ಬೆಂಗಳೂರು,ಮಾ.17- ಅಡುಗೆ ಅನಿಲದ ಪೂರೈಕೆಯಲ್ಲಿ ಉಂಟಾಗಿರುವ ಅಭಾವದ ಹಿನ್ನೆಲೆಯಲ್ಲಿ ಮಾ.29ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಸರ್ವಸದಸ್ಯರ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಮಾ. 29ರಂದು ಸಂಘದ ಸರ್ವ ಸದಸ್ಯರ ಸಭೆ ನಡೆಸಲು ತೀರ್ಮಾನಿಸಿ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸರ್ವ ಸದಸ್ಯರ ಸಭೆಯನ್ನು ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಲ್.ಶ್ರೀನಿವಾಸ್ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಜಿ.ಗಂಗಾಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆಯ ದಿನದಂದು ಉಪಹಾರ, ಊಟ ಒದಗಿಸಲು ಗುತ್ತಿಗೆ ಪಡೆದಿದ್ದ ಅಡುಗೆಯವರು ಸಹ ಅಡುಗೆ ಅನಿಲದ ಅಭಾವ ಉಂಟಾಗಿರುವುದನ್ನು ಸಂಘದ ಗಮನಕ್ಕೆ ತಂದಿದ್ದಾರೆ. ಸರ್ವ ಸದಸ್ಯರ ಸಭೆಗೆ ಸಂಘದ ಸಾವಿರಾರು ಸದಸ್ಯರು ಆಗಮಿಸುವ ನೀರೀಕ್ಷೆಯಿದ್ದು, ಊಟೋಪಚಾರದಲ್ಲಿ ಅಡಚಣೆ ಆಗಬಾರದು ಎಂಬ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರ್ವ ಸದಸ್ಯರ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ಸರ್ವ ಸದಸ್ಯರ ಸಭೆಯ ದಿನಾಂಕ ಮತ್ತು ಸ್ಥಳವನ್ನು ಶೀಘ್ರವಾಗಿ ಪ್ರಕಟಿಸಲಾಗುವುದು. ಕಾರಣಾಂತರಗಳಿಂದ ಸರ್ವ ಸದಸ್ಯರ ಸಭೆ ಮುಂದೂಡಿರುವುದಕ್ಕೆ ಸಂಘದ ಸದಸ್ಯರು ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
