Homeರಾಜ್ಯಪಕ್ಷದಲ್ಲೇ ತೀವ್ರ ಅಸಮಾಧಾನ ಎದುರಿಸುತ್ತಿರುವ ಬಿ.ವೈ.ವಿಜಯೇಂದ್ರ ನಾಳೆ ಧರ್ಮಸ್ಥಳ ಭೇಟಿ

ಪಕ್ಷದಲ್ಲೇ ತೀವ್ರ ಅಸಮಾಧಾನ ಎದುರಿಸುತ್ತಿರುವ ಬಿ.ವೈ.ವಿಜಯೇಂದ್ರ ನಾಳೆ ಧರ್ಮಸ್ಥಳ ಭೇಟಿ

B.Y. Vijayendra to visit Dharmasthala tomorrow

ಬೆಂಗಳೂರು, ಜೂ.25- ಬಿಜೆಪಿಯಲ್ಲಿ ಅಡ್ಡಮತದಾನ ಆರೋಪದ ಸುತ್ತ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನಾಳೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ ಈ ಭೇಟಿ ಮಹತ್ವ ಪಡೆದುಕೊಂಡಿದ್ದು, ಪಕ್ಷದೊಳಗಿನ ಅಸಮಾಧಾನ ಮತ್ತು ಅಡ್ಡಮತದಾನ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.

ನಾಳೆ ಬೆಳಗ್ಗೆ ಸುಮಾರು 7 ಗಂಟೆಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿರುವ ವಿಜಯೇಂದ್ರ ಅವರು, ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆದಿದ್ದವು.

ಅಲ್ಲದೆ, ಅಡ್ಡಮತದಾನ ಮಾಡಿದರೆಂದು ಆರೋಪಿಸಲಾಗುತ್ತಿರುವ ಕೆಲವರಿಂದ ದೇವರ ಮುಂದೆ ಆಣೆ-ಪ್ರಮಾಣ ಮಾಡಿಸುವ ಆಲೋಚನೆಯೂ ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಅಂತಿಮವಾಗಿ ಯಾವುದೇ ಸಮೂಹ ಸಭೆ ಅಥವಾ ಆಣೆ-ಪ್ರಮಾಣ ಕಾರ್ಯಕ್ರಮವನ್ನು ನಡೆಸದೇ, ವಿಜಯೇಂದ್ರ ಅವರು ಒಬ್ಬರೇ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥನ ದರ್ಶನ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದಾಗಿ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳು ಮೂಡಿವೆ.

ದೆಹಲಿ ಪ್ರವಾಸದಲ್ಲಿರುವ ವಿಜಯೇಂದ್ರ ಅವರು ಇಂದು ರಾತ್ರಿ ನೇರವಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಲಿದ್ದಾರೆ. ನಾಳೆ ಬೆಳಗ್ಗೆ 7ರಿಂದ 8 ಗಂಟೆಯ ಅವಧಿಯಲ್ಲಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.ರಾಜ್ಯಸಭೆ ಹಾಗೂ ವಿಧಾನಪರಿಷತ್‌ ಚುನಾವಣೆ ವೇಳೆ ನಡೆದಿದೆ ಎನ್ನಲಾದ ಅಡ್ಡಮತದಾನದ ಸತ್ಯಾಸತ್ಯತೆ ತಿಳಿದುಕೊಳ್ಳುವ ಉದ್ದೇಶದಿಂದ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆ ಚರ್ಚೆ ನಡೆದಿತ್ತು.

ಸಭೆಯಲ್ಲಿ ಭಾಗವಹಿಸುವ ಶಾಸಕರಿಂದ ಆಣೆ-ಪ್ರಮಾಣ ಮಾಡಿಸುವ ಪ್ರಸ್ತಾವನೆಯೂ ಕೇಳಿಬಂದಿತ್ತು.ಆದರೆ, ಧಾರ್ಮಿಕ ಮತ್ತು ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದಲ್ಲಿ ರಾಜಕೀಯ ಸಭೆ ನಡೆಸುವುದು ಹಾಗೂ ಆಣೆ-ಪ್ರಮಾಣದಂತಹ ವಿಚಾರಗಳನ್ನು ಮುಂದಿಟ್ಟುಕೊಳ್ಳುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಪಕ್ಷದ ಹಿರಿಯ ನಾಯಕರಿಂದ ವ್ಯಕ್ತವಾಗಿತ್ತು.

ಇದಕ್ಕೆ ಪಕ್ಷದೊಳಗೇ ತೀವ್ರ ಆಕ್ಷೇಪ ವ್‌ಯಕ್ತವಾದ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಯೋಜನೆಗೆ ಬ್ರೇಕ್‌ ಬಿದ್ದಿದೆ. ಶಾಸಕರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುವ ಯೋಜನೆಯನ್ನು ಕೈಬಿಟ್ಟಿರುವ ವಿಜಯೇಂದ್ರ ಅವರು, ವೈಯಕ್ತಿಕವಾಗಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ತೆರಳುತ್ತಿದ್ದಾರೆ.

ಮೂಲಗಳ ಪ್ರಕಾರ, ಅಡ್ಡಮತದಾನದ ಆರೋಪದ ಸತ್ಯಾಸತ್ಯತೆ ಹೊರಬರಲಿ ಹಾಗೂ ತಪ್ಪು ಮಾಡಿರುವವರು ಯಾರೇ ಆಗಿದ್ದರೂ ಅವರಿಗೆ ನ್ಯಾಯಯುತ ಶಿಕ್ಷೆ ಆಗಲಿ ಎಂಬ ಆಶಯದೊಂದಿಗೆ ವಿಜಯೇಂದ್ರ ಅವರು ಮಂಜುನಾಥ ಸ್ವಾಮಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿದ್ದಾರೆ. ರಾಜಕೀಯ ವಿವಾದಗಳ ಮಧ್ಯೆ ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿಯೂ ಕುತೂಹಲ ಮೂಡಿಸಿದೆ.

RELATED ARTICLES

Latest News