ಕೋಲ್ಕತ್ತಾ, ಜೂ. 26- ದಕ್ಷಿಣ ಕೋಲ್ಕತ್ತಾದ ತರಾತಲಾ ಪ್ರದೇಶದಲ್ಲಿರುವ ಗೋದಾಮಿನ ಮೇಲ್ಛಾವಣಿ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇಂದು ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳಡಿಯಿಂದ ಇನ್ನೂ ಎರಡು ಮೃತದೇಹಗಳನ್ನು ಹೊರತೆಗೆದಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಕಾರ್ಮಿಕರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಎರಡು ದಿನಗಳಾದರೂ ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಗುರುವಾರ ತಡರಾತ್ರಿ ಎರಡು ಮೃತದೇಹಗಳನ್ನು ಹೊರತೆಗೆದಿದ್ದರೂ, ಅವುಗಳ ಗುರುತು ಇನ್ನೂ ಪತ್ತೆಯಾಗಿಲ್ಲ.ರಾಜ್ಯ ಸರ್ಕಾರದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 19 ವರ್ಷದ ಮನ್ನು ಕುಮಾರ್ ಹಾಗೂ ಸಾಹಿಲ್ ಸರ್ದಾರ್ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಬಿಹಾರದ ಮುಂಗೇರ್ ಜಿಲ್ಲೆಯ ನಿವಾಸಿಯಾಗಿದ್ದ ಮನ್ನು ಕುಮಾರ್ ಅವರನ್ನು ಜೂ.24ರಂದು ಅವಶೇಷಗಳಡಿಯಿಂದ ರಕ್ಷಿಸಲಾಗಿತ್ತು. ನಿನ್ನೆ ರಾತ್ರಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದರೂ, ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ದುರಂತದಲ್ಲಿ ಮನ್ನು ಕುಮಾರ್ ಅವರ ಸಹೋದರ ಘೀ ಕುಮಾರ್ ಕೂಡ ಮೃತಪಟ್ಟಿದ್ದು, ಅವರ ತಂದೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಸ್ತುತ 18 ಮಂದಿ ಗಾಯಾಳುಗಳು ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ಇದ್ದು, ಎಲ್ಲರನ್ನೂ ರಕ್ಷಿಸುವವರೆಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಆದ್ಯತೆ ಸಾಧ್ಯವಾದಷ್ಟು ಜೀವಗಳನ್ನು ರಕ್ಷಿಸುವುದು ಹಾಗೂ ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ಒದಗಿಸುವುದಾಗಿದೆ. ಕಟ್ಟಡದ ಸ್ಥಿತಿ ಅತ್ಯಂತ ಅಪಾಯಕಾರಿಯಾಗಿದ್ದರೂ ರಕ್ಷಣಾ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಾನಿಗೊಳಗಾದ ಕಟ್ಟಡ ಇನ್ನೂ ಅಸ್ಥಿರವಾಗಿರುವುದರಿಂದ ರಕ್ಷಣಾ ಸಿಬ್ಬಂದಿ ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಕೋಲ್ಕತ್ತಾ ಪೊಲೀಸ್, ಭಾರತೀಯ ಸೇನೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ಬುಧವಾರದಿಂದಲೇ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಕಬ್ಬಿಣದ ಬೀಮ್‌ಗಳನ್ನು ಕತ್ತರಿಸಿ ಬೃಹತ್ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ತೆರವುಗೊಳಿಸಲಾಗುತ್ತಿದೆ.
ಅವಶೇಷಗಳಡಿ ಜೀವಂತ ವ್ಯಕ್ತಿಗಳಿರುವ ಸಾಧ್ಯತೆ ಪರಿಶೀಲಿಸಲು ವಿಶೇಷ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಮೊಬೈಲ್ ಫೋನ್‌ಗಳ ಟವರ್ ಸಿಗ್ನಲ್‌ಗಳ ಆಧಾರದ ಮೇಲೂ ಸಿಲುಕಿರುವವರ ಸ್ಥಳ ಪತ್ತೆಹಚ್ಚುವ ಪ್ರಯತ್ನ ನಡೆಯುತ್ತಿದೆ. ಎನ್‌ಡಿಆರ್‌ಎಫ್ ಮನವಿಯ ಮೇರೆಗೆ ಭಾರತೀಯ ರೈಲ್ವೆಯೂ ಇಂದು ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದೆ.
ಆಕ್ಸಿ-ಕಟ್ಟಿಂಗ್ ಯಂತ್ರಗಳನ್ನು ಹೊಂದಿರುವ ರೈಲ್ವೆ ಸಿಬ್ಬಂದಿ ತಿರುಚಿಕೊಂಡಿರುವ ಉಕ್ಕಿನ ರಚನೆಗಳನ್ನು ಕತ್ತರಿಸಿ ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.ಬುಧವಾರ ಮಧ್ಯಾಹ್ನ ತರಾತಲಾದ ಟ್ರಾನ್‌್ಸಪೋರ್ಟ್ ಡಿಪೋ ರಸ್ತೆಯಲ್ಲಿರುವ ಗೋದಾಮಿನ ಮೇಲ್ಛಾವಣಿ ಏಕಾಏಕಿ ಕುಸಿದ ಪರಿಣಾಮ ಒಳಗೆ ಕೆಲಸ ಮಾಡುತ್ತಿದ್ದ ಹಲವಾರು ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದರು. ದುರಂತದ ನಂತರ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
