Homeಕ್ರೀಡಾ ಸುದ್ದಿಏಷ್ಯನ್‌ ಗೇಮ್ಸ್‌: ಪುರುಷರ ಡಬಲ್‌ ಸ್ಕಲ್ಸ್‌ನಲ್ಲಿ ಭಾರತಕ್ಕೆ ಕಂಚು

ಏಷ್ಯನ್‌ ಗೇಮ್ಸ್‌: ಪುರುಷರ ಡಬಲ್‌ ಸ್ಕಲ್ಸ್‌ನಲ್ಲಿ ಭಾರತಕ್ಕೆ ಕಂಚು

ನಗೋಯಾ, ಸೆ.24 (ಪಿಟಿಐ): ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್‌ ಕ್ರೀಡಾಕೂಟದ ಪುರುಷರ ಡಬಲ್‌ ಸ್ಕಲ್ಸ್‌ ಸ್ಪರ್ಧೆಯಲ್ಲಿ ಭಾರತದ ರೋವರ್‌ಗಳಾದ ಸತ್ನಾಮ್‌ ಸಿಂಗ್‌ ಮತ್ತು ಸಲ್ಮಾನ್‌ ಖಾನ್‌ ಕಂಚಿನ ಪದಕ ಗೆದ್ದುಕೊಂಡರು.

ನಗರಗಾವಾ ಇಂಟರ್‌ನ್ಯಾಷನಲ್‌ ರೆಗಟ್ಟಾ ಕೋರ್ಸ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತೀಯ ಜೋಡಿ 1,500 ಮೀಟರ್‌ವರೆಗೆ ಎರಡನೇ ಸ್ಥಾನದಲ್ಲಿತ್ತು. ಆದರೆ ಅಂತಿಮ 500 ಮೀಟರ್‌ನಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು. ಅವರು 6:13.25 ನಿಮಿಷಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿದರು.

ಚೀನಾದ ಯಿ ಕ್ಸುಡಿ ಮತ್ತು ಯಿಡೆ ನೀ 6:09.37 ನಿಮಿಷಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರೆ, ಉಜ್ಬೇಕಿಸ್ತಾನದ ಪಾವೆಲ್‌ ಸೊರಿನ್‌ ಮತ್ತು ಮೆಖ್ರೊಜ್ಬೆಕ್‌ ಮಮತ್ಕುಲೋವ್‌ 6:10.49 ನಿಮಿಷಗಳೊಂದಿಗೆ ಬೆಳ್ಳಿ ಪದಕ ಗೆದ್ದರು.

ಭಾರತೀಯ ಜೋಡಿ ಚಿನ್ನದ ಪದಕ ವಿಜೇತರಿಗಿಂತ 3.88 ಸೆಕೆಂಡ್‌ ಹಿಂದುಳಿಯಿತು. ಸತ್ನಾಮ್‌ ಈ ಹಿಂದೆ ಹ್ಯಾಂಗ್‌ಝೌ ಏಷ್ಯನ್‌ ಕ್ರೀಡಾಕೂಟದ ಪುರುಷರ ಕ್ವಾಡ್ರಪಲ್‌ ಸ್ಕಲ್ಸ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇದಕ್ಕೂ ಮುನ್ನ ಪುರುಷರ ಸಿಂಗಲ್‌ ಸ್ಕಲ್ಸ್‌ ಫೈನಲ್‌ನಲ್ಲಿ ಬಲ್‌ರಾಜ್‌ ಪನ್ವಾರ್‌ 6:54.80 ನಿಮಿಷಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿ ನಾಲ್ಕನೇ ಸ್ಥಾನ ಪಡೆದರು. ಇದರಿಂದ ಭಾರತ ಮತ್ತೊಂದು ರೋವಿಂಗ್‌ ಪದಕವನ್ನು ತಪ್ಪಿಸಿಕೊಂಡಿತು.

ಪನ್ವಾರ್‌ 500 ಮೀಟರ್‌, 1,000 ಮೀಟರ್‌ ಮತ್ತು 1,500 ಮೀಟರ್‌ ಹಂತಗಳಲ್ಲಿ ಎರಡನೇ ಸ್ಥಾನದಲ್ಲಿದ್ದರು. ಆದರೆ ಅಂತಿಮ 500 ಮೀಟರ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದರು. ಚೀನಾದ ಡೆಂಗ್‌ ಝಿವೇ 6:38.98 ನಿಮಿಷಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರು. ಪನ್ವಾರ್‌ ವಿಜೇತರಿಗಿಂತ 15.82 ಸೆಕೆಂಡ್‌ ಹಿಂದುಳಿದರು.

RELATED ARTICLES
spot_img

Latest News