ಬೆಂಗಳೂರು, ಫೆ.6- ಷೇರು ಮಾರುಕಟ್ಟೆ ಹಾಗೂ ಇತರೆ ಹೂಡಿಕೆಗಳಿಂದ ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ನಂಬಿಸಿ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸಿದ್ದ ಖತರನಾಕ್ ಅಂತಾರಾಷ್ಟ್ರೀಯ ಜಾಲವನ್ನು ಮಂಗಳೂರು ಪೊಲೀಸರು ಬೇಧಿಸಿದ್ದು, 11ಮಂದಿ ಭಾರತೀಯ ಆರೋಪಿಗಳನ್ನು ಬಂಧಿಸಿದ್ದಾರೆ. ಚೀನಾ ಹಾಗೂ ಇತರ ದೇಶಗಳ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ಮೂಲಕ ಸೈಬರ್ ಗುಲಾಮಗಿರಿ ಎಂಬ ಮತ್ತೊಂದು ದಂಧೆಯೂ ಬೆಳಕಿಗೆ ಬಂದಿದೆ.
ಮಂಗಳೂರು ಸೆನ್ ಕ್ರೈಂ ಪೊಲೀಸ್‌ಠಾಣೆಯಲ್ಲಿ ಜನವರಿ 19ರಂದು ಪ್ರಕರಣವೊಂದು ದಾಖಲಾಗಿತ್ತು. ಅದರಲ್ಲಿ ದೂರುದಾರರಿಗೆ 1.38 ಕೋಟಿ ರೂ.ಗಳನ್ನು ವಂಚಿಸಿದ್ದರು. ಪ್ರಕರಣದ ಬೆನ್ನತ್ತಿದ ಮಂಗಳೂರು ಪೊಲೀಸರಿಗೆ ಸೈಬರ್ ಅಪರಾಧದ ಬ್ರಹಾಂಡ ದರ್ಶನವಾಗಿದೆ. ಅಮಾಯಕರನ್ನು ಹೇಗೆಲ್ಲಾ ಬಲೆಗೆ ಕೆಡವಿ ವಂಚಿಸಲಾಗುತ್ತಿದೆ. ಭಾರತೀಯರನ್ನು ವಂಚಿಸಲು ಭಾರತೀಯರನ್ನೇ ಹೇಗೆ ಬಲವಂತವಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಈ ಪ್ರಕರಣದ ಅನುಭವದ ಆಧಾರದ ಮೇಲೆ ಒಂದಿಷ್ಟು ಸಲಹೆಗಳನ್ನು ಪೊಲೀಸರು ನೀಡಿದ್ದಾರೆ.
ನೇಪಾಳ, ಚೀನಾ, ಕಾಂಬೋಡಿಯಾ, ದುಬೈನಂತಹ ದೇಶಗಳಲ್ಲಿ ಕುಳಿತಿರುವ ಕಿಂಗ್ ಪಿನ್‌ಗಳು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ವಾಟ್ಸಪ್, ಟೆಲಿಗ್ರಾಮ್ ನಂತರ ಸಾಮಾಜಿಕ ಜಾಲತಾಣಗಳ ಮೂಲಕ ಅನಕ್ಷರಸ್ಥರನ್ನಷ್ಟೆ ಅಲ್ಲದೆ, ವಿದ್ಯಾವಂತರನ್ನೂ ಸಹ ಹೇಗೆ ವಂಚಿಸುತ್ತಿದ್ದಾರೆ ಎಂಬುದು ಅನಾವರಣಗೊಂಡಿದೆ.
