ಬೆಂಗಳೂರು, ಜು.15- ಖಾಲಿ ಇರುವ 20 ಸ್ಥಾನಗಳಿಗೆ ಸಚಿವ ಸಂಪುಟ ವಿಸ್ತರಣೆಯ ಜೊತೆಗೆ ಹಾಲಿ ಸಚಿವರ ಪೈಕಿ ಕೆಲವರನ್ನು ಕೈಬಿಟ್ಟು ಸಮಗ್ರ ಮಾರ್ಪಾಡು ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ದೆಹಲಿಗೆ ತೆರಳುವ ಸಾಧ್ಯತೆಗಳಿವೆ.
ಹಾಲಿ ಸಚಿವರಾಗಿರುವ 14 ಮಂದಿ ಪೈಕಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಮ ಖಾತೆಯ ಬಗ್ಗೆ ನಿರಾಸಕ್ತಿ ಹೊಂದಿದಂತಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಎಂಬಿ.ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ತಮ ಖಾತೆಗಳ ನಿರ್ವಹಣಾ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸದೇ ಇರುವುದು ಡಿ.ಕೆ.ಶಿವಕುಮಾರ್ ಅವರಿಗೆ ತಲೆನೋವಾಗಿದೆ.
ಇವರಲ್ಲಿ ಕೆಲವರು ಹೈಕಮಾಂಡ್‌ನ ಕೃಪಾಕಟಾಕ್ಷದಿಂದ ಅವಕಾಶ ಗಿಟ್ಟಿಸಿದ್ದಾರೆ. ಹೀಗಾಗಿ ಖಾತೆ ನಿರ್ವಹಣೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುವ ಬದಲಾಗಿ ಖಾತೆ ಬದಲಾವಣೆಗೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.ಖಾಲಿ ಇರುವ 20 ಸ್ಥಾನಗಳಿಗೆ ಇದೇ ತಿಂಗಳ 20 ಅಥವಾ 21 ರಂದು ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಇನ್ನೂ ಕೆಲ ಪ್ರಮುಖ ನಾಯಕರು ಜುಲೈ 18ರಂದು ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕೆಲ ಮೂಲಗಳ ಪ್ರಕಾರ ಇಂದೇ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ದೆಹಲಿಗೆ ತೆರಳುತ್ತಾರೆ ಎಂದು ಹೇಳಲಾಗಿದೆ. ಅಲ್ಲಿ ರಾಹುಲ್ ಗಾಂಧಿಯವರ ಜೊತೆ ಚರ್ಚೆ ನಡೆಸಿದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂದು ತಿಳಿದು ಬಂದಿದೆ.
ಮಹತ್ವದ ಬೆಳವಣಿಗೆಯಲ್ಲಿ ಇಂದು ಬೆಳಗ್ಗೆ ಡಿ.ಕೆ.ಶಿವಕುಮಾರ್ ಮತ್ತು ಹರಿಪ್ರಸಾದ್ ಪ್ರತ್ಯೇಕ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.ಹೊಸದಾಗಿ ಸಂಪುಟ ಸೇರಲು ಬಹಳಷ್ಟು ಆಕಾಂಕ್ಷಿಗಳಿದ್ದಾರೆ. ಖಾಲಿ 20 ಸ್ಥಾನಗಳಿಗೆ ಭರ್ತಿ ಮಾಡುವ ಬದಲಾಗಿ, ಸಂಪುಟದಲ್ಲಿರುವ ಕೆಲ ಸಚಿವರನ್ನು ಬದಲಾವಣೆ ಮಾಡುವ ಮೂಲಕ ಇನ್ನೂ ಎರಡು, ಮೂರು ಸ್ಥಾನಗಳನ್ನು ಸೇರಿಸಿಕೊಂಡು ಹೊಸ ಸಚಿವರಿಗೆ ಅವಕಾಶ ನೀಡಲು ಚರ್ಚೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಹೊಸದಾಗಿ ಸಂಪುಟ ಸೇರಲು ಕಾಂಗ್ರೆಸ್ ಶಾಸಕರ ದಂಡೇ ಲಾಬಿ ನಡೆಸುತ್ತಿದೆ. 9 ಬಾರಿ ಶಾಸಕರಾಗಿರುವ ಆರ್.ವಿ.ದೇಶಪಾಂಡೆ, 7 ಅವಧಿಗೆ ಶಾಸಕರಾಗಿರುವ ಎನ್.ವೈ.ಗೋಪಾಲಕೃಷ್ಣ, ಟಿ.ಬಿ.ಜಯಚಂದ್ರ, 6ನೇ ಬಾರಿಗೆ ಶಾಸಕರಾಗಿರುವ ಸಿ.ಎಸ್.ನಾಡಗೌಡ, ಬಸವರಾಜ ರಾಯರೆಡ್ಡಿ, 5ನೇ ಅವಧಿಗೆ ಶಾಸಕರಾಗಿರುವ ಎಚ್.ಸಿ.ಬಾಲಕೃಷ್ಣ, ಹಂಪನ ಗೌಡ ಬಾದರ್ಲಿ, 4ನೇ ಅವಧಿಗೆ ಶಾಸಕರಾಗಿರುವ ಎನ್.ಎ.ಹ್ಯಾರಿಸ್, ಎಂ.ಕೃಷ್ಣಪ್ಪ, ಎಂ.ವೈ.ಪಾಟೀಲ್, ಪುಟ್ಟರಂಗ ಶೆಟ್ಟಿ, ಬಿ.ಕೆ.ಸಂಗಮೇಶ್ವರ್, ಕೆ.ಎಂ.ಕೃಷ್ಣಲಿಂಗೇ ಗೌಡ, ಎಸ್.ಆರ್. ಶ್ರೀನಿವಾಸ್, ಸೇರಿದಂತೆ ಹಲವಾರು ಮಂದಿ ನಿರಂತರವಾಗಿ ಲಾಬಿ ನಡೆಸುತ್ತಿದ್ದಾರೆ.
