ಬೆಂಗಳೂರು,ಫೆ.9- ಪ್ರಧಾನಿ ನರೇಂದ್ರಮೋದಿ ಅವರ ಭಾವಚಿತ್ರವನ್ನು ಬಳಸಿಕೊಂಡು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಹಾಗೂ ಒಳಸಂಚು ರೂಪಿಸಿ ಸುಳ್ಳು ಸುದ್ದಿ ಸೃಷ್ಟಿಸಿ ಪೋಸ್ಟರ್ ಅಂಟಿಸಿರುವ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಪದಾಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ದೂರು ನೀಡಿದೆ.
ಶಾಸಕ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಹಾಗೂ ಬೆಂಗಳೂರು ಕೇಂದ್ರಜಿಲ್ಲಾಧ್ಯಕ್ಷ ಸಪ್ತಗಿರಿಗೌಡ ಸೇರಿದಂತೆ ಮತ್ತಿತರರು ಯುವ ಕಾಂಗ್ರೆಸ್ ಪದಾಧಿಕಾರಿಗಳು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಬೆಂಗಳೂರು ಸೆಂಟ್ರಲ್ ಡಿಸಿಪಿ ಅವರಿಗೆ ದೂರು ನೀಡಿದ ಬಿಜೆಪಿ ಮುಖಂಡರು, ಪ್ರಧಾನಿ ಮೋದಿಯವರ ಘನತೆಗೆ ಧಕ್ಕೆ ಉಂಟು ಮಾಡಿರುವ ಯುವ ಕಾಂಗ್ರೆಸ್ ಸದಸ್ಯರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆ ಧಕ್ಕೆ ತರುವ ದುರುದ್ದೇಶದಿಂದ ಪ್ರಧಾನಮಂತ್ರಿಗಳ ಭಾವಚಿತ್ರ ಬಳಸಿಕೊಂಡು ಸುಳ್ಳು ಸುದ್ದಿಯ ಪೋಸ್ಟರ್ ಹಾಕಿ ರಾಜಕೀಯ ದಂಗೆಗೆ ಪ್ರಚೋದಿಸುತ್ತಿದ್ದಾರೆ ಎಂದು ದೂರಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳಾದ ನರೇಂದ್ರಮೋದಿಜೀಯವರ ಭಾವಚಿತ್ರವನ್ನು ಬಳಸಿ, ದೇಶದ ಸಂಸತ್ತಿಗೆ ಬರಲು ಧೈರ್ಯವಿಲ್ಲದ ಪುಕ್ಕಲ ಪ್ರಧಾನಿ ದೇಶವನ್ನು ಹೇಗೆ ರಕ್ಷಿಸುತ್ತಾರೆ? ಎಂಬ ಬರಹವಿರುವ ಬ್ಯಾನರ್‌ನ್ನು ವಿಧಾನಸೌದದ ಮುಂದೆ ಹಾಕುವ ಮೂಲಕ ರಾಜ್ಯದಲ್ಲಿ ಕಾನೂನು ಸುವವ್ಯಸ್ಥೆಗೆ ಧಕ್ಕೆ ತಂದಿದ್ದಾರೆ.
ಪ್ರಧಾನಮಂತ್ರಿಗಳಿಗೆ ಅವಮಾನ ಮಾಡಿ ಸುಳ್ಳು ಸುದ್ದಿಯ ಬ್ಯಾನರ್ ಮೂಲಕ ತೇಜೋವಧೆ ಮಾಡಿ, ರಾಜ್ಯದಲ್ಲಿ ಆಶಾಂತಿ ಮತ್ತು ರಾಜಕೀಯ ದಂಗೆಗಳನ್ನು ಪ್ರಚೋದಿಸುತ್ತಿರುವ ಕರ್ನಾಟಕ ಪ್ರದೇಶ ಯುತ್ ಕಾಂಗ್ರೆಸ್ ಪಧಾದಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕಾಕೆಂದು ಒತ್ತಾಯಿಸಿದ್ದಾರೆ.
