ, ಅಭಿವೃದ್ದಿ ಹಿನ್ನಡೆ ಆರೋಪಗಳಿಗೆ, ಬಿಜೆಪಿ ಹಿಂದುತ್ವ ಉತ್ತರದ ಮೂಲಕ ತಿರುಗೇಟು ನೀಡಿತ್ತು. ಆದರೆ ಫಲಿತಾಂಶ ಬಿಜೆಪಿ ನಿರೀಕ್ಷಿಸಿದ ಮಟ್ಟಿಗೆ ಆಗಲಿಲ್ಲ. ಬದಲಾಗಿ 136 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ರಾಜ್ಯದಲ್ಲಿ ಅಭೂತಪೂರ್ವ ಗೆಲುವು ಸಾಸಿತ್ತು. ಈ ಫಲಿತಾಂಶದ ನಂತರದಲ್ಲಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು.

ಚುನಾವಣೆಯೂ ಮೊದಲು ಬಿಜೆಪಿಯ ಒಂದು ಬಣ ಹಿಂದುತ್ವ ಅಜೆಂಡಾಗೆ ವಿರೋಧ ವ್ಯಕ್ತಪಡಿಸಿತ್ತು. ಯಡಿಯೂರಪ್ಪ ಬಣಕ್ಕೆ ನೇರವಾಗಿ ಹಿಂದುತ್ವದ ಆಧಾರದಲ್ಲೇ ಚುನಾವಣೆಯನ್ನು ಎದುರಿಸುವ ತಂತ್ರಗಾರಿಕೆ ಸಮ್ಮತವಾಗಿರಲಿಲ್ಲ. ಆದರೆ ಇವರ ವಾದಕ್ಕೆ ಅಂದು ಮನ್ನಣೆ ಸಿಕ್ಕಿರಲಿಲ್ಲ ಎಂಬುವುದು ಗಮನಾರ್ಹ.

ತಂತ್ರಗಾರಿಕೆ ಬದಲಾಯಿಸಿದ ಬಿಜೆಪಿ:
ಇನ್ನು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಬದಲಾವಣೆ ಮಾಡಿದೆ. ಈ ಚುನಾವಣೆಯಲ್ಲಿ ಹಿಂದುತ್ವ ಚರ್ಚೆಯಲ್ಲಿದ್ದರೂ, ಅದು ಪ್ರಮುಖ ಅಜೆಂಡಾವಾಗಿ ಬಿಂಬಿತವಾಗುತ್ತಿಲ್ಲ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಪ್ರಮುಖ ಹಿಂದುತ್ವವಾದವನ್ನು ಪ್ರತಿಪಾದಿಸುತ್ತಿದ್ದ ಸಿ.ಟಿ.ರವಿ, ಪ್ರತಾಪಸಿಂಹ, ಅನಂತ್‍ಕುಮಾರ್ ಹೆಗಡೆಗೆ ಟಿಕೆಟ್ ಕೂಡ ನೀಡಿಲ್ಲ.

ಸಂವಿಧಾನದ ಬದಲಾವಣೆಯ ಬಗ್ಗೆ ಹೇಳಿಕೆ ನೀಡಿದ್ದ ಅನಂತ್ ಕುಮಾರ್ ಹೆಗಡೆಯನ್ನು ಸ್ವತಃ ಬಿಜೆಪಿ ನಾಯಕರು ವಿರೋಧಿಸಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಿನ್ನ ತಂತ್ರಗಾರಿಕೆಯ ಮೂಲಕ ಮತದಾರರ ಮನಗೆಲ್ಲುವ ಪ್ರಯತ್ನ ನಡೆಸುತ್ತಿದೆ. ಹಾಗಂತ ಪೂರ್ಣ ಪ್ರಮಾಣದಲ್ಲಿ ಹಿಂದುತ್ವ ಅಜೆಂಡಾವನ್ನು ಬಿಜೆಪಿ ಕಡೆಗಣಿಸಿಲ್ಲ.

ಸಮಯ ಸಂದರ್ಭ ಬಂದಾಗ ಈ ವಿಚಾರವನ್ನು ಮುನ್ನಲೆಗೆ ತರುತ್ತಿದೆ. ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ, ಅಲ್ಪಸಂಖ್ಯಾತರ ಪರವಾಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ನಡೆಸುತ್ತಿದೆ. ಆದರೆ, ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಲೋಕಸಭೆಯಲ್ಲಿ ಹಿಂದುತ್ವದ ಅಬ್ಬರ ಕಾಣುತ್ತಿಲ್ಲ.

ವಿಧಾನಸಭೆ ಸೋಲಿನ ಬಳಿಕ ಬಿಜೆಪಿಯಲ್ಲಿ ನಡೆದ ಆಂತರಿಕ ಪರಾಮರ್ಶೆಯಲ್ಲೂ ಸೋಲಿನ ಕಾರಣಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿತ್ತು. ಬಿಜೆಪಿಯ ತಂತ್ರಗಾರಿಕೆಯಲ್ಲಾದ ವೈಫಲ್ಯಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆಗಳು ನಡೆದಿದ್ದವು. ಪಕ್ಷದ ನಾಯಕತ್ವ ಎಲ್ಲಿ ಎಡವಿತ್ತು ಎಂಬ ನಿಟ್ಟಿನಲ್ಲಿಯೂ ವಿಮರ್ಶೆಗಳು ನಡೆದಿದ್ದವು. ಈ ಪೈಕಿ ಅತಿಯಾದ ಹಿಂದುತ್ವದ ಬಳಕೆಯೂ ಸೋಲಿಗೆ ಒಂದು ಕಾರಣ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.

ಇದರ ಪರಿಣಾಮವಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೊಂಚ ಭಿನ್ನ ತಂತ್ರಗಾರಿಕೆ ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ಸದ್ಯ ಚುನಾವಣೆಯ ಹೊಣೆಯು ಯಡಿಯೂರಪ್ಪನವರ ಹಿಡಿತಕ್ಕೆ ಬಂದಿರುವುದರಿಂದ ತಂತ್ರಗಾರಿಕೆಯಲ್ಲೂ ಬದಲಾವಣೆ ಕಾಣುತ್ತಿದೆ. ಈ ಬಾರಿ ಹಿಂದುತ್ವದ ಬದಲಾಗಿ ಒಕ್ಕಲಿಗ, ಲಿಂಗಾಯಿತ, ಜÁತಿ ಸಮೀಕ್ಷೆ ಚರ್ಚೆಗಳು ಮುನ್ನಲೆಗೆ ಬರುತ್ತಿರುವುದು ವಿಶೇಷ.

RELATED ARTICLES

Latest News