ಬೆಂಗಳೂರು,ಸೆ.23-ಕಡಿಮೆ ಬೆಲೆಗೆ ಸೆಕೆಂಡ್ಹ್ಯಾಂಡ್ ಕಾರುಗಳು ಸಿಗುತ್ತವೆಂದು ಖರೀದಿಸಬೇಡಿ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ವಿಲ್ಸನ್ಗಾರ್ಡನ್ ಮತ್ತು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ 24 ಕಾರುಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ವಿವರಣೆ ನೀಡುತ್ತಾ ಮಾತನಾಡಿದರು.
ಒಂದು ವೇಳೆ ಅಂತಹ ಕಾರುಗಳನ್ನು ಖರೀದಿಸಿದರೆ ಅದರ ದಾಖಲೆಗಳು ಅಸಲಿಯೇ ಅಥವಾ ನಕಲಿಯೇ ಎಂಬುವುದನ್ನು ಖಚಿತ ಪಡಿಸಿಕೊಳ್ಳಿ. ಈ ಬಗ್ಗೆ ಅನುಮಾನ ಬಂದರೆ ಆರ್ಟಿಓ ಕಚೇರಿಗೆ ಹೋಗಿ ದಾಖಲೆಗಳನ್ನು ತೋರಿಸಿ ಅಸಲಿ ಎಂದು ಕಂಡು ಬಂದರೆ ನಂತರ ಖರೀದಿಸಿ ಎಂದು ಸಲಹೆ ನೀಡಿದರು.
ಕಡಿಮೆ ಬೆಲೆಗೆ ಕಾರು ಸಿಗುತ್ತದೆ ಎಂದು ಸಾರ್ವಜನಿಕರು ಖರೀದಿಸಿ ಮೋಸ ಹೋಗದಿರಿ, ಒಂದು ವೇಳೆ ಕಳ್ಳರು ಕಡಿಮೆ ಬೆಲೆಗೆ ನೀಡುವ ವಾಹನ ಖರೀದಿಸಿದರೆ ಮುಲಾಜಿಲ್ಲದೆ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ನಾವು ನಕಲಿ ಆರ್ಸಿ, ನಕಲಿ ನಂಬರ್ ಪ್ಲೇಟ್ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯುತ್ತೇವೆ ಎಂದು ಇದೇ ವೇಳೆ ಆಯುಕ್ತರು ಹೇಳಿದರು.
ಕಾರುಗಳ ಆರ್ಸಿ, ಬ್ಯಾಂಕ್ ಎನ್ಓಸಿ ಹಾಗೂ ಸೀಲ್ಗಳನ್ನು ನಕಲು ಮಾಡಿ ಸಾರ್ವಜನಿಕರಿಗೆ ಮಾರಾಟ :
ಕಾರುಗಳ ಆರ್ಸಿ, ಬ್ಯಾಂಕ್ ಎನ್ಓಸಿ ಹಾಗೂ ಸೀಲ್ಗಳನ್ನು ನಕಲು ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರನ್ನು ವಿಲ್ಸನ್ಗಾರ್ಡ್ನ್ ಠಾಣೆ ಪೊಲೀಸರು ಬಂಧಿಸಿ 2 ಕೋಟಿ ಮೌಲ್ಯದ 10 ಕಾರುಗಳು ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಜ್ಞಾನಭಾರತಿಯ ಸೋಮೇಶ (48), ಹೇರೋಹಳ್ಳಿಯ ಸಂತೋಷ (42) ಮತ್ತು ಬನ್ನೇರುಘಟ್ಟದ ಪ್ರಭಾಕರ (43) ಬಂಧಿತ ಆರೋಪಿಗಳು. ಈ ಮೂವರು ಸೇರಿಕೊಂಡು ಕಳವು ವಾಹನಗಳಿಗೆ ನಕಲಿ ಆರ್ಸಿ, ಬ್ಯಾಂಕ್ ಎನ್ಓಸಿ ಮಾಡಿಸುತ್ತಿದ್ದರು. ಅಲ್ಲದೇ ಲೋನ್ ಇರುವಂತಹ ಕಾರುಗಳಿಗೂ ನಕಲಿ ಆರ್ಸಿ ಮಾಡಿಸುತ್ತಿದ್ದರು. ಅಲ್ಲದೇ ಇನ್ನೂ ಕೆಲವು ಕಾರುಗಳಿಗೆ ನಕಲಿ ನಂಬರ್ ಪ್ಲೇಟ್ ಹಾಕಿ ಮಾರಾಟ ಮಾಡುತ್ತಿದ್ದುದ್ದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಉಮರ್ ನಗರದ ಮೆಹಬೂಬ್ ಲೇಔಟ್ ನಿವಾಸಿಯೊಬ್ಬರಿಗೆ ಪರಿಚಯವಿರುವ ಕಾರ್ ಡೀಲರ್ರೊಬ್ಬರು ತನ್ನ ಬಳಿ ಟಯೋಟಾ ಫಾರ್ಚುನರ್ ಕಾರ್ ಇರುವುದಾಗಿ ತಿಳಿಸಿ ಅದರ ಫೋಟೋಗಳನ್ನು ವ್ಯಾಟ್್ಸಆ್ಯಪ್ಗೆ ಕಳುಹಿಸಿದ್ದನು.ಅಂದು ಕಾರನ್ನು ತೋರಿಸುವುದಾಗಿ ಹೇಳಿ ಸಹಚರನೊಂದಿಗೆ ಬಂದು 20 ಸಾವಿರ ಹಣವನ್ನು ಫೋನ್ ಪೇ ಮುಖಾಂತರ ಮುಂಗಡ ಹಣ ಪಡೆದುಕೊಂಡಿದ್ದಾನೆ.
