ಬರ್ಲಿನ್, ಸೆ.23- ತರಬೇತಿ ಹಾರಾಟ ಮುಗಿಸಿ ವಾಪಸ್ಸಾಗುತ್ತಿದ್ದ ಅಮೆರಿಕ ವಾಯುಪಡೆಯ ಎಫ್-16 ಯುದ್ಧವಿಮಾನವೊಂದು ಜರ್ಮನಿಯ ಪಶ್ಚಿಮ ಭಾಗದಲ್ಲಿರುವ ಸ್ಪಾಂಗ್ಡಾಹ್ಲೆಮ್ನಲ್ಲಿ ಪತನಗೊಂಡಿದೆ.ಇದು ಐದು ದಿನಗಳ ಅಂತರದಲ್ಲಿ ನಡೆದ ಎರಡನೇ ಎಫ್-16 ಯುದ್ಧವಿಮಾನ ಅಪಘಾತವಾಗಿದೆ. ಐದು ದಿನಗಳ ಹಿಂದೆ ಮಿಚಿಗನ್ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್ಗೆ ಸೇರಿದ ಎಫ್-16 ಯುದ್ಧವಿಮಾನ ಪತನಗೊಂಡಿತ್ತು.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಫೈಟರ್ ಪೈಲಟ್ ಜೆಟ್ನಿಂದ ಸುರಕ್ಷಿತವಾಗಿ ಹೊರಕ್ಕೆ ಜಿಗಿದಿದ್ದಾರೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಘಟನಾ ಸ್ಥಳದಲ್ಲಿ ತುರ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಮುಂದುವರಿದಿದೆ.
ಎಫ್-16 ಯುದ್ಧವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ನಾಲ್ಕು ಯುದ್ಧವಿಮಾನಗಳ ತಂಡದ ಭಾಗವಾಗಿತ್ತು. ಅಪಘಾತದ ಬಳಿಕ ಉಳಿದ ಮೂರು ಎಫ್-16 ವಿಮಾನಗಳು ರಮ್ಸ್ಟೈನ್ ಏರ್ಬೇಸ್ಗೆ ಮಾರ್ಗ ಬದಲಿಸಿ ಸುರಕ್ಷಿತವಾಗಿ ಇಳಿದಿವೆ. ಪೈಲಟ್ನ ಆರೋಗ್ಯ ಸ್ಥಿತಿ ಹಾಗೂ ಅಪಘಾತಕ್ಕೆ ಕಾರಣವಾದ ನಿಖರ ಪರಿಸ್ಥಿತಿಗಳ ಕುರಿತು ಅಮೆರಿಕ ಸೇನೆ ತಕ್ಷಣ ಹೆಚ್ಚಿನ ಮಾಹಿತಿ ನೀಡಿಲ್ಲ.
