ಬೆಂಗಳೂರು, ಮೇ 21: ಜಾಗತಿಕ ತಂತ್ರಜ್ಞಾನ ಆಧಾರಿತ ಸಂಸ್ಥೆಯಾದ ಬಾಷ್ ಕಂಪನಿ ಹಲವಾರು ಸವಾಲುಗಳ ನಡುವೆಯೂ ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ಬಾಷ್ ಇಂಡಿಯಾದ ಅಧ್ಯಕ್ಷ ಗುರುಪ್ರಸಾದ್ ಮುದ್ಲಾಪುರ್ ತಿಳಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಮಾರುಕಟ್ಟೆಯ ನಿಷ್ಕ್ರಿಯತೆಯ ನಡುವೆಯೂ ಉತ್ತಮ ಬೆಳವಣಿಗೆ ಕಂಡು ಬಂದಿದೆ. ಇದಕ್ಕೆ ವಾಹನ ವಿಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಬಾಷ್ ತಂತ್ರಜ್ಞಾನ ಬಳಕೆ ಹೆಚ್ಚಳವಾಗಿರುವುದು ಒಂದು ಕಾರಣ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2025-26 ಹಣಕಾಸು ವರ್ಷದಲ್ಲಿ ಅಸಾಧಾರಣ ಪ್ರಗತಿ ಸಾಧಿಸಿದ್ದು, ಒಟ್ಟಾರೆ ಶೇಕಡಾ 13ರಷ್ಟು ಬೆಳವಣಿಗೆ ಸಾಧಿಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಳೆದ ಸಾಲಿನೊಂದಿಗೆ ಹೋಲಿಸಿದರೆ ಶೇಕಡಾ 13ರಷ್ಟು ಹೆಚ್ಚಳವಾಗಿದೆ ಎಂದರು.
ನಮ್ಮ ಷೇರುದಾರರಿಗೆ ಲಾಭಾಂಶವಾಗಿ ಡಿವಿಡೆಂಡ್ ರೂಪದಲ್ಲಿ 270 ರೂ. ನಿಗದಿಪಡಿಸಲು ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಪ್ರಮುಖ ಬೆಳವಣಿಗೆಯಾಗಿ ನಾವು ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಹೆಚ್ಚು ಗಮನಹರಿಸಿದ್ದು, ಟಾಟಾ ಗ್ರೂಪ್‌ನೊಂದಿಗೆ ಈಗ ಒಪ್ಪಂದ ಮಾಡಿಕೊಂಡಿದ್ದೇವೆ. ಈ ವಾಹನಗಳಿಗೆ ಆಕ್ಸಲ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಇದಲ್ಲದೆ, ಚೆನ್ನೈ ಮೂಲದ ಟಿಸಿಎಫ್ ಜೊತೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು ವಿವಿಧ ವಲಯಗಳಲ್ಲಿ ನಮ್ಮ ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.
ಜಾಗತಿಕ ಮಟ್ಟದಲ್ಲಿ ನಮ್ಮ ಉತ್ಪನ್ನಗಳ ಬೇಡಿಕೆ ಹೆಚ್ಚಳವಾಗಿದೆ. ಆದರೆ ಮಧ್ಯಪ್ರಾಚ್ಯದಲ್ಲಿ ಸದ್ಯ ಎದ್ದಿರುವ ಉದ್ವಿಗ್ನತೆ ಮತ್ತು ಇತರೆ ಸವಾಲುಗಳ ನಡುವೆಯೂ ನಾವು ಪ್ರಗತಿ ಸಾಧಿಸಿರುವುದು ನಮ್ಮ ಅನುಭವಕ್ಕೆ ಸಾಕ್ಷಿ ಎಂದು ಹೇಳಿದರು.
ವಾಣಿಜ್ಯ ವಾಹನಗಳ ತಂತ್ರಜ್ಞಾನ ಬಳಕೆಯಲ್ಲಿ ಹಲವಾರು ಯೋಜನೆಗಳನ್ನು ಕೈಗೊಂಡಿದ್ದು, ಇದರಲ್ಲಿ ಹೈಡ್ರೋಜನ್ ಚಾಲಿತ ಟ್ರಕ್‌ಗಳ ತಯಾರಿಕೆ ಅಂತಿಮ ಹಂತಕ್ಕೆ ತಲುಪಿದೆ. ಈ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದೇವೆ ಎಂದು ಹೇಳಿದರು.
ಜಾಗತಿಕ ಆಟೋಮೊಬೈಲ್ ಕೇಂದ್ರವಾಗಿರುವ ಭಾರತ ವೇಗವಾಗಿ ಬೆಳೆಯುತ್ತಿದೆ. ನಾವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದು, ಪ್ರಮುಖವಾಗಿ ಚೀನಾದಂತಹ ದೇಶಗಳೊಂದಿಗೆ ಸ್ಪರ್ಧೆ ಹೆಚ್ಚಾಗಿದೆ ಎಂದು ಹೇಳಿದರು.
ಪ್ರಮುಖವಾಗಿ ಭಾರತದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸುರಕ್ಷತಾ ದೃಷ್ಟಿಯಿಂದ ಹೊಸ ತಂತ್ರಜ್ಞಾನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಹೈಡ್ರೋಜನ್ ತಂತ್ರಜ್ಞಾನ ಪ್ರಮುಖ ಕ್ಷೇತ್ರಗಳಾಗಿದ್ದು, ಅದರ ಗುರಿ ಸಾಧಿಸಲು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ಭೌಗೋಳಿಕ ಅನಿಶ್ಚಿತತೆಗಳು ಮತ್ತು ಅವುಗಳ ಪ್ರಭಾವಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇದ್ದೇವೆ ಎಂದರು. ನಮ್ಮ ಆಳವಾದ ತಾಂತ್ರಿಕ ಸಾಮರ್ಥ್ಯಗಳನ್ನು ಮತ್ತು ಸ್ಥಳೀಯ ಬದ್ಧತೆಯನ್ನು ಮತ್ತಷ್ಟು ಉತ್ತಮಪಡಿಸಲು ಮುಂದಾಗಿದ್ದೇವೆ ಎಂದು ಹೇಳಿದರು.
