ಕಲಬುರಗಿ,ಜು.15- ತಲೆಮರೆಸಿಕೊಂಡಿ ರುವ ಇಬ್ಬರು ಕೈದಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಮುಂಜಾನೆ ಗುಂಡು ಹಾರಿಸಿ ಕೈದಿ ಸಂತೋಷ್ ಎಂಬಾತನನ್ನು ಸೆರೆ ಹಿಡಿಯಲಾಗಿದೆ.
ಆತ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಿನ್ನೆ ಮುಂಜಾನೆ ಕಾರಾಗೃಹದಿಂದ ಮೂವರು ಖೈದಿಗಳು ಪರಾರಿಯಾದ ನಂತರ ನಾವು ಮೂರು ವಿಶೇಷ ತಂಡಗಳನ್ನು ರಚಿಸಿದೆವು. ಕಲಬುರಗಿ ಹಾಗೂ ಬೀದರ್ ಜಿಲ್ಲಾ ಎಸ್ಪಿಯವರಿಗೂ ಮಾಹಿತಿಯನ್ನು ನೀಡಿ ಅವರ ಸಹಕಾರವನ್ನು ಕೇಳಿದ್ದೇವೆ.
ಮೂವರು ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡು ಹೊರಗೆ ಬಂದ ನಂತರ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಹೋಗಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಹೀಗೆ ಎಲ್ಲ ತಂಡಗಳು ಅವರುಗಳಿಗಾಗಿ ಶೋಧ ನಡೆಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ನಗರ ಹೊರವಲಯದಲ್ಲಿ ಒಬ್ಬನನ್ನು ಗುಂಡು ಹಾರಿಸಿ ಬಂಧಿಸಲಾಗಿದೆ. ಉಳಿದ ಕೈದಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಪರಾರಿಯಾಗಿರುವ ಮಸ್ತಾನ್ ಮತ್ತು ಸಾಗರ್ ಎಂಬ ಕೈದಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಬಂಧಿಸುತ್ತೇವೆ ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು. ಕೈದಿಯ ಹಲ್ಲೆಯಿಂದ ಗಾಯಗೊಂಡಿರುವ ಕಾನ್‌ಸ್ಟೆಬಲ್‌ಗಳು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.
