ನವದೆಹಲಿ, ಜೂ.26- ದೇಶಕ್ಕೆ ಆಮದು ಮಾಡಿಕೊಳ್ಳುವ ಔಷಧಿಗಳು ಕನಿಷ್ಠ 12 ತಿಂಗಳ ಉಳಿದಿರುವ ಶೆಲ್ಫ್ ಲೈಫ್ (ರೆಸಿಡ್ಯೂಲ್ ಸೆಲ್ಫ್ ಲೈಫ್) ಹೊಂದಿರಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಔಷಧ ನಿಯಮಗಳಲ್ಲಿ ತಿದ್ದುಪಡಿ ತರಲು ಕರಡು ಅಧಿಸೂಚನೆ ಪ್ರಕಟಿಸಿದೆ.
ಈ ಕ್ರಮದಿಂದ ರೋಗಿಗಳಿಗೆ ಸಮರ್ಪಕ ಬಳಕೆಯ ಅವಧಿ ಹೊಂದಿರುವ ಔಷಧಿಗಳು ಲಭ್ಯವಾಗಲಿದ್ದು, ಔಷಧ ಸರಬರಾಜು ಸರಪಳಿಯಲ್ಲಿನ ದಾಸ್ತಾನು ನಿರ್ವಹಣೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಜೂ. 22ರಂದು ಗೆಜೆಟ್ ಅಧಿಸೂಚನೆ ಮೂಲಕ ಸಾರ್ವಜನಿಕರ ಸಲಹೆ-ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ. ತಿದ್ದುಪಡಿಯಲ್ಲಿ, ಪ್ರಸ್ತುತ ಜಾರಿಯಲ್ಲಿರುವ ಆಮದು ಔಷಧಿಗಳು ಒಟ್ಟು ಶೆಲ್ಫ್ ಲೈಫ್ ಅನ್ನು ಶೇ.60ಕ್ಕಿಂತ ಹೆಚ್ಚು ಉಳಿದಿರಬೇಕು ಎಂಬ ನಿಯಮವನ್ನು ಬದಲಿಸಿ, ಆಮದು ಸಂದರ್ಭದಲ್ಲಿ ಕನಿಷ್ಠ 12 ತಿಂಗಳ ಶೆಲ್ಫ್ ಲೈಫ್ ಕಡ್ಡಾಯಗೊಳಿಸಲು ಪ್ರಸ್ತಾಪಿಸಲಾಗಿದೆ.
ಆದರೆ, ವಿಶೇಷ ಸ್ವರೂಪ ಹಾಗೂ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಜೈವಿಕ ಉತ್ಪನ್ನಗಳು (ಬೈಲಾಜಿಕಲ್ ಪ್ರೋಡಕ್ಟ್) ಮತ್ತು ರೇಡಿಯೊಫಾರ್ಮಾಸ್ಯುಟಿಕಲ್ಸ್ ಗಳಿಗೆ ಈಗಿರುವಂತೆ ಶೇ.60ಕ್ಕಿಂತ ಹೆಚ್ಚು ಉಳಿದ ಶೆಲ್ಫ್ ಲೈಫ್ ನಿಯಮವೇ ಮುಂದುವರಿಯಲಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಈ ತಿದ್ದುಪಡಿಯಿಂದ ಆಮದುಗೊಂಡ ಔಷಧಿಗಳನ್ನು ದೇಶದಾದ್ಯಂತ ವಿತರಿಸಿ, ಅವುಗಳ ಅವಧಿ ಮುಗಿಯುವ ಮುನ್ನವೇ ರೋಗಿಗಳಿಗೆ ತಲುಪಿಸಲು ಸಾಕಷ್ಟು ಸಮಯ ದೊರೆಯಲಿದೆ. ಇದರಿಂದ ರೋಗಿಗಳಿಗೆ ಸಮರ್ಪಕ ಬಳಕೆಯ ಅವಧಿಯ ಗುಣಮಟ್ಟದ ಔಷಧಿಗಳು ಲಭ್ಯವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸ ನಿಯಮದಿಂದ ಕಠಿಣ ಶೆಲ್ಫ್ ಲೈಫ್ ಷರತ್ತುಗಳಿಂದ ಉಂಟಾಗುತ್ತಿದ್ದ ಅನಗತ್ಯ ಔಷಧ ವ್ಯರ್ಥವಾಗುವಿಕೆ ಕಡಿಮೆಯಾಗಲಿದೆ. ಇದರ ಪರಿಣಾಮವಾಗಿ ಔಷಧ ದಾಸ್ತಾನು ನಿರ್ವಹಣೆ ಸುಧಾರಿಸಿ, ವೆಚ್ಚ ಕಡಿಮೆಯಾಗುವುದರ ಜೊತೆಗೆ ದೇಶದಲ್ಲಿ ಅಗತ್ಯ ಔಷಧಿಗಳ ಲಭ್ಯತೆ ಇನ್ನಷ್ಟು ಬಲವಾಗಲಿದೆ ಎಂದು ಸಚಿವಾಲಯ ತಿಳಿಸಿದೆ.
ಈ ತಿದ್ದುಪಡಿಯು ಆಮದು ಸಂದರ್ಭದಲ್ಲಿ ಅನ್ವಯಿಸುವ ಉಳಿದಿರುವ ಶೆಲ್ಫ್ ಲೈಫ್ ನಿಯಮಕ್ಕೆ ಮಾತ್ರ ಸೀಮಿತವಾಗಿದೆ. ಔಷಧಿಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ-1940 ಹಾಗೂ ಔಷಧ ನಿಯಮಗಳು-1945ರ ಇತರ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಈ ಕರಡು ಅಧಿಸೂಚನೆ ಕುರಿತು ಎಲ್ಲಾ ಸಂಬಂಧಿತ ವಲಯಗಳಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
