ಚೆಲುವನಾರಾಯಣ ಸ್ವಾಮಿಗೆ ಹರಕೆ ತೀರಿಸಿದ ಮಧ್ಯಪ್ರದೇಶ ಸಿಎಂ

ಮೇಲುಕೋಟೆ, ಜೂ.27- ಸಂಕಲ್ಪ ಈಡೇರಿಕೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ದಂಪತಿ ಸಮೇತ ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣ ಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿದರು.

ಆಂಧ್ರ ಪ್ರದೇಶದ ಶ್ರೀ ವೈಷ್ಣವ ಸಂತ ತ್ರಿದಂಡಿ ಶ್ರೀಮನ್ನಾರಾಯಣ ಜೀಯರ್ ಸಲಹೆಯಂತೆ ಮೈಸೂರಿನಿಂದ ರಸ್ತೆ ಮಾರ್ಗದಲ್ಲಿ ಆಗಮಿಸಿದ ಚೌಹಾಣ್ ದಂಪತಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮೈಸೂರು ಪೇಟ ತೊಡಿಸಿ ಬರಮಾಡಿಕೊಂಡರು.

ಚಿನ್ನಜೀಯರ್ ಸ್ವಾಮೀಜಿಯ ಶಾಖಾಮಠಕ್ಕೆ ಮೊದಲು ಭೇಟಿ ನೀಡಿದ ಶಿವರಾಜ್ ಸಿಂಗ್ ದಂಪತಿ ಅಲ್ಲಿನ ಆರಾಧ್ಯದೈವ ನಾರಾಯಣನಿಗೆ ಪೂಜೆ ಮಾಡಿ ಕಾಲ್ನಡಿಗೆಯಲ್ಲೇ ದೇವಾಲಯಕ್ಕೆ ತೆರಳಿ ಕ್ಷೇತ್ರದ ಯದುಗಿರಿಯ ಒಡೆಯ ಶ್ರೀ ಚೆಲುವ ನಾರಾಯಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದೇಶದ ಸುಭೀಕ್ಷೆಗಾಗಿ ಪ್ರಾರ್ಥಿಸಿದರು.

ಇದೇ ವೇಳೆ ಯದುಗಿರಿ ನಾಯಕಿ ಅಮ್ಮನವರು ಆಚಾರ್ಯರಾಮಾನುಜಚಾರ್ಯರು, ಮಣವಾಳ ಮಾಮುನಿ ಜೀಯರ್ ದರ್ಶನ ಮಾಡಿ ಬೆಟ್ಟ ಹತ್ತಿ ಯೋಗಾ ನರಸಿಂಹನ ದರ್ಶನ ಪಡೆದರು. ನನ್ನ ಮನಸ್ಸಿನ ನೋವನ್ನು ದೂರಮಾಡಿ ಸಂಕಲ್ಪ ಈಡೇರಿಸಿದ ಆರಾಧ್ಯದೈವದ ದರ್ಶನ ಮಾಡಿ ಅತ್ಯಂತ ಸಂತೋಷ ಹೊಂದಿದ್ದೇನೆ. ತಿರುಮಲೆಗೂ ಭೇಟಿ ನೀಡುತ್ತಿದ್ದು, ವೆಂಕಟೇಶ್ವರನ ದರ್ಶನ ಪಡೆಯುತ್ತೇನೆ.

ಕೊರೊನಾ ಬಾಧೆಯಿಂದ ದೇಶ ಮುಕ್ತವಾಗಲಿ ಎಂದು ಪ್ರಾರ್ಥಿಸುತ್ತೇನೆ. ಮೇಲುಕೋಟೆಗೆ ಆಗಾಗ್ಗೆ ಭೇಟಿ ನೀಡಲು ನಿರ್ಧಾರ ಮಾಡಿದ್ದೇನೆ ಎಂದು ಶಿವರಾಜ್‍ಸಿಂಗ್ ತಿಳಿಸಿದರು. ಬೆಳ್ಳಿ ರಥ ನಿರ್ಮಿಸಲು ಸಂಕಲ್ಪ: ಚೆಲುವ ನಾರಾಯಣಸ್ವಾಮಿಗೆ ಬೆಳ್ಳಿ ರಥ ನಿರ್ಮಿಸಿ ಕೊಡಲು ಸಂಕಲ್ಪ ಮಾಡಿದರು.

ಈ ಹಿಂದೆ ಅಧಿಕಾರ ಕಳೆದುಕೊಂಡಿದ್ದ ಶಿವರಾಜ್ ಸಿಂಗ್ ದಂಪತಿ ಸಮೇತರಾಗಿ ಕ್ಷೇತ್ರಕ್ಕೆ ಆಗಮಿಸಿದ್ದು, ಜೀಯರ್ ಮಠದಲ್ಲಿ ಪ್ರಸಾದ ಸ್ವೀಕರಿಸಿ ಚೆಲುವನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿ ಹರಕೆ ಮಾಡಿಕೊಂಡಿದ್ದರು. ಅವರ ಅಪೇಕ್ಷೆಯಂತೆ ಮತ್ತೆ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ಚೆಲುವ ನಾರಾಯಣಸ್ವಾಮಿಯ ಹರಕೆ ಪೂರೈಸಿದರು.

ಮುಖ್ಯಮಂತ್ರಿಗಳ ಕಾರ್ಯಕ್ರಮ ಯಶಸ್ಸಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರುಶುರಾಮ್, ಉಪವಿಭಾಗಾಧಿಕಾರಿ ಶೈಲಜ, ತಹಸೀಲ್ದಾರ್ ಪ್ರಮೋದ್ ಪಾಟೀಲ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ, ಮಠದ ಸ್ಥಳೀಯ ಶ್ರೀ ಕಾರ್ಯಕರ್ತ ಹರಿಕೃಷ್ಣಮಾಚಾರ್ಯ ಶ್ರಮಿಸಿದರು.