ಬೆಂಗಳೂರು,ಮಾ.22- ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ನಗರದ ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಐಷಾರಾಮಿ ಕಾರು ಡ್ರಿಫ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲ್ಯಾಂಬೊರ್ಗಿನಿ ಕಾರನ್ನು ಕಬ್ಬನ್ ಪಾರ್ಕ್ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೋಟ್ಯಾಂತರ ರೂ ಬೆಲೆ ಬಾಳುವ ಐಷರಾಮಿ ಲ್ಯಾಂಬರ್ಗಿನಿ ಕಾರು ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಅವರಿಗೆ ಸೇರಿದೆ ಎಂಬ ಶಂಕೆ ಪೊಲೀಸರಲ್ಲಿ ವ್ಯಕ್ತವಾಗಿದೆ.
ಅತ್ಯಂತ ಜನನಿಬಿಡಿ ಹಾಗೂ ವಾಹನ ದಟ್ಟಣೆ ಇರುವ ನಡು ರಸ್ತೆಯಲ್ಲಿ ಕಾರು ಡ್ರಿಫ್ಟಿಂಗ್ ಮಾಡಿದ್ದು ಯಾರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರು ಡ್ರಿಫ್ಟಿಂಗ್ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ರಿಕ್ಕಿ ರೈಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅಲ್ಲದೇ ಕಾರಿನ ದಾಖಲೆಗಳು ಯಾರ ಹೆಸರಿನಲ್ಲಿವೆ ಎಂದು ಪರಿಶೀಲಿಸಲು ಆರ್‌ಟಿಒಗೆ ಪೊಲೀಸರು ಪತ್ರ ಬರೆದಿದ್ದಾರೆ.
ರಿಕ್ಕಿ ರೈ ಡ್ರಿಫ್ಟಿಂಗ್ ಮಾಡಿರೊ ಬಗ್ಗೆ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅನಿಲ್ ಕುಂಬ್ಳೆ ಸರ್ಕಲ್‌ನಲ್ಲಿ ಎರಡು-ಮೂರು ಬಾರಿ ಕಾರ್ ಡ್ರಿಫ್ಟಿಂಗ್ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಕೆಎ05 ಎನ್ ಆರ್ 0009 ನಂಬರಿನ ಲ್ಯಾಂಬೊರ್ಗಿನಿ ಕಾರ್ ಅನ್ನು ವಶಕ್ಕೆ ಪಡೆಯಾಗಿದೆ. ಕಬ್ಬನ್ ಪಾರ್ಕ್ ಸಂಚಾರ ಠಾಣೆಯ ಇ್ಸ್‌ಪೆಕ್ಟರ್ ರವಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