ನಂತರ ವಿಲ್ಸನ್ಗಾರ್ಡ್ನ್ ಪಾರ್ಕ್ವೊಂದರ ಬಳಿ ಕಾರನ್ನು ತಂದು ಆರ್.ಸಿ ಕಾರ್ಡ್ನೊಂದಿಗೆ ಕಾರನ್ನು ನೀಡಿ ಹೋಗಿದ್ದರು. ಕಾರು ಪಡೆದ ವ್ಯಕ್ತಿ ಆರ್.ಸಿ ಬುಕ್ಕನ್ನು ನೋಡಿದಾಗ ಅದು ನಕಲಿ ಎಂದು ತಿಳಿದು ತಾನು ಮೋಸ ಹೋಗಿರುವುದು ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಕಾರ್ ಡೀಲರ್ನ ಸಹಚರನೊಬ್ಬನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಇತರೆ ಸಹಚರರೊಂದಿಗೆ ಸೇರಿಕೊಂಡು, ಆರ್.ಸಿ ಕಾರ್ಡ್, ಬ್ಯಾಂಕಿನ ಎನ್ಓಸಿ ಹಾಗೂ ಸೀಲ್ಗಳನ್ನು ನಕಲಿ ಮಾಡಿ ಕಾರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿ ಡೀಲರ್ಗಳಿಗೆ ನೀಡುತ್ತಿದ್ದುದ್ದಾಗಿ ಬಾಯ್ಬಿಟ್ಟಿದ್ದಾನೆ.
ಈತನ ವಶದಿಂದ ನಕಲಿ ಆರ್ಸಿ ಕಾರ್ಡ್ಗಳು, ಕಾರ್ಡ್ಗಳನ್ನು ಮಾಡುವ ಯಂತ್ರ ಮತ್ತು ಸರ್ಕಾರಿ ಕಚೇರಿ,ಅಧಿಕಾರಿಗಳ ಸೀಲ್ಗಳು, ಸ್ಟಾಂಪ್ ಪೇಪರ್ಗಳು, ಕಂಪ್ಯೂಟರ್, ಪ್ರಿಂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.ತನಿಖೆ ಮುಂದುವರೆಸಿದ ಪೊಲೀಸರು ಕಾರ್ ಡೀಲರ್ ಮತ್ತು ಆತನ ಇತರೆ ಸಹಚರರ ಬಗ್ಗೆ ಮಾಹಿತಿ ಪಡೆದುಕೊಂಡು ಮತ್ತೊಬ್ಬನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಈ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಹೇಳಿದ್ದಾನೆ.
ಕಾರುಗಳ ನಕಲಿ ಆರ್ಸಿ ಕಾರ್ಡ್ಗಳನ್ನು ಬಳಸಿಕೊಂಡು ವಂಚಿಸಿದ್ದ ಕಾರುಗಳನ್ನು ಮಾರಾಟ ಮಾಡುವ ಸಲುವಾಗಿ ಬಿಟಿಎಸ್ ರಸ್ತೆಯ ಖಾಲಿ ಜಾಗವೊಂದರಲ್ಲಿ ನಿಲ್ಲಿಸಿದ್ದ 9 ಕಾರುಗಳು, ದ್ವಿ-ಚಕ್ರ ವಾಹನ ಹಾಗೂ ನಕಲಿ ಆರ್ಸಿ ಕಾರ್ಡ್ಗಳನ್ನು ಜಪ್ತಿ ಮಾಡಿದ್ದಾರೆ.ಡಬ್ಬಲ್ ರೋಡ್ ಬಳಿ ಮತ್ತೊಬ್ಬನನ್ನು ವಶಕ್ಕೆ ಪಡೆಯುವಲ್ಲಿ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿಗಳ ತಂಡವು ಯಶಸ್ವಿಯಾಗಿರುತ್ತಾರೆ. ಕಾರ್ ಡೀಲರ್ ಮತ್ತು ಇತರೆ ಸಹಚರರು ತಲೆಮರೆಸಿಕೊಂಡಿದ್ದು, ಅವರುಗಳ ಪತ್ತೆ ಕಾರ್ಯ ಮುಂದುವರೆದಿದೆ.