ಇದರ ಜೊತೆಗೆ ರಾಘವೇಂದ್ರ ಹಿಟ್ನಾಳ್, ಟಿ.ರಘುಮೂರ್ತಿ, ಎ.ಬಿ.ರಮೇಶ್‌ಬಂಡಿಸಿದ್ದೇಗೌಡ, ಬಿ.ಶಿವಣ್ಣ, ಕೆ.ಷಡಕ್ಷರಿ, ಡಿ.ಜಿ.ಶಾಂತನಗೌಡ, ಯಶವಂತ ರಾಯಗೌಡ ವಿಠಲ ಗೌಡ ಪಾಟೀಲ್, ಪಿ.ಎಂ.ಅಶೋಕ್, ಗಣೇಶ್ ಉಕ್ಕೇರಿ, ಬೇಳೂರು ಗೋಪಾಲ ಕೃಷ್ಣ, ಎಸ್.ಎನ್.ನಾರಾಯಣಸ್ವಾಮಿ, ಪಿ.ಎಂ. ನರೇಂದ್ರ ಸ್ವಾಮಿ, ಕೆ.ವೈ.ನಂಜೇಗೌಡ, ಅಜಯ್ ಧರ್ಮಸಿಂಗ್, ಶರತ್ ಬಚ್ಚೇಗೌಡ, ಶ್ರೀನಿವಾಸ್ ಮಾನೆ, ಕಂಪ್ಲಿ ಗಣೇಶ, ಸಿ.ಎಂ.ನಾಗರಾಜ, ಎನ್.ಟಿ.ಶ್ರೀನಿವಾಸ್, ಬಸವರಾಜ್ ಶಿವಗಂಗಾ, ಟಿ.ಡಿ.ರಾಜೇಗೌಡ, ಜಿ.ಎಚ್.ಶ್ರೀನಿವಾಸ್, ಎ.ಎಸ್. ಪೊನ್ನಣ್ಣ ಸೇರಿದಂತೆ ಹಲವಾರು ಮಂದಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಇವರಲ್ಲಿ ಬಹಳಷ್ಟು ಮಂದಿ ಒಮೆಯೂ ಸಚಿವರಾಗದೇ ಅವಕಾಶಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಹಳಷ್ಟು ಮಂದಿ ಮರಳಿ ಅವಕಾಶ ಗಿಟ್ಟಿಸಲು ಪ್ರಯಸತ್ನಿಸುತ್ತಿದ್ದು, ಜಾತಿವಾರು, ಪ್ರಾದೇಶಿಕವಾರು ಆದ್ಯತೆಯ ಮೇರೆಗೆ ಸಂಭವನೀಯರ ಪಟ್ಟಿ ಸಿದ್ಧಗೊಂಡಿದೆ. ಹೈಕಮಾಂಡ್ ಭೇಟಿಯಲ್ಲಿ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ತಮ್ಮ ಪ್ರತ್ಯೇಕ ಪಟ್ಟಿಯನ್ನು ಮಂಡಿಸಲಿದ್ದಾರೆ ಎನ್ನಲಾಗಿದೆ. ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷರಾಗಿ ಖುದ್ದು ಸಂಪುಟದ ಆಕಾಂಕ್ಷಿಯಾಗಿರುವುದು ವಿಶೇಷ.
