Homeರಾಜ್ಯಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಮಧ್ಯಪ್ರಾಚ್ಯ ಯುದ್ಧವನ್ನು ಕವಚದಂತೆ ಬಳಸುತ್ತಿದೆ : ಡಿಸಿಎಂ ಪರಮೇಶ್ವರ್‌

ಪೆಟ್ರೋಲ್‌-ಡೀಸೆಲ್‌ ಬೆಲೆ ಹೆಚ್ಚಿಸಲು ಕೇಂದ್ರ ಸರ್ಕಾರ ಮಧ್ಯಪ್ರಾಚ್ಯ ಯುದ್ಧವನ್ನು ಕವಚದಂತೆ ಬಳಸುತ್ತಿದೆ : ಡಿಸಿಎಂ ಪರಮೇಶ್ವರ್‌

Central government is using Middle East war as a cover to increase petrol-diesel prices

ಬೆಂಗಳೂರು, ಜೂ.7- ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ ಮಾಡಲು ಮಧ್ಯಪ್ರಾಚ್ಯ ಯುದ್ಧ ಪರಿಸ್ಥಿತಿಯನ್ನು ಕವಚದಂತೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಉಪ ಮುಖ್ಯಮಂತ್ರಿಯವರು ಸಿದ್ಧಗಂಗಾ ಮಠಕ್ಕೆ ತೆರಳಿ ಇಂದು ವಿಶೇಷ ಪೂಜೆ ಸಲ್ಲಿಸಿದರು. ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಶಿವಯೋಗಿಯವರ ಕರ್ತೃ ಗದ್ದುಗೆಯ ದರ್ಶನ ಪಡೆದರು. ಬಳಿಕ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡುಗೆ ಅನಿಲ, ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಮಧ್ಯಪ್ರಾಚ್ಯ ಯುದ್ಧ ನಡೆಯುತ್ತಿರುವುದು ನಮೆಲರ ಅರಿವಿಗಿದೆ. ಅದರ ನೆಪದಲ್ಲಿ ಈಗ ಬೆಲೆಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಇದಕ್ಕೂ ಮೊದಲು ಕಚ್ಚಾ ತೈಲದ ಬೆಲೆ ಕಡಿಮೆ ಇದ್ದಾಗ ಅದರ ಪ್ರಯೋಜನವನ್ನು ಕೇಂದ್ರ ಸರ್ಕಾರ ಗ್ರಾಹಕರಿಗೆ ವರ್ಗಾವಣೆ ಮಾಡಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅನೇಕ ಭರವಸೆಗಳನ್ನು ಘೋಷಿಸಿದ್ದಾರೆ. ಅವುಗಳನ್ನು ತಮದೇ ಆದ ರೀತಿಯಲ್ಲಿ ಜಾರಿಗೆ ತರಲು ನೀಲ ನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಉತ್ತಮ ಆಡಳಿತ ನೀಡುವ ಸಂಕಲ್ಪ ತೊಟ್ಟಿದ್ದೇವೆ ಎಂದು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.ಎತ್ತಿನಹೊಳೆ ಯೋಜನೆಯ ಮೂಲಕ ಜೂನ್‌, ಜುಲೈ ನೀರು ಹರಿಯಬೇಕಿತ್ತು. ಅರಣ್ಯ ಇಲಾಖೆ ಅನುಮತಿ ಕಾರಣಕ್ಕಾಗಿ ಕಾಮಗಾರಿ ನಿಂತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮತಿ ನೀಡಲು ತಾತ್ವಿಕ ಸಹಮತ ಸೂಚಿಸಿದೆ ಎಂದು ತಿಳಿದು ಬಂದಿದೆ. ಅದನ್ನು ಬಳಸಿಕೊಂಡು ಶೀಘ್ರವೇ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.

ಹೊಸದಾಗಿ ಕಂದಾಯ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ಧೇನೆ. ಈ ಹಿಂದೆ ಸಚಿವ ಕೃಷ್ಣಭೈರೇಗೌಡ ಉತ್ತಮ ಕೆಲಸ ಮಾಡಿದ್ದಾರೆ. ಅದನ್ನೇ ಮುಂದುವರೆಸುತ್ತೇವೆ. ಹೊಸದಾಗಿ ಮತ್ತಷ್ಟು ಸುಧಾರಣೆಗಳನ್ನು ತರುತ್ತೇವೆ ಎಂದರು.

ರೈತರಿಗೆ ತಮ ಜಮೀನಿನ ಮಾಲಿಕತ್ವ ಪಡೆಯಲು ಸಮಸ್ಯೆಗಳಿವೆ. ದಾಖಲಾತಿಗಳನ್ನು ಕ್ರಮಬದ್ಧ ಗೊಳಿಸುವ ಮೂಲಕ ಭೂಮಿ ಒಡೆತನವನ್ನು ಖಚಿತಪಡಿಸಲಾಗುವುದು. ಇಲಾಖೆಯಲ್ಲಿ ನೇಮಕಾತಿ ಹಾಗೂ ಬಡ್ತಿ ವಿಚಾರವಾಗಿ ಸಮಸ್ಯೆಗಳಿವೆ. ಅದನ್ನು ಸರಿ ಪಡಿಸುತ್ತೇವೆ ಎಂದು ಹೇಳಿದರು.
ಈ ಹಿಂದೆ ಗೃಹ ಸಚಿವನ್ನಾಗಿ ಮೂರು ವರ್ಷ ಶಾಂತಿ ಸುವ್ಯವಸ್ಥೆಯನ್ನು ಪಾಲನೆ ಮಾಡಿದ್ದೇನೆ. ಒಂದು ಕೋಮು ಗಲಭೆಯೂ ಆಗಿಲ್ಲ. ಕಂದಾಯ ಇಲಾಖೆಯಲ್ಲಿ ಹೊಸ ಸವಾಲುಗಳನ್ನು ನಿಭಾಯಿಸಲಾಗುವುದು ಎಂದರು.

ಯಾವುದೇ ಶುಭ ಕಾರ್ಯಗಳನ್ನು ಆರಂಭಿಸುವ ಮುನ್ನ ಶ್ರೀ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ತಾವು ಪಾಲಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಹೀಗಾಗಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವನಾಗಿ ಕಾರ್ಯ ಆರಂಭಿಸುವ ಮುನ್ನ ಶ್ರೀ ಮಠಕ್ಕೆ ಭೇಟಿ ಮಾಡಿ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು.

RELATED ARTICLES

Latest News