ಮಂಗಳೂರಿನ ವ್ಯಕ್ತಿಯೊಬ್ಬರು ಫೇಸ್‌ಬುಕ್‌ನಲ್ಲಿ ಬಂದ ಸ್ಟಾಕ್ ಮಾರ್ಕೆಟ್ ಮಾಹಿತಿ ಆಧರಿಸಿ ಹೂಡಿಕೆ ಮಾಡಲು ಮುಂದಾಗಿದ್ದರು. ಅಲ್ಲಿನ ಲಿಂಕ್ ಕ್ಲಿಕ್ ಮಾಡಿದಾಗ ವಾಟ್ಸಪ್ ಗ್ರೂಪ್‌ಗೆ ಲಿಂಕ್ ಆಗಿದೆ. ಅದಕ್ಕೆ ಸೇರ್ಪಡೆಯಾದಾಗ ಬೇರೆ ನಂಬರ್ ನಿಂದ ಸಂದೇಶ ಬಂದು ಹೂಡಿಕೆ ಸಲಹೆಗಳನ್ನು ನೀಡಲಾಗಿದೆ. ಆರಂಭದಲ್ಲಿ 51.57 ಲಕ್ಷ ರೂಪಾಯಿ ಪಾವತಿಸಿದ್ದಾರೆ. ಅವರಿಗಾಗಿ ವೆಂಚುರಾ ಸೆಕ್ಯೂರಿಟೀಸ್‌ನಲ್ಲಿ ಪ್ರತ್ಯೇಕ ಖಾತೆ ಸ್ಥಾಪಿಸಲಾಗಿತ್ತು. ಇವರು ಹಣ ಹಾಕಿದ ಸ್ವಲ್ಪ ದಿನದಲ್ಲೇ ಅಕೌಂಟ್ ಬ್ಯಾಲೆನ್ಸ್ 6.92 ಕೋಟಿ ರೂ.ಎಂದು ತೋರಿಸಿದೆ. ಆದರೆ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗಿಲ್ಲ. ಸ್ನೇಹಿತರ ಬಳಿ ಕೇಳಿದಾಗ ತಮಗೆ ಇದೇ ರೀತಿ ಹಣ ಸಿಕ್ಕಿದೆ ಎಂದು ಹೇಳಿದ್ದಾರೆ. ಕಂಪನಿಯವರ ಬಳಿ ವಿಚಾರಿಸಿದಾಗ ಸರ್ವಿಸ್ ಚಾರ್ಜ್ ಎಂದು ಮತ್ತೆ 45 ಲಕ್ಷ ರೂ.ಹಾಕಿ ಎಂದಿದೆ. ಅನುಮಾನ ಬಂದು ಅಂತರ್ಜಾಲದಲ್ಲಿ ಹುಡುಕಾಡಿದಾಗ ಸದರಿ ಲಿಂಕ್ ವಂಚನೆ ಮಾರ್ಗ ಎಂಬುದು ತಿಳಿದು ಬಂದಿದೆ.
ಈ ಬಗ್ಗೆ ವಂಚನೆಗೆ ಒಳದಾದವರು ದೂರು ನೀಡಿದ್ದಾರೆ. ತನಿಖೆ ಆರಂಭಿಸಿದ ಮಂಗಳೂರು ಸೆನ್ ಕ್ರೈಂ ಪೊಲೀಸರು ನೇಪಾಳದಲ್ಲಿ ಕುಳಿತು ಭಾರತೀಯರನ್ನು ಗುರಿ ಮಾಡುತ್ತಿದ್ದ 16 ಮಂದಿ ವಂಚಕರ ಜಾಲದ ಸುಳಿವು ಕಂಡು ಹಿಡಿದಿದ್ದಾರೆ.
ಅವರಲ್ಲಿ ಗುಜರಾತ್‌ನ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಾಂಡ್‌ನ ಪುಪ್ಲ ಶಿವಕುಮಾರ ರಾವ್ (32), ರಾಜೀವ್ ರಂಜನ್ ಕುಮಾರ್ (30), ಮಿಥುನ್ ಕುಮಾರ್ ಮಂಗರಾಜ್ (38), ರಾಜೇಶ್ ಮಂಡನ್ (30), ಉತ್ತರ ಪ್ರದೇಶದ ಗೌರವ್ ಪಾಂಡೆ (24), ಹರ್ಷ ಮಿಸ್ರಾ (22), ನೌಶಾದ್ ಆಲಿ (34), ಮೊಹಮದ್ ಅಕೀಬ್ ಅಲಿ (27), ರಾಜಸ್ಥಾನದ ಓಂ ಪ್ರಕಾಶ್ ಯಾದವ್ (37) ರನ್ನು ಬಂಧಿಸಲಾಗಿದೆ. ಐದು ಮಂದಿ ಭಾರತೀಯ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ವಿದೇಶದಲ್ಲಿರುವ ಕಿಂಗ್ ಪಿನ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಇಂಟರ್ ಪೋಲ್ ಅನ್ನು ಸಂಪರ್ಕಿಸಲಾಗುತ್ತಿದೆ.
