Homeರಾಜ್ಯತಮಿಳುನಾಡಿಗೆ ನೀರು ಬಿಡುವ ಆದೇಶ ಒಪ್ಪಲು ಸಾಧ್ಯವಿಲ್ಲ : ಸಚಿವ ಚಲುವರಾಯಸ್ವಾಮಿ

ತಮಿಳುನಾಡಿಗೆ ನೀರು ಬಿಡುವ ಆದೇಶ ಒಪ್ಪಲು ಸಾಧ್ಯವಿಲ್ಲ : ಸಚಿವ ಚಲುವರಾಯಸ್ವಾಮಿ

ಬೆಂಗಳೂರು,ಸೆ.25- ತಮಿಳುನಾಡಿಗೆ ಪ್ರತಿದಿನ 4 ಸಾವಿರ ಕ್ಯೂಸೆಕ್‌ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಕರ್ನಾಟಕ ಒಪ್ಪಲು ಸಾಧ್ಯವಿಲ್ಲ ಎಂದು ಜಲ ಸಂಪನೂಲ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದ್ದಾರೆ. ಸಿಡಬ್ಲ್ಯೂಆರ್‌ಸಿಯ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕೂಡ ಎತ್ತಿಹಿಡಿದಿರುವ ಹಿನ್ನೆಲೆಯಲ್ಲಿ, ರಾಜ್ಯದ ಜಲಾಶಯಗಳಲ್ಲಿನ ಪ್ರಸ್ತುತ ನೀರಿನ ಲಭ್ಯತೆ ಮತ್ತು ಮಳೆಯ ಕೊರತೆಯನ್ನು ಪರಿಗಣಿಸಬೇಕಾಗಿದೆ ಎಂದು ಸಚಿವರು ಒತ್ತಾಯಿಸಿದರು.

ಕೆಆರ್‌ಎಸ್‌‍, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಒಳಹರಿವು ಕೂಡ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ವಾಸ್ತವ ಪರಿಸ್ಥಿತಿಯನ್ನು ಅಂಕಿ-ಅಂಶಗಳೊಂದಿಗೆ ಪ್ರಾಧಿಕಾರದ ಮುಂದೆ ವಾದ ಮಂಡಿಸಿ, 4 ಸಾವಿರ ಕ್ಯೂಸೆಕ್‌ ಬದಲಿಗೆ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಒಟ್ಟು 49.775 ಟಿಎಂಸಿ (47.60%) ನೀರು ಮಾತ್ರ ಲಭ್ಯವಿದೆ. ಇದರಲ್ಲಿ ಕುಡಿಯುವ ನೀರಿಗೆ 29 ಟಿಎಂಸಿ, ಪರಿಸರ ಹರಿವಿಗೆ 10 ಟಿಎಂಸಿ ಹಾಗೂ ಮುಂಗಾರು ಬೆಳೆಗೆ 23.40 ಟಿಎಂಸಿ ಅಗತ್ಯವಿದೆ ಎಂದು ರಾಜ್ಯದ ಪ್ರತಿನಿಧಿಗಳು ಸಭೆಯಲ್ಲಿ ವಿವರಿಸಿದ್ದಾರೆ.

ಜೂ.1ರಿಂದ ಸೆ.22ರವರೆಗೆ ರಾಜ್ಯದಲ್ಲಿ 406.5 ಮಿ.ಮೀ. ಮಳೆಯಾಗಿದ್ದು, ಸಾಮಾನ್ಯ 643.4 ಮಿ.ಮೀ.ಗೆ ಹೋಲಿಸಿದರೆ ಶೇ.63.18ರಷ್ಟು ಮಳೆಯಾಗಿದೆ. ಜಲಾಶಯಗಳಿಗೆ ಒಳಹರಿವು ಕೇವಲ 2,200 ಕ್ಯೂಸೆಕ್‌ಗೆ ಇಳಿದಿದೆ. ಕಾವೇರಿ ಜಲಾನಯನ ಪ್ರದೇಶದ ಶೇ.71ರಷ್ಟು ತಾಲ್ಲೂಕುಗಳು ಬರಪೀಡಿತವಾಗಿದ್ದು, ಇದು ರಾಜ್ಯದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕರ್ನಾಟಕ ವಾದಿಸಿದೆ.

ಇದೇ ವೇಳೆ, ಜು.29ರಿಂದ ಸೆ.23ರವರೆಗೆ ಬಿಳಿಗುಂಡ್ಲುವಿನಲ್ಲಿ ಸಿಡಬ್ಲ್ಯೂಎಂಎ ನಿಗದಿಪಡಿಸಿದ್ದ 4,21,500 ಕ್ಯೂಸೆಕ್‌ ಬದಲಿಗೆ 4,47,182 ಕ್ಯೂಸೆಕ್‌ (38.637 ಟಿಎಂಸಿ) ನೀರು ಹರಿಸಲಾಗಿದೆ. ಇದರಿಂದ ನಿಗದಿಗಿಂತ 25,682 ಕ್ಯೂಸೆಕ್‌ (2.219 ಟಿಎಂಸಿ) ಹೆಚ್ಚುವರಿ ನೀರು ಹರಿಸಲಾಗಿದೆ ಎಂಬುದು ಕರ್ನಾಟಕದ ಮತ್ತೊಂದು ವಾದವಾಗಿದೆ.

ಕಾವೇರಿ ಕೊಳ್ಳದ ಬೆಂಗಳೂರು ಸೇರಿದಂತೆ ಪಟ್ಟಣಗಳು ಮತ್ತು ಗ್ರಾಮಗಳ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಈಗ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಚಲುವರಾಯಸ್ವಾಮಿ ಹೇಳಿದರು.

ಸೂಪರ್‌ ಎಲ್‌ ನಿನೊ ಪರಿಣಾಮ, ಮಳೆಯ ಕೊರತೆ ಹಾಗೂ ಮುಂದಿನ ದಿನಗಳಲ್ಲಿ ಒಳಹರಿವು ಹೆಚ್ಚಾಗುವ ಸಾಧ್ಯತೆ ಕಡಿಮೆ ಇರುವುದನ್ನು ಪರಿಗಣಿಸಿ ನೀರು ಹರಿಸುವ ಪ್ರಮಾಣವನ್ನು 3 ಸಾವಿರ ಕ್ಯೂಸೆಕ್‌ಗೆ ಇಳಿಸಬೇಕು ಎಂದು ಕರ್ನಾಟಕ ಒತ್ತಾಯಿಸಿದೆ. ಮುಂದಿನ ಕಾನೂನು ಹೋರಾಟದ ರೂಪುರೇಷೆಯನ್ನು ರಾಜ್ಯದ ಕಾನೂನು ತಜ್ಞರು ಮತ್ತು ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

RELATED ARTICLES
spot_img

Latest News