Homeಕ್ರೀಡಾ ಸುದ್ದಿಏಷ್ಯನ್‌ ಕ್ರೀಡಾಕೂಟಕ್ಕಾಗಿ ತಂಡದ ಆಯ್ಕೆ ವೇಳೆ TTFI ಸಂವಿಧಾನ ಉಲ್ಲಂಘಿನೆ : ಮನಿಕಾ ಬಾತ್ರಾ ಆರೋಪ

ಏಷ್ಯನ್‌ ಕ್ರೀಡಾಕೂಟಕ್ಕಾಗಿ ತಂಡದ ಆಯ್ಕೆ ವೇಳೆ TTFI ಸಂವಿಧಾನ ಉಲ್ಲಂಘಿನೆ : ಮನಿಕಾ ಬಾತ್ರಾ ಆರೋಪ

Manika Batra alleges TTFI violated rules in Asian Games selection

ನವದೆಹಲಿ, ಜೂ.26- ಮುಂಬರುವ ಐಚಿ-ನಗೋಯಾ ಏಷ್ಯನ್‌ ಕ್ರೀಡಾಕೂಟಕ್ಕಾಗಿ ಭಾರತೀಯ ಟೇಬಲ್‌ ಟೆನ್ನಿಸ್‌‍ ತಂಡದ ಆಯ್ಕೆ ವೇಳೆ ಟೇಬಲ್‌ ಟೆನಿಸ್‌‍ ಫೆಡರೇಷನ್‌ ಆಫ್‌ ಇಂಡಿಯಾ (ಟಿ ಟಿ ಎಫ್‌ ಐ) ತನ್ನದೇ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಭಾರತದ ಖ್ಯಾತ ಆಟಗಾರ್ತಿ ಮನಿಕಾ ಬಾತ್ರಾ ಇಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ, ತಂಡದ ಆಯ್ಕೆ ಸಂಪೂರ್ಣವಾಗಿ ನಿಯಮಾನುಸಾರ ನಡೆದಿದೆ ಎಂದು ಫೆಡರೇಷನ್‌ ಸ್ಪಷ್ಟಪಡಿಸಿದೆ.
31 ವರ್ಷದ ಮನಿಕಾ ಬಾತ್ರಾ ಅವರನ್ನು ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 4ರವರೆಗೆ ನಡೆಯಲಿರುವ ಏಷ್ಯನ್‌ ಕ್ರೀಡಾಕೂಟಕ್ಕೆ ಘೋಷಿಸಲಾದ 10 ಸದಸ್ಯರ ತಂಡದಲ್ಲಿ ಮೀಸಲು ಆಟಗಾರ್ತಿಯಾಗಿ ಮಾತ್ರ ಆಯ್ಕೆ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಮನಿಕಾ ಬಾತ್ರಾ, ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ನಿಯಮಾನುಸಾರ ನಡೆದಿದೆ ಎಂದು ಟಿಟಿಎಫ್‌ಐ ತಿಳಿಸಿದ್ದರೂ, ತಮ ಬಳಿ ಇರುವ ದಾಖಲೆಗಳ ಪ್ರಕಾರ ಒಂಬತ್ತು ಸದಸ್ಯರ ಆಯ್ಕೆ ಸಮಿತಿ ಏಷ್ಯನ್‌ ಕ್ರೀಡಾಕೂಟದ ತಂಡವನ್ನು ಅಂತಿಮಗೊಳಿಸಿದೆ ಎಂದು ಆರೋಪಿಸಿದ್ದಾರೆ.

ಟಿಟಿಎಫ್‌ಐ ಸಂವಿಧಾನದ 24(ಸಿ)(ಜೆ) ವಿಧಿಯ ಪ್ರಕಾರ ಯಾವುದೇ ಉಪಸಮಿತಿಯಲ್ಲಿ ಏಳು ಸದಸ್ಯರಿಗಿಂತ ಹೆಚ್ಚು ಇರಬಾರದು. ಆದರೆ ಒಂಬತ್ತು ಸದಸ್ಯರ ಸಮಿತಿ ತಮ ಭವಿಷ್ಯವನ್ನು ನಿರ್ಧರಿಸಿದೆ. ಆದರೂ ಆಯ್ಕೆ ಪ್ರಕ್ರಿಯೆ ಸಂವಿಧಾನ ಹಾಗೂ ನಿಯಮಗಳಿಗೆ ಸಂಪೂರ್ಣ ಅನುಗುಣವಾಗಿದೆ ಎಂದು ಹೇಳಲಾಗುತ್ತಿದೆ ಎಂದು ಮನಿಕಾ ಬಾತ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾನಸಿಕವಾಗಿ ಕುಗ್ಗಿದ್ದೇನೆ:
ಮಾಜಿ ಕಾಮನ್ವೆಲ್ತ್‌ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಹಾಗೂ ಮೂರು ಬಾರಿ ಒಲಿಂಪಿಯನ್‌ ಆಗಿರುವ ಮನಿಕಾ ಬಾತ್ರಾ, ಈ ವಿಚಾರವನ್ನು ಜನರೇ ನಿರ್ಧರಿಸಲಿ ಎಂದು ಹೇಳಿದ್ದಾರೆ.
ಈ ಹೋರಾಟದಿಂದ ನಾನು ಮಾನಸಿಕವಾಗಿ ತುಂಬಾ ಕುಗ್ಗಿದ್ದೇನೆ. ಸದ್ಯಕ್ಕೆ ನಾನು ನನ್ನ ಕತ್ತಿಯನ್ನು ಕೆಳಗಿಡುತ್ತಿದ್ದೇನೆ ಎಂದು ಅವರು ಭಾವನಾತಕವಾಗಿ ತಿಳಿಸಿದ್ದಾರೆ.