ಬಂಧಿತರಿಂದ ಒಂದು ಲ್ಯಾಪ್‌ಟಾಪ್, 21 ಮೊಬೈಲ್ ಫೋನ್‌ಗಳು, ತಲಾ 20 ವಿವಿಧ ಕಂಪನಿಯ ಸಿಮ್ ಕಾರ್ಡ್‌ಗಳು, ಬೇರೆ ಬೇರೆ ಬ್ಯಾಂಕ್ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ವಂಚನೆಯ ಬ್ರಹಾಂಡ:
ಕಾಂಬೋಡಿಯಾದಲ್ಲಿ ಹಾಗೂ ಇತರ ಕಡೆಗಳಲ್ಲಿ ಕುಳಿತಿರುವ ವಂಚಕರ ತಂಡ ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಲಾಗುತ್ತಿತ್ತು. ಸ್ಥಳೀಯ ಭಾಷೆಯಲ್ಲೇ ಮಾತನಾಡುವವರನ್ನು ಬಳಸಿಕೊಂಡು ಹೂಡಿಕೆದಾರರನ್ನು ಸೆಳೆಯುವುದು ಪ್ರಮುಖ ಕಾರ್ಯತಂತ್ರ. ಹೂಡಿಕೆದಾರರಿಗೆ ಹೆಚ್ಚಿನ ಲಾಭಾಂಶದ ಆಮಿಷವೊಡ್ಡಲಾಗುತ್ತಿತ್ತು. ಹೂಡಿಕೆದಾರರನ್ನು ಸೆಳೆಯುವವರಿಗೆ ಶೇ.5ರಿಂದ 10ರಷ್ಟು ಕಮಿಷನ್ ಹಾಗೂ ವಿದೇಶ ಪ್ರವಾಸದಂತಹ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿತ್ತು.
ದುಬೈ, ನೇಪಾಳದಂತಹ ಸ್ಥಳಗಳಿಗೆ ಕರೆಸಿಕೊಂಡು ನಿರ್ದಿಷ್ಟ ಸ್ಥಳದಲ್ಲಿ ವ್ಯವಸ್ಥೆ ಮಾಡಿ ಅಲ್ಲಿಂದಲೇ ವಂಚನೆ, ಹಣ ವರ್ಗಾವಣೆಯಂತಹ ಕೃತ್ಯಗಳನ್ನು ಮಾಡಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ವಂಚನೆ ಮಾಡುವವರು ತಮದೇ ಸಿಮ್ ಕಾರ್ಡ್‌ಗಳನ್ನು ಬಳಸುವಂತೆ ಮಾಡಲಾಗುತ್ತಿತ್ತು. ಹಣ ವರ್ಗಾವಣೆಗೂ ಇದೇ ಫೋನ್ ನಂಬರುಗಳ ಬಳಕೆಯಾಗುತ್ತಿದ್ದವು. ಭಾರತೀಯ ಹೂಡಿಕೆದಾರರನ್ನು ವಂಚಿಸಿ ಕಬಳಿಸಿದ್ದ ಹಣವನ್ನು ಡಾಲರ್ ಆಗಿ ಪರಿವರ್ತಸಿ ಚೀನಾ ಹಾಗೂ ಇತರೆಡೆಗಳಲ್ಲಿ ಕುಳಿತಿರುವ ಕಿಂಗ್ ಪಿನ್‌ಗಳಿಗೆ ಕಳುಹಿಸುವಂತೆ ಮಾಡಲಾಗಿತ್ತು.
ವಂಚಕರ ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದಿಂದ ಖಾತೆದಾರರು ಮತ್ತು ಏಜೆಂಟರನ್ನು ನೇಮಕ ಮಾಡಿಕೊಂಡು ಅವರಿಂದ ಹಣ ವರ್ಗಾವಣೆ ಮಾಡಿಸುತ್ತಿತ್ತು. ಹೂಡಿಕೆದಾರರನ್ನು ಸೆಳೆಯಲು ಒಂದು ತಂಡ, ವಂಚನೆಯಾದ ಹಣವನ್ನು ವರ್ಗಾವಣೆ ಮಾಡಲು ಬೇರೆ ತಂಡ ಕಾರ್ಯನಿರ್ವಹಿಸಿರುವುದು ಕಂಡು ಬಂದಿದೆ.
