ಬೆಂಗಳೂರು,ಫೆ.6- ಅಮಾಯಕ ಜನರ ಬ್ಯಾಂಕ್ ಖಾತೆ ವಿವರ ಪಡೆದು ಮ್ಯೂಲ್ ಖಾತೆ ಮೂಲಕ ಲಕ್ಷಾಂತರ ರೂ. ದೋಚುತ್ತಿರುವ ಸೈಬರ್ ವಂಚಕರನ್ನು ಮಟ್ಟ ಹಾಕಿ, ಪ್ರಕರಣಗಳಿಗೆ ಇತಿಶ್ರೀ ಹಾಡಲು ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಪಣತೊಟ್ಟಿದ್ದಾರೆ.
ರಾಜ್ಯದಾದ್ಯಂತ ಎಗ್ಗಿಲ್ಲದೆ ನಡೆಸಲಾಗುತ್ತಿರುವ ಸೈಬರ್ ವಂಚನೆ ಪ್ರಕರಣಗಳ
ಬೆನ್ನತ್ತಿರುವ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಇದುವರೆಗೂ 13 ವಂಚಕರನ್ನು ಬಂಧಿಸಿ 14 ಪ್ರಕರಣಗಳನ್ನು ದಾಖಲಿಸಿಕೊಂಡಿರುವುದರ ಜೊತೆಗೆ ಇಂದು ಕೂಡ ತನ್ನ ಕಾರ್ಯಚರಣೆಯನ್ನು ಮುಂದುವರೆಸಿದೆ.
ಅಮಾಯಕ ಜನರ ಬ್ಯಾಂಕ್ ಖಾತೆ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಸೈಬರ್ ವಂಚನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಚರಣೆಗೆ ಇಳಿದ ಸಿಐಡಿ ಪೊಲೀಸರು ನಿನ್ನೆ ಏಕಕಾಲಕ್ಕೆ ಬೆಂಗಳೂರು, ತುಮಕೂರು, ದಾವಣಗೆರೆ ಸೇರಿದಂತೆ ನೂರಾರು ಕಡೆಗಳಲ್ಲಿ ದಾಳಿ ನಡೆಸಿದ್ದರು.
ಈ ಸಂದರ್ಭದಲ್ಲಿ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಖಾತೆಗಳನ್ನು ಪತ್ತೆ ಹಚ್ಚಲಾಗಿತ್ತು. ಅದರ ಜಾಡು ಹಿಡಿದು ಹೊರಟ ಪೊಲೀಸರು ಸೈಬರ್ ಅಕ್ರಮದ ಮಾಸ್ಟರ್ ಮೈಂಡ್‌ಗಳು ಎನ್ನಲಾದ 13 ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಮಾತ್ರವಲ್ಲ ವಂಚಕರ ವಿರುದ್ಧ 14 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.
ಬಂಧನಕ್ಕೊಳಗಾಗಿರುವ ವಂಚಕರು ಅಮಾಯಕ ಜನರ ಬ್ಯಾಂಕ್ ವಿವರ, ಎಟಿಎಂ ಕಾರ್ಡ್ ಮತ್ತಿತರ ವಿವರಗಳನ್ನು ಸಂಗ