ಬೆಂಗಳೂರು, ಮಾ.22- ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಎರಡೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಸಮರ್ಥ್ ಮಲ್ಲಿಕಾರ್ಜುನ್‌ಗೆ ಟಿಕೆಟ್ ನೀಡಿದರೆ, ಬಾಗಲಕೋಟೆಗೆ ಉಮೇಶ್ ಮೇಟಿ ಅಧಿಕೃತ ಅಭ್ಯರ್ಥಿಯಾಗಿದ್ದಾರೆ.
ಎರಡು ವಿಧಾನಸಭಾ ಉಪಚುನಾವಣೆಗಳನ್ನು ಆಡಳಿತಾರೂಢ ಕಾಂಗ್ರೆಸ್ ಪ್ರತಿಷೆ್ಠಯಕಣವಾಗಿ ಪರಿಗಣಿಸಿದೆ. ಗೆಲ್ಲಲೇಬೇಕೆಂಬ ಹಠದಿಂದ ಅಳೆದು ತೂಗಿ ಈ ಮೊದಲು ಶಾಸಕರಾಗಿದ್ದವರ ಕುಟುಂಬದ ಸದಸ್ಯರಿಗೆ ಉಪಚನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಶ್ಯಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾಲ್ಕು ಬಾರಿ ನಿರಂತರವಾಗಿ ಗೆಲ್ಲುವ ಮೂಲಕ ಪ್ರಬಲ ಹಿಡಿತ ಹೊಂದಿದ್ದರು. ಸದರಿ ಕ್ಷೇತ್ರದಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರರಾಗಿರುವ ಸಮರ್ಥ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಶ್ಯಾಮನೂರು ಕುಟುಂಬದ ಬಹುತೇಕ ಸದಸ್ಯರು ಚುನಾವಣಾ ರಾಜಕೀಯ ಅಖಾಡ ಪ್ರವೇಶಿಸಿದಂತಾಗಿದೆ.
ಈ ಮೊದಲು ಖುದ್ದು ಶ್ಯಾಮನೂರು ಶಿವಶಂಕರಪ್ಪ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದರು. ಅನಂತರ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಕೂಡ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಕಳೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈಗ ಮೂರನೇ ತಲೆಮಾರಾಗಿರುವ ಸಮರ್ಥ್‌ಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ವೈ.ಮೇಟಿ ಅವರ ಪುತ್ರ ಉಮೇಶ್ ಮೇಟಿಗೆ ಟಿಕೆಟ್ ನೀಡಲಾಗಿದೆ. ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಲು ಮೇಟಿ ಅವರ ಪುತ್ರಿ ಬಾಯಕ್ಕ ಹಾಗೂ ಉಮಾದೇವಿ ಅಕಾಂಕ್ಷಿಗಳಾಗಿದ್ದರು. ಮತ್ತೊಬ್ಬ ಪುತ್ರ ಮಲ್ಲಿಕಾರ್ಜುನ್ ಕೂಡ ಟಿಕೆಟ್ ಕೇಳಿದ್ದರು. ಹೆಣ್ಣು ಮಕ್ಕಳಿಗೆ ಟಿಕೆಟ್ ನೀಡುವುದರಿಂದ ಮೇಟಿ ಅವರ ಕುಟುಂಬದ
ಪರಂಪರೆ ಮುಂದುವರೆಯುವುದಿಲ್ಲ ಎಂಬ ವ್ಯಾಖ್ಯಾನ ಕುಟುಂಬದ ಸದಸ್ಯರಲ್ಲೇ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ತಮ ಕಚೇರಿಯಲ್ಲಿ ಕುಟುಂಬದ ಸದಸ್ಯರ ಜೊತೆ ಚರ್ಚೆ ಮಾಡಿ ಸಂಧಾನ ನಡೆಸಿದರು. ಬಾಗಲಕೋಟೆಯಲ್ಲಿ ಮೇಟಿಯವರ ಕುಟುಂಬ ಹೊರತಾಗಿ ಟಿಕೆಟ್ ನೀಡಬೇಕು ಎಂಬ ಆಗ್ರಹಗಳು ಕೇಳಿ ಬಂದಿದ್ದವು. ಆದರೆ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಮೇಟಿ ಅವರ ಕುಟುಂಬಕ್ಕೆ ಮಣೆ ಹಾಕಿದೆ.
ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 16 ರಿಂದ ಅಧಿಸೂಚನೆ ಹೊರಡಿಸಲಾಗಿತ್ತು. ನಾಳೆ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
