ಹಾಸನ, ಸೆ.25- 250 ಕೈದಿಗಳ ಸಾಮರ್ಥ್ಯ ಹೊಂದಿರುವ ಹಾಸನ ಜಿಲ್ಲಾ ಕಾರಾಗೃಹದಲ್ಲಿ ಪ್ರಸ್ತುತ 334 ಕೈದಿಗಳಿರುವ ಹಿನ್ನೆಲೆಯಲ್ಲಿ ಹೊಸ ಜೈಲು ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.
ಕಾರಾಗೃಹ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈದಿಗಳ ಸಂಖ್ಯೆ ಹೆಚ್ಚಿರುವುದರಿಂದ ಓವರ್ಕ್ರೌಡಿಂಗ್ ಸಮಸ್ಯೆ ಎದುರಾಗಿದೆ. ಹೊಸ ಕಾರಾಗೃಹ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದ್ದು, ಅನುಮೋದನೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪರಿಶೀಲನೆ ವೇಳೆ ಸ್ವಚ್ಛತೆ, ಕೈದಿಗಳ ಕೂದಲು ಕತ್ತರಿಸುವ ವ್ಯವಸ್ಥೆ ಹಾಗೂ ಆಹಾರದ ಗುಣಮಟ್ಟವನ್ನು ಪರಿಶೀಲಿಸಲಾಗಿದ್ದು, ನಿಗದಿತ ಮಾನದಂಡ ಪಾಲನೆಯಾಗುತ್ತಿದೆ ಎಂದು ಹೇಳಿದರು.
ಜೈಲಿನಲ್ಲಿ ಗಲಾಟೆ ಅಥವಾ ಅಶಿಸ್ತಿಗೆ ಕಾರಣವಾಗುವ ಕೈದಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಒಂದೇ ಪ್ರಕರಣದ ಆರೋಪಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಂದೇ ಜೈಲಿನಲ್ಲಿ ಇರಿಸದೆ ಬೇರೆಡೆಗೆ ಸ್ಥಳಾಂತರಿಸುವ ಕುರಿತು ಎಸ್ಪಿ ಹಾಗೂ ನ್ಯಾಯಾಂಗ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದರು.
ಅಕ್ರಮ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ನಿರಂತರ ತಪಾಸಣೆ ನಡೆಸಲಾಗುತ್ತಿದ್ದು, ಜೈಲಿನೊಳಗೆ ಹೊರಗಿನಿಂದ ಮೊಬೈಲ್ ಎಸೆಯುವ ಪ್ರಕರಣಗಳಿಗೂ ನಿಯಂತ್ರಣ ಹೇರಲಾಗಿದೆ. 2026ರಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೊಸದಾಗಿ ಮೊಬೈಲ್ಗಳು ಜೈಲಿನೊಳಗೆ ಪ್ರವೇಶಿಸುವ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು.
ಕೈದಿಗಳು ಕುಟುಂಬದವರೊಂದಿಗೆ ಕಾನೂನುಬದ್ಧವಾಗಿ ಸಂಪರ್ಕದಲ್ಲಿರಲು ಹಾಸನ ಸೇರಿದಂತೆ ರಾಜ್ಯದ 48 ಕಾರಾಗೃಹಗಳಲ್ಲಿ ಪ್ರಿಸನ್ ಕಾಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವೇಳೆ ಎಸ್ಪಿ ಶುಭನ್ವಿತಾ, ಎಎಸ್ಪಿ ಶ್ರೀನಿಧಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.
