ಬೆಂಗಳೂರು,ಸೆ.25- ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತ ಕುಟುಂಬಗಳಿಗೆ ರಾಜ್ಯ ಸರ್ಕಾರ ತಕ್ಷಣ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ವಿಧಾನ ಪರಿಷತ್ನ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ.ಶರವಣ ಅವರು ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಸರ್ಕಾರ ನೀಡುತ್ತಿರುವ 2,500 ರೂ. ನೆರವು ಯಾವುದಕ್ಕೂ ಸಾಲುವುದಿಲ್ಲ. ಇದರಲ್ಲಿ ಕೆಟ್ಟು ನಿಂತಿರುವ ಬೋರ್ವೆಲ್ಗಳನ್ನು ದುರಸ್ತಿ ಮಾಡಿಸುವುದಕ್ಕೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಬೋರ್ವೆಲ್ ದುರಸ್ತಿಗೆ ಮೋಟಾರ್, ಪೈಪ್ಗಳು, ಕೇಬಲ್ಗಳು ಸೇರಿದಂತೆ ವಿವಿಧ ಉಪಕರಣಗಳ ವೆಚ್ಚವೂ ಹೆಚ್ಚಾಗಿರುವುದರಿಂದ ಸಣ್ಣ ಮತ್ತು ಮಧ್ಯಮ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಬರಗಾಲದಿಂದ ಸಂಕಷ್ಟಕ್ಕೊಳಗಾಗಿರುವ ಪ್ರತಿ ರೈತ ಕುಟುಂಬಕ್ಕೆ ಕನಿಷ್ಠ 25,000 ರೂ. ವಿಶೇಷ ನೆರವನ್ನು ರಾಜ್ಯ ಸರ್ಕಾರ ನೀಡಬೇಕು. ಈ ನೆರವನ್ನು ಕೇವಲ ಪರಿಹಾರಧನವಾಗಿ ಪರಿಗಣಿಸದೆ, ರೈತರ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸಿ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ನೆರವಾಗುವ ರೀತಿಯಲ್ಲಿ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.
ರೈತರು ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿದ್ದು, ನೀರಿನ ಕೊರತೆ ಹಾಗೂ ಬೆಳೆ ನಷ್ಟದಿಂದ ಅವರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ದುರ್ಬಲವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವು ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಅಗತ್ಯವಿರುವಷ್ಟು ಆರ್ಥಿಕ ನೆರವನ್ನು ತುರ್ತಾಗಿ ಬಿಡುಗಡೆ ಮಾಡಬೇಕಾಗಿದೆ ಎಂದು ಶರವಣ ಅವರು ಹೇಳಿದರು.
ಬರಗಾಲದ ಪರಿಣಾಮವನ್ನು ಎದುರಿಸುತ್ತಿರುವ ರೈತರ ಹಿತದೃಷ್ಟಿಯಿಂದ ಸರ್ಕಾರವು ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಿಸಿ, ನೀರಿನ ಮೂಲಗಳ ಪುನಶ್ಚೇತನ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಅವರು ಆಗ್ರಹಿಸಿದರು.
