Homeರಾಜ್ಯರಹಸ್ಯ ಸ್ಥಳದಿಂದ ವಿಡಿಯೋ ಹರಿಬಿಟ್ಟ ಆದಿತ್ಯರಾಜ್‌ ಕ್ಯಾಪಿಟಲ್‌‍ ಸಂಸ್ಥೆ ಮಾಲೀಕ ಬಲರಾಮ್‌ ಮಾನೆ

ರಹಸ್ಯ ಸ್ಥಳದಿಂದ ವಿಡಿಯೋ ಹರಿಬಿಟ್ಟ ಆದಿತ್ಯರಾಜ್‌ ಕ್ಯಾಪಿಟಲ್‌‍ ಸಂಸ್ಥೆ ಮಾಲೀಕ ಬಲರಾಮ್‌ ಮಾನೆ

Adityaraj Capital owner Balram Mane releases video from secret location

ಬೆಳಗಾವಿ,ಜೂನ್‌.7-ಆದಿತ್ಯರಾಜ್‌ ಕ್ಯಾಪಿಟಲ್‌‍ ಸಂಸ್ಥೆಯ ಮೇಲೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸಂಸ್ಥೆಯ ಮಾಲೀಕ ಬಲರಾಮ್‌ ಮಾನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿರುವುದು ಅಚ್ಚರಿ ಮೂಡುಸಿದೆ. ರಹಸ್ಯ ಸ್ಥಳದಿಂದಲೇ ವಿಡಿಯೋ ಮಾಡಿ ಹರಿಬಿಟ್ಟಿರುವ ಆತ, ತನ್ನ ಸಂಸ್ಥೆ ಕಾನೂನುಬದ್ಧವಾಗಿಯೇ ಕಾರ್ಯನಿರ್ವಹಿಸುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಾತನಾಡಿರುವ ಬಲರಾಮ್‌ ಮಾನೆ, ನಾವು ಯಾವುದೇ ನಿಯಮಗಳನ್ನು ಗಾಳಿಗೆ ತೂರಿ ಸಂಸ್ಥೆ ನಡೆಸುತ್ತಿಲ್ಲ, ಎಲ್ಲವೂ ಕಾನೂನು ಪ್ರಕಾರವೇ ನಡೆಯುತ್ತಿದೆ. ಠೇವಣಿದಾರರು ಯಾರೂ ಧೈರ್ಯ ಕಳೆದುಕೊಳ್ಳಬಾರದು. ನಿಮ ಬೆವರಿನ ಹಣ ನಮ್ಮ ಬಳಿ ಸುರಕ್ಷಿತವಾಗಿದೆ. ನಾವು ಪ್ರತಿಯೊಬ್ಬರಿಗೂ ಟಿಡಿಎಸ್‌‍ ಕಡಿತಗೊಳಿಸಿದ ನಂತರವೇ ಉಳಿತಾಯದ ಹಣ ಸಿಗಲಿದೆ ಎಂದು ಹೂಡಿಕೆದಾರರಿಗೆ ಭರವಸೆ ನೀಡಿದ್ದಾನೆ.

