Tuesday, April 14, 2026
Homeರಾಜಕೀಯಉಪಚುನಾವಣೆ : ನಾಳೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಉಪಚುನಾವಣೆ : ನಾಳೆ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

By-election: BJP candidates to file nominations tomorrow

ಬೆಂಗಳೂರು,ಮಾ.22- ಭಾರೀ ಜಿದ್ದಾಜಿದ್ದಿನಿಂದ ಕೂಡಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದಿರುವ ಶ್ರೀನಿವಾಸ ಟಿ.ದಾಸ ಕರಿಯಪ್ಪ ಹಾಗೂ ಬಾಗಲಕೋಟೆಯಲ್ಲಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಪಕ್ಷದ ಮುಖಂಡರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರ ಸಮುಖದಲ್ಲಿ ತಮ ಉಮೇದುವಾರಿಕೆ ಮಾಡಲಿದ್ದಾರೆ.

ಈಗಾಗಲೇ ಇಬ್ಬರು ಅಭ್ಯರ್ಥಿಗಳು ಸಾಂಪ್ರದಾಯಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದು, ನಾಳೆ ಮೆರವಣಿಗೆ ಹಾಗೂ ಪಕ್ಷದ ಪ್ರಮುಖರ ಜೊತೆ ಆಗಮಿಸಿ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ.ಗದ್ದಿಗೌಡರ್‌, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಕಾರ್ಯಕರ್ತರು ಸಾಥ್‌ ನೀಡಲಿದ್ದಾರೆ.
ಬೆಳಗ್ಗೆ ದೇವಸ್ಥಾನದಲ್ಲ ಮೆರವಣಿಗೆ ಸಲ್ಲಿಸಿ ನಂತರ ತೆರೆದ ವಾಹನದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರ ಜೊತೆಗೂಡಿ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಸುವರು.
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ.ದಾಸ ಕರಿಯಪ್ಪ ಅವರು ಮತ್ತೊಮೆ ನಾಮಪತ್ರ ಸಲ್ಲಿಸಲಿದ್ದಾರೆ.

ಈ ಹಿಂದೆ ಅವರು ಪಕ್ಷದ ಕೆಲವೇ ಪ್ರಮುಖರ ಜೊತೆ ನಾಮಪತ್ರ ಸಲ್ಲಿಸಿದ್ದರು. ನಾಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ, ಸಂಸದರಾದ ಬಸವರಾಜ್‌ ಬೊಮಾಯಿ, ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ಪಿ.ಹರೀಶ್‌, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್‌, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ, ರಾಮಚಂದ್ರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ದುರ್ಗಮ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವರು.

ದೇಶದಲ್ಲೇ ಅತ್ಯಂತ ಹಿರಿಯ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಾಮನೂರು ಶಿವಶಂಕರಪ್ಪ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಚ್‌.ವೈ.ಮೇಟಿ ಅವರು ನಿಧನರಾದ ಕಾರಣ ಈ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಸಲು ಸೋಮವಾರ ಕಡೆಯ ದಿನವಾಗಿದ್ದು, ಮಂಗಳವಾರ ಮತ್ತು ಬುಧವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಏ.9ರಂದು ಮತದಾನ ನಡೆದು ಮೇ 4ರಂದು ಮತ ಏಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

RELATED ARTICLES

Latest News