Homeಕ್ರೀಡಾ ಸುದ್ದಿಏಷ್ಯನ್‌ ಗೇಮ್ಸ್ : ವಿವಾದ ನಡುವೆಯೂ ಬೆಳ್ಳಿ ಗೆದ್ದ ರೋಶಿಬಿನಾ ದೇವಿ

ಏಷ್ಯನ್‌ ಗೇಮ್ಸ್ : ವಿವಾದ ನಡುವೆಯೂ ಬೆಳ್ಳಿ ಗೆದ್ದ ರೋಶಿಬಿನಾ ದೇವಿ

ನಗೋಯಾ, ಸೆ.24 (ಪಿಟಿಐ): ಏಷ್ಯನ್‌ ಕ್ರೀಡಾಕೂಟದ ರಾಷ್ಟ್ರೀಯ ತಂಡಕ್ಕೆ ತಮ್ಮ ಆಯ್ಕೆಯ ಸುತ್ತಲಿನ ವಿವಾದವನ್ನು ಬದಿಗಿಟ್ಟು, ಸ್ಟಾರ್‌ ವುಶು ಕ್ರೀಡಾಪಟು ರೋಶಿಬಿನಾ ದೇವಿ ಬೆಳ್ಳಿ ಪದಕ ಗೆದ್ದಿದ್ದಾರೆ.ಮಹಿಳೆಯರ 60 ಕೆಜಿ ಸಾಂಡಾ ವಿಭಾಗದ ಫೈನಲ್‌ನಲ್ಲಿ ರೋಶಿಬಿನಾ ದೇವಿ ಚೀನಾದ ಪ್ರಬಲ ಆಟಗಾರ್ತಿ ಝಾಂಗ್‌ ಕ್ಸಿಯಾವೊಯು ವಿರುದ್ಧ 0-2 ಅಂತರದಲ್ಲಿ ಸೋಲನುಭವಿಸಿದರು.

ಆಯ್ಕೆ ಪ್ರಕ್ರಿಯೆಯಲ್ಲಿ ಯುವ ಆಟಗಾರ್ತಿ ದಿವ್ಯಾಂಶಿ ಚೌಧರಿ ವಿರುದ್ಧ ಸೋತಿದ್ದ ರೋಶಿಬಿನಾ, ಬಳಿಕ ಎದುರಾಳಿ ಆಟಗಾರ್ತಿಗೆ ಗಾಯವಾದ ಕಾರಣ ಏಷ್ಯನ್‌ ಕ್ರೀಡಾಕೂಟದ ತಂಡದಲ್ಲಿ ಸ್ಥಾನ ಪಡೆದಿದ್ದರು.ಭಾರತೀಯ ತಂಡದಿಂದ ಕೈಬಿಡಲ್ಪಟ್ಟ ಬಳಿಕ ದಿವ್ಯಾಂಶಿ, ರೋಶಿಬಿನಾ ತಮ್ಮನ್ನು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು.

2018ರ ಜಕಾರ್ತಾ-ಪಾಲೆಂಬಾಂಗ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಹಾಗೂ 2023ರ ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ರೋಶಿಬಿನಾಗೆ ಇದು ಮೂರನೇ ಏಷ್ಯನ್‌ ಕ್ರೀಡಾಕೂಟದ ಪದಕವಾಗಿದೆ. ಫೈನಲ್‌ಗೆ ತಲುಪುವ ಹಾದಿಯಲ್ಲಿ ಅವರು ವಿಯೆಟ್ನಾಂನ 2023ರ ವಿಶ್ವ ಚಾಂಪಿಯನ್‌ ನ್ಗುಯೆನ್‌ ಥಿ ಥು ಥುಯ್‌ ಅವರನ್ನು ಸೋಲಿಸಿದ್ದರು.

ಇತರ ಸ್ಪರ್ಧಿಗಳು ಪದಕ ಗೆಲ್ಲಲು ವಿಫಲರಾಗಿದ್ದ ಸಂದರ್ಭದಲ್ಲಿ ರೋಶಿಬಿನಾ ಭಾರತೀಯ ವುಶು ತಂಡಕ್ಕೆ ಸಂಭ್ರಮಿಸಲು ಕಾರಣರಾದರು.ಇತರ ಸಾಂಡಾ ಸ್ಪರ್ಧಿಗಳಾದ ಆರ್ಯನ್‌ (ಪುರುಷರ 56 ಕೆಜಿ) ಕ್ವಾರ್ಟರ್‌ ಫೈನಲ್‌ನಲ್ಲಿ ಸೋತರೆ, ಅಪರ್ಣಾ (ಮಹಿಳೆಯರ 52 ಕೆಜಿ) 16ರ ಸುತ್ತಿನಲ್ಲಿ ಹೊರಬಿದ್ದರು. ವಿಕ್ರಾಂತ್‌ ಬಲಿಯಾನ್‌ (ಪುರುಷರ 75 ಕೆಜಿ) ಮೊದಲ ಸುತ್ತಿನಲ್ಲೇ ಸೋಲನುಭವಿಸಿದರು.

ಭಾರತದ ಟಾವೊಲು ತಂಡವು ಯಾವುದೇ ಪದಕದ ಸುತ್ತು ತಲುಪಲು ಸಾಧ್ಯವಾಗಲಿಲ್ಲ. ಲಾಂಗ್ಲೆಂಟೊಂಬಿ ದೇವಿ ಹಂಜಬಾಮ್‌ ಮಹಿಳೆಯರ ನಾನ್‌ಕ್ವಾನ್‌ ಮತ್ತು ನಾಂಡಾವೊ ಸ್ಪರ್ಧೆಗಳಲ್ಲಿ ಒಟ್ಟು 18.839 ಅಂಕ ಗಳಿಸಿ ಒಂಬತ್ತನೇ ಸ್ಥಾನ ಪಡೆದರು.

ನ್ಯೆಮನ್‌ ವಾಂಗ್ಸು ಮಹಿಳೆಯರ ಚಾಂಗ್‌ಕ್ವಾನ್‌ ಸ್ಪರ್ಧೆಯಲ್ಲಿ 9.573 ಅಂಕಗಳೊಂದಿಗೆ 15ನೇ ಸ್ಥಾನ ಪಡೆದರು. ಪುರುಷರ ಚಾಂಗ್‌ಕ್ವಾನ್‌ ಫೈನಲ್‌ನಲ್ಲಿ ಸ್ಪರ್ಧಿಸಿದ ಸೂರಜ್‌ ಸಿಂಗ್‌ ಮಯಂಗ್ಲಂಬಮ್‌ 11ನೇ ಸ್ಥಾನ ಪಡೆದರು.

RELATED ARTICLES
spot_img

Latest News