ನ್ಯಾಯಾಲಯದ ಮೇಲೆ ತನಗಿರುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಆತ, ನಾಳೆ ಈ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದಾಗ ನಾವು ಖಂಡಿತವಾಗಿ ವಿಜಯ ಸಾಧಿಸುತ್ತೇವೆ. ನಾನು ನಿಮಗಾಗಿಯೇ ಹೋರಾಡುತ್ತಿದ್ದೇನೆ. ಈ ಕಾನೂನು ಸಂಘರ್ಷದಲ್ಲಿ ಗೆದ್ದು ಆದಿತ್ಯರಾಜ್‌ ಕಂಪನಿ ಮತ್ತೆ ಪುಟಿದೇಳಲಿದೆ. ನಾನು ಶೀಘ್ರದಲ್ಲೇ ಹಿಂತಿರುಗಿ ಬರುತ್ತೇನೆ, ನಾವೆಲ್ಲರೂ ಮತ್ತೆ ಸಿಗೋಣ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ತಲೆಮರೆಸಿಕೊಂಡಿರುವ ಆರೋಪಿ ಬಲರಾಮ್‌ ಮಾನೆ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಕುರಿತು ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಬೆಳಗಾವಿ ನಗರ ಪೊಲೀಸ್‌‍ ಆಯುಕ್ತ ಭೂಷಣ್‌ ಜಿ. ಬೊರಸೆ ಅವರು,ಆರೋಪಿಯ ಬಂಧನಕ್ಕಾಗಿ ಈಗಾಗಲೇ ವಿಶೇಷ ಪೊಲೀಸ್‌‍ ತಂಡಗಳನ್ನು ರಚಿಸಲಾಗಿದ್ದು, ಬಲೆ ಬೀಸಲಾಗಿದೆ. ಶೀಘ್ರದಲ್ಲಿಯೇ ಬಲರಾಮ್‌ ಮಾನೆಯನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.

ಸದ್ಯ ಬಿಡುಗಡೆಯಾದ ವಿಡಿಯೂ ಹಲವು ಅನುಮಾನ ಮೂಡಿಸಿದೆ .ಪೊಲೀಸರು ಇದು ಎಲ್ಲಿಂದ ಅಪ್‌ ಲೋಡ್‌ ಆಗಿದೆ ಎಂಬುದ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಆದರೆ ಕಂಪನಿಯು ಸುಮಾರು 211 ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಿ ವಂಚಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಮದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್‌ ಹಾಗೂ ರಾಜಸ್ಥಾನ ರಾಜ್ಯಗಳ ಸುಮಾರು 6,500 ರಿಂದ 7,000 ಹೂಡಿಕೆದಾರರು ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ
ಬೆಳಗಾವಿಯ ಮುಖ್ಯ ಕಚೇರಿ ಮಾತ್ರವಲ್ಲದೆ ದಾಂಡೇಲಿ ಮತ್ತು ಹಳಿಯಾಳಗಳಲ್ಲೂ ಈ ಸಂಸ್ಥೆ ತನ್ನ ಶಾಖೆಗಳನ್ನು ಹೊಂದಿತ್ತು

ಹೂಡಿಕೆದಾರರನ್ನು ನಂಬಿಸಲು ಆಕ್ಸಿಸ್‌‍ ಸೆಕ್ಯುರಿಟೀಸ್‌‍ ಲಿಮಿಟೆಡ್‌‍ ಸಂಸ್ಥೆಗೆ ಲಿಂಕ್‌ ಆಗಿರುವಂತಹ ನಕಲಿ ಪ್ರಮಾಣಪತ್ರಗಳನ್ನು ನೀಡಲಾಗುತ್ತಿತ್ತು. ಸಹಕಾರ ಇಲಾಖೆ ಹಾಗೂ ಪೊಲೀಸರ ಜಂಟಿ ಅಧಿಕಾರಿಗಳ ತಂಡ ಭಾಗ್ಯನಗರದ ಕಚೇರಿಯ ಮೇಲೆ ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಕಚೇರಿಯನ್ನು ಸೀಜ್‌ ಮಾಡಿದೆ.

ತನಿಖೆ ತೀವ್ರಗೊಳ್ಳುತ್ತಿದ್ದಂತೆ ಕಂಪನಿಯ ಅಧಿಕೃತ ವೆಬ್‌ಸೈಟ್‌‍ ದಿಢೀರ್‌ ಸ್ಥಗಿತಗೊಳಿಸಲಾಗಿದೆ. ಪ್ರಕರಣ ಅಂತರ ರಾಜ್ಯಮಟ್ಟದಲ್ಲಿ ನಡೆದಿದ್ದು ಹೀಗಾಗಿ ಇದನ್ನು ಸಿಐಡಿಗೆ ಹಸ್ತಾಂತರ ಮಾಡಲು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.

RELATED ARTICLES

Latest News