Homeರಾಜಕೀಯನಾಳೆಯಿಂದ ವಿಧಾನಮಂಡಲ ಅಧಿವೇಶನ : ಆಡಳಿತ-ಪ್ರತಿಪಕ್ಷಗಳ ವಾಕ್ಸಮರಕ್ಕೆ ವೇದಿಕೆ ಸಿದ್ದ

ನಾಳೆಯಿಂದ ವಿಧಾನಮಂಡಲ ಅಧಿವೇಶನ : ಆಡಳಿತ-ಪ್ರತಿಪಕ್ಷಗಳ ವಾಕ್ಸಮರಕ್ಕೆ ವೇದಿಕೆ ಸಿದ್ದ

session from tomorrow: Stage set for war of words between ruling and opposition

ಬೆಂಗಳೂರು, ಆ.12- ನಾಳೆಯಿಂದ ವಿಧಾನ ಮಂಡಲದ ಉಭಯ ಸದನಗಳ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಏರ್ಪಡುವ ಸಾಧ್ಯತೆಗಳಿವೆ.ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ, ಕೆಲವೆಡೆ ಉಂಟಾಗಿರುವ ಅತಿವೃಷ್ಟಿ, ಬಿಡದಿ ಉಪನಗರ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ, ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿಚಾರ, ಬಿಎಂಐಸಿ ಯೋಜನೆ, ನೈಸ್‌‍ ಸಂಸ್ಥೆಯಿಂದ ನಿಯಮ ಬಾಹಿರವಾಗಿ ಟೋಲ್‌ ಸಂಗ್ರಹಿಸುತ್ತಿರುವ ಆರೋಪ, ಸಂಪುಟ ವಿಸ್ತರಣೆಯ ಅಸಮಾಧಾನ, ಖಾತೆ ಹಂಚಿಕೆ ವಿಳಂಬ ಮೊದಲಾದ ವಿಚಾರಗಳು ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪಗೊಂಡು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪ
ತಾರಕಕ್ಕೇರುವ ಸಾಧ್ಯತೆಗಳಿವೆ.

ರಾಜ್ಯ ಸರ್ಕಾರ ಹಾಗೂ ಆಡಳಿತಾರೂಢ ಕಾಂಗ್ರೆಸ್‌‍ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌‍ ಸಜ್ಜಾಗಿವೆ. ಅದೇ ರೀತಿ ಸರ್ಕಾರದ ಸಮರ್ಥನೆಗೆ ಕಾಂಗ್ರೆಸ್‌‍ ಪಕ್ಷವೂ ಕೂಡ ಸಿದ್ಧತೆ ನಡೆಸಿದೆ. ವಾಲೀಕಿ ಅಭಿವೃದ್ಧಿ ನಿಗಮದ ಹಣದ ಅವ್ಯವಹಾರದ ಆರೋಪ ಎದುರಿಸುತ್ತಿರುವ ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ಪ್ರತಿಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂಪುಟದಿಂದ ಕೈಬಿಡುವಂತೆ ಆಗ್ರಹಿಸುತ್ತಿದೆ. ಈ ವಿಚಾರವನ್ನು ಸದನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವುದಾಗಿ ಪ್ರಕಟಿಸಿದೆ.

ನಾಳೆಯಿಂದ ಆ.27ರವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಚಿವಾಲಯಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಇಂದು ಸಹ ವಿಧಾನಸೌಧದ ಸಿದ್ಧತಾ ಕಾರ್ಯ ಭರದಿಂದ ಸಾಗಿತ್ತು.

ನಿರೀಕ್ಷೆಯಂತೆ ಮೊದಲ ದಿನವಾದ ನಾಳೆ ಆರಂಭದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅನಂತರ ಸರ್ಕಾರದ ಅಧಿಕೃತ ಕಾರ್ಯಕಲಾಪಗಳು ನಡೆಯಲಿವೆ. ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ ಬರಪರಿಹಾರ ನೀಡುತ್ತಿಲ್ಲ. ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಈ ವಿಚಾರದಲ್ಲಿ ಪಕ್ಷ ಭೇದ ಮರೆತು ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಬಿಡದಿ ಉಪನಗರ ಯೋಜನೆ ವಿಚಾರದಲ್ಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟಿಸುತ್ತಿರುವ ವಿರೋಧ ಪಕ್ಷಗಳು ಪ್ರಮುಖವಾಗಿ ಈ ವಿಷಯ ಪ್ರಸ್ತಾಪಿಸಲಿವೆ. ಈ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದ ಕಾವೇರಿದ ದನಿಯಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಸಂಕಷ್ಟ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡಲು ಆದೇಶ ನೀಡಿರುವ ವಿಚಾರವೂ ಪ್ರತಿಧ್ವನಿಸಲಿದ್ದು, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹ ಕೇಳಿಬರಲಿದೆ.

ಅಲ್ಲದೆ, ಸಂಪುಟ ವಿಸ್ತರಣೆ ಬೆನ್ನಲ್ಲೆ ಕಾಂಗ್ರೆಸ್‌‍ನಲ್ಲಿ ಉಂಟಾಗಿರುವ ಅಸಮಾಧಾನ, ಖಾತೆ ಹಂಚಿಕೆ ವಿಳಂಬದ ವಿಚಾರವೂ ಸಂದರ್ಭೋಚಿತವಾಗಿ ಪ್ರಸ್ತಾಪವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಗ್ಯಾರಂಟಿ ಸವಲತ್ತುಗಳು ಫಲಾನುಭವಿಗಳಿಗೆ ಸಕಾಲದಲ್ಲಿ ತಲುಪದಿರುವುದು, ಅಭವೃದ್ಧಿ ಕಾರ್ಯಗಳಿಗೆ ಅನುದಾನ ನೀಡದ ಆರೋಪ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸೇರಿಂತೆ ನಾಡು ಎದುರಿಸುತ್ತಿರುವ ಹತ್ತು ಹಲವು ಜ್ವಲಂತ ಸಮಸ್ಯೆಗಳ ಮೇಲೆ ಶಾಸಕರು ಬೆಳಕು ಚೆಲ್ಲಿ ಸರ್ಕಾರದಿಂದ ಸೂಕ್ತ ಉತ್ತರ ಪಡೆಯುವ ಸಾಧ್ಯತೆಗಳಿವೆ.

ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಅಧಿವೇಶನ ಇದಾಗಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮಾಜಿ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾಗಿದೆ. ಹಾಗೆಯೇ ಶಾಸಕರಾಗಿದ್ದ ಕೆಲವರು ಸಚಿವರಾಗಿದ್ದಾರೆ. ಸಚಿವರಾಗಿದ್ದ ಕೆಲವರು ಮಾಚಿ ಸಚಿವರಾಗಿದ್ದಾರೆ. ಹೀಗಾಗಿ ಅವರ ಸ್ಥಾನಗಳು ಬದಲಾಗಿರುವುದರಿಂದ ಅಧಿವೇಶನ ತೀವ್ರ ಕುತೂಹಲ ಮೂಡಿಸಿದೆ.

RELATED ARTICLES
spot_img

Latest News