ಪ್ರಸ್ತುತ ಅಮೆರಿಕದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತದ ಪರವಾಗಿ ಆಡುತ್ತಿರುವುದರಿಂದ ಈಗ ತಮ ಸಂಪೂರ್ಣ ಗಮನ ಪಂದ್ಯಾವಳಿಯತ್ತವೇ ಇರುತ್ತದೆ ಎಂದು ಮನಿಕಾ ಹೇಳಿದ್ದಾರೆ.
ನನ್ನ ಮುಂದೆ ಈಗ ದೊಡ್ಡ ಜವಾಬ್ದಾರಿಯಿದೆ. ನಾನು ಭಾರತದ ಪರವಾಗಿ ಸ್ಪರ್ಧಿಸುತ್ತಿದ್ದೇನೆ. ಆದ್ದರಿಂದ ನನ್ನ ಸಂಪೂರ್ಣ ಗಮನ ಈಗ ನಡೆಯುತ್ತಿರುವ ಟೂರ್ನಿಯ ಮೇಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಆಯ್ಕೆಯಾದ ತಂಡಕ್ಕೆ ಶುಭ ಹಾರೈಸಿದ ಅವರು, ಆಯ್ಕೆಯಾದ ಎಲ್ಲ ಆಟಗಾರರಿಗೆ ಶುಭವಾಗಲಿ. ಭಾರತಕ್ಕೆ ಹೆಮೆ ತಂದುಕೊಡಿ ಎಂದು ಹೇಳಿದ್ದಾರೆ.2026ರ ಏಷ್ಯನ್‌ ಕ್ರೀಡಾಕೂಟದ ಮುಖ್ಯ ತಂಡದಲ್ಲಿ ಮನಿಕಾ ಬಾತ್ರಾಗೆ ಸ್ಥಾನ ಸಿಗದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿಂದೆ ಕೂಡ ಅವರು ಆಯ್ಕೆ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸ್ಥಿರತೆಯ ಬಗ್ಗೆ ಪ್ರಶ್ನೆ ಎತ್ತಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಟಿಟಿಎಫ್‌ಐ, ತನ್ನ ಆಯ್ಕೆ ನೀತಿಯ ಪ್ರಕಾರವೇ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.ಫೆಡರೇಷನ್‌ ಪ್ರಕಾರ, ಆಟಗಾರರ ಆಯ್ಕೆಯಲ್ಲಿ ರಾಷ್ಟ್ರೀಯ ಶ್ರೇಯಾಂಕಕ್ಕೆ ಶೇ.50, ವಿಶ್ವ ಶ್ರೇಯಾಂಕಕ್ಕೆ ಶೇ.40 ಹಾಗೂ ಆಯ್ಕೆ ಸಮಿತಿಯ ವಿವೇಚನೆಗೆ ಶೇ.10 ಅಂಕ ನೀಡಲಾಗಿದೆ.

ಮನಿಕಾ ಬಾತ್ರಾ ಅಂತರರಾಷ್ಟ್ರೀಯ ಮಹಿಳಾ ಸಿಂಗಲ್‌್ಸ ಶ್ರೇಯಾಂಕದಲ್ಲಿ ಭಾರತದ ಎರಡನೇ ಅತಿ ಉನ್ನತ ಶ್ರೇಯಾಂಕದ ಆಟಗಾರ್ತಿ ಆಗಿದ್ದರೂ, ದೇಶೀಯ ಟೂರ್ನಿಗಳಲ್ಲಿ ಭಾಗವಹಿಸದ ಕಾರಣ ಅವರ ರಾಷ್ಟ್ರೀಯ ಶ್ರೇಯಾಂಕ ಕುಸಿದಿದ್ದು, ಅದು ಆಯ್ಕೆಯ ಮೇಲೆ ಪರಿಣಾಮ ಬೀರಿದೆ ಎಂದು ಟಿಟಿಎಫ್‌ಐ ತಿಳಿಸಿದೆ.

ಏಷ್ಯನ್‌ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಮಹಿಳಾ ತಂಡವನ್ನು ಭಾರತದ ಅಗ್ರ ಶ್ರೇಯಾಂಕದ ಆಟಗಾರ್ತಿ ಹಾಗೂ ವಿಶ್ವದ 45ನೇ ಶ್ರೇಯಾಂಕದ ಶ್ರೀಜಾ ಅಕುಲಾ ಮುನ್ನಡೆಸಲಿದ್ದಾರೆ.
ತಂಡದಲ್ಲಿ ಯಶಸ್ವಿನಿ ಘೋರ್ಪಡೆ, ದಿಯಾ ಚಿತಾಲೆ, ಸುತೀರ್ಥಾ ಮುಖರ್ಜಿ ಮತ್ತು ಸಿಂಡ್ರೆಲಾ ದಾಸ್‌‍ ಸ್ಥಾನ ಪಡೆದಿದ್ದು, ಮನಿಕಾ ಬಾತ್ರಾ ಮತ್ತು ಸ್ವಸ್ತಿಕಾ ಘೋಷ್‌ ಅವರನ್ನು ಮೀಸಲು ಆಟಗಾರ್ತಿಯರಾಗಿ ಆಯ್ಕೆ ಮಾಡಲಾಗಿದೆ.

RELATED ARTICLES

Latest News