ದುಬೈ, ಜೂ. 26- ಇರಾನ್ ಯುದ್ಧಕ್ಕೆ ಅಂತ್ಯ ಹಾಡುವ ಉದ್ದೇಶದಿಂದ ಮಾಡಿಕೊಂಡಿದ್ದ ಪ್ರಾಥಮಿಕ ಒಪ್ಪಂದದ ಬಗ್ಗೆ ಮತ್ತೆ ಆತಂಕಗಳು ವ್ಯಕ್ತವಾಗಿವೆ. ಹಾರ್ಮುಜ್ ಜಲಸಂಧಿಯ ಸಮೀಪ ಸರಕು ಹಡಗಿನ ಮೇಲೆ ದಾಳಿ ನಡೆದಿರುವ ವರದಿಯ ಬೆನ್ನಲ್ಲೇ, ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಸಾಗರ ಸಂಸ್ಥೆ ಹಡಗುಗಳಿಗೆ ಭದ್ರತಾ ಎಸ್ಕಾರ್ಟ್ ಒದಗಿಸುವ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಬ್ರಿಟನ್‌ನ ನೌಕಾಪಡೆ ಮೇಲ್ವಿಚಾರಣಾ ಸಂಸ್ಥೆ ಯುಕೆ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ನೀಡಿದ ಮಾಹಿತಿಯ ಪ್ರಕಾರ, ಒಮಾನ್ ಕರಾವಳಿಯ ಸಮೀಪ ಸಾಗುತ್ತಿದ್ದ ಸರಕು ಹಡಗಿಗೆ ಕ್ಷಿಪಣಿಯಂತಹ ವಸ್ತುವಿನಿಂದ ದಾಳಿ ನಡೆದಿದೆ ಎಂದು ಹಡಗು ವರದಿ ಮಾಡಿದೆ.
ಈ ಘಟನೆಗೆ ಕೆಲವೇ ಗಂಟೆಗಳ ಮೊದಲು, ಇರಾನ್ ಅನುಮೋದಿಸದ ಮಾರ್ಗಗಳಲ್ಲಿ ಸಂಚರಿಸುವ ಹಡಗುಗಳಿಗೆ ಸುರಕ್ಷತೆಯ ಭರವಸೆ ನೀಡಲಾಗುವುದಿಲ್ಲ ಎಂದು ತೆಹ್ರಾನ್ ಎಚ್ಚರಿಕೆ ನೀಡಿತ್ತು.ಹೆಸರನ್ನು ಬಹಿರಂಗಪಡಿಸದ ಅಮೆರಿಕದ ಇಬ್ಬರು ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ, ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರವನ್ನು ನಿಯಂತ್ರಿಸಲು ಇರಾನ್ ಸ್ಥಾಪಿಸಿರುವ ಪರ್ಷಿಯನ್ ಗಲ್ಫ್ ಸ್ಟ್ರೇಟ್ ಪ್ರಾಧಿಕಾರ, ತಾವು ನಿಗದಿಪಡಿಸಿರುವ ಮಾರ್ಗಗಳನ್ನು ಹೊರತುಪಡಿಸಿ ಬೇರೆ ಮಾರ್ಗಗಳಲ್ಲಿ ಸಂಚರಿಸುವ ಹಡಗುಗಳ ಸುರಕ್ಷತೆಗೆ ಯಾವುದೇ ಖಾತರಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅನುಮೋದಿಸದ ಮಾರ್ಗಗಳಲ್ಲಿ ಸಂಚರಿಸುವುದರಿಂದ ಉಂಟಾಗುವ ಪರಿಣಾಮಗಳಿಗೆ ಹಡಗಿನ ಮಾಲೀಕರು, ನಿರ್ವಾಹಕರು ಹಾಗೂ ಕ್ಯಾಪ್ಟನ್‌ಗಳೇ ಹೊಣೆಗಾರರು ಎಂದು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಮೂಲಗಳ ಪ್ರಕಾರ, ದಾಳಿಗೆ ಒಳಗಾದ ಹಡಗು ಸಿಂಗಾಪುರ ಧ್ವಜ ಹೊಂದಿರುವ ಎವರ್ ಲವ್‌ಲಿ ಎಂಬ ಸರಕು ಹಡಗಾಗಿದೆ. ಭದ್ರತಾ ಮೂಲಗಳ ಪ್ರಕಾರ, ಈ ಹಡಗಿನ ಮೇಲೆ ಡ್ರೋನ್ ಮೂಲಕ ದಾಳಿ ನಡೆದಿರುವ ಸಾಧ್ಯತೆ ಇದೆ.
ಈ ಕುರಿತು ಅಮೆರಿಕ ಸರ್ಕಾರದಿಂದ ತಕ್ಷಣದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಈ ತಿಂಗಳ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್, ಇರಾನ್ ಯುದ್ಧ ಅಂತ್ಯಗೊಳಿಸುವ ಹಾಗೂ ಹಾರ್ಮುಜ್ ಜಲಸಂಧಿಯನ್ನು ಪುನಃ ಮುಕ್ತಗೊಳಿಸುವ ಒಪ್ಪಂದವನ್ನು ಪಾಲಿಸದಿದ್ದರೆ, ಅಮೆರಿಕ ಮತ್ತೊಮೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು.
ಹಾರ್ಮುಜ್ ಜಲಸಂಧಿಯಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಸಾಗಣೆ ಹಾಗೂ ಪಶ್ಚಿಮ ಏಷ್ಯಾದ ಭದ್ರತಾ ಪರಿಸ್ಥಿತಿಯ ಬಗ್ಗೆ ಹೊಸ ಆತಂಕಗಳು ಮೂಡಿವೆ.