ಸೈಬರ್ ಸ್ಲೇವರಿ:
ಹಿಂದೆ ದುರ್ಬಲರು, ಅನಕ್ಷರಸ್ಥರನ್ನು ಸಾಂಪ್ರದಾಯಿಕ ಜೀತ ಪದ್ಧತಿಗೆ ಬಳಕೆ ಮಾಡಿಕೊಳ್ಳುತ್ತಿದ್ದದ್ದು ಸಾಮಾನ್ಯ. ಆಧುನಿಕ ಯುಗದಲ್ಲಿ ಸೈಬರ್ ಸ್ಲೇವರಿ (ಅಂತರ್ಜಾಲ ಗುಲಾಮಗಿರಿ) ಕಂಡು ಬಂದಿದೆ.
ವಿದೇಶದಲ್ಲಿ ಕೆಲಸ ಮಾಡುವ ಆಕಾಂಕ್ಷೆ ಹೊಂದಿರುವವರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಜಾಲ. ನಕಲಿ ಜಾಹೀರಾತು ಅಥವಾ ಏಜೆಂಟರ ಮೂಲಕ ಸಂಪರ್ಕ ಮಾಡುತ್ತಿತ್ತು. ಪ್ರವಾಸಿ ವಿಸಾದಲ್ಲಿ ಮಧ್ಯ ಪ್ರಾಚ್ಯ ದೇಶಗಳಿಗೆ ಕರೆದುಕೊಂಡು ಹೋಗಿ, ಅಲ್ಲಿ ಅವರ ಪಾಸ್‌ಪೋರ್ಟ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಕಸಿದುಕೊಂಡು ಗೊತ್ತಿರದ ಸ್ಥಳದಲ್ಲಿ ದಿಗ್ಭಂಧನದಲ್ಲಿರಿಸಿ ತಮ ವಂಚನೆಯ ಜಾಲಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಈ ರೀತಿಯ ಮಾಡರ್ನ್ ಗುಲಾಮಗಿರಿಗೆ ಸಿಲುಕಿದವರಿಗೆ ಸರಿಯಾದ ಆಹಾರ ನೀರು ನೀಡದೆ ಹಿಂಸೆ ನೀಡಿರುವುದು, ಎಲ್ಲಿಗೂ ಹೋಗಲು ಬಿಡದೆ, ಹೊರ ಜಗತ್ತಿನ ಸಂಪರ್ಕದಿಂದ ದೂರ ಇಟ್ಟಿರುವುದು ಬೆಳಕಿಗೆ ಬಂದಿದೆ. ವಿದೇಶಿ ಉದ್ಯೋಗಾಕಾಂಕ್ಷಿಗಳು ಅಧಿಕೃತವಾದ ಸಂಸ್ಥೆಯ
ಮೂಲಕವೇ ಅವಕಾಶ ಪಡೆದುಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
ವಂಚನೆ ಪ್ರಕರಣದಲ್ಲಿ ಭಾರತೀಯರು ಸಿಕ್ಕಿ ಬೀಳುತ್ತಿದ್ದು ವಿದೇಶದಲ್ಲಿರುವ ಕಿಂಗ್‌ಪಿನ್‌ಗಳು ಹಣ ಲಪಟಾಯಿಸಿ ಕಾನೂನು ಕ್ರಮದಿಂದ ನುಣುಚಿಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಗಡಿಗಳು ಮತ್ತು ಕಾನೂನುಗಳು ಕಿಂಗ್ ಪಿನ್‌ಗಳ ಬಂಧನಕ್ಕೆ ಅಡ್ಡಿ ಪಡಿಸುತ್ತಿವೆ. ಹಾಗಾಗಿ ವಂಚನೆಗೆ ಒಳಗಾಗುವವರು ಮತ್ತು ಜಾಲಕ್ಕೆ ಸಿಲುಕುವವರು ಎಚ್ಚರಿಕೆಯಿಂದ ಇರಬೇಕು. ವಂಚನೆಗೆ ಒಳಗಾದ ಒಂದು ಗಂಟೆಯ ಒಳಗೆ ಸೈಬರ್ ಕ್ರೈಂ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಲಾಗಿದೆ.