ಕಾರ್ ಡೀಲರ್ ಸೆರೆ:1.51 ಕೋಟಿ ಮೌಲ್ಯ 14 ಕಾರುಗಳು ವಶ
ಬೆಂಗಳೂರು,ಸೆ.23-ಲೋನ್ ಇರುವ ವಾಹನಗಳನ್ನು ಕಡಿಮೆ ಬೆಲೆಗೆ ಅಡವಿಟ್ಟುಕೊಂಡು ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಹಾಗೂ ಅಡಮಾನ ವಿಟ್ಟುಕೊಂಡು ವಂಚಿಸುತ್ತಿದ್ದ ಕಾರ್ ಡೀಲರ್ನನ್ನು ಅನ್ನ ಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ 1.51 ಕೋಟಿ ಮೌಲ್ಯದ 14 ಕಾರುಗಳು ಸೇರಿದಂತೆ ಇನ್ನಿತರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಉಲ್ಲಾಳದ ನಿವಾಸಿ ಗುರು ಪ್ರಸಾದ್ (44) ಬಂಧಿತ ಆರೋಪಿ.
ಎನ್ಜಿಇಎಫ್ ಲೇಔಟ್ನ ನಿವಾಸಿಯೊಬ್ಬರು ಹೊಸ ಕಾರನ್ನು ಲೋನ್ನಲ್ಲಿ ಖರೀದಿಸಿದ್ದರು. ಹಣದ ಅವಶ್ಯಕತೆ ಇದ್ದುದ್ದರಿಂದ ಬೇರೊಬ್ಬರಿಗೆ ಕಾರನ್ನು ದಾಖಲೆಗಳ ಸಮೇತ ನೀಡಿ ಲೋನ್ ಕಟ್ಟಿ ಕೊಂಡು ಹೋಗುವಂತೆ ತಿಳಿಸಿ ದ್ದಾರೆ.ಕಾರು ಪಡೆದ ವ್ಯಕ್ತಿ ಲೋನ್ ಕಟ್ಟದೇ, ವಾಹನವನ್ನು ಹಿಂದಿರುಗಿ ಸಿಲ್ಲ. ಕಾರು ಮಾಲೀಕರು ಕಾರನ್ನು ಹಿಂದಿರುಗಿಸುವಂತೆ ಕೇಳಿದಾಗ ಅವರಿಗೆ ಹೆದರಿಸಿ ಮೋಸ ಮಾಡಿದ್ದಾನೆ.
ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಉಲ್ಲಾಳದ ವಿಶ್ವೇಶ್ವರಯ್ಯ ಲೇಔಟ್ನ ಆತನ ವಾಸದ ಮನೆಯಿಂದ ಗುರುಪ್ರಸಾದ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿ ಲೋನ್ ಇರುವ ವಾಹನಗಳನ್ನು ಕಡಿಮೆ ಬೆಲೆಗೆ ಅಡಮಾನ ಇಟ್ಟುಕೊಂಡು, ಅದೇ ವಾಹನ ಗಳನ್ನು ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಅಡಮಾನ ಅಥವಾ ಮಾರಾಟ ಮಾಡುತ್ತಿದ್ದುದ್ದಾಗಿ ತಿಳಿಸಿದ್ದಾನೆ.ಈತನಿಂದ ವಾಹನಗಳನ್ನು ಖರೀದಿ ಮಾಡಿರುವವರ ವಿವರ ಗಳನ್ನು ಪೊಲೀಸರಿಗೆ ನೀಡಿದ್ದಾನೆ.
ಆರೋಪಿಯ ಮಾಹಿತಿ ಮೇರೆಗೆ 14 ಕಾರುಗಳು, ಒಂದು ಗೂಡ್ಸ್ ವಾಹನ, 2 ಆಟೋರಿಕ್ಷಾ, 6 ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದ್ದು, ಇವುಗಳ ಒಟ್ಟು ಮೌಲ್ಯ 1.51 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.ಈ ಕಾರ್ಯಾಚರಣೆಯನ್ನು ಇನ್ಸ್ ಪೆಕ್ಟರ್ ಲತೇಶ್ ಕುಮಾರ್ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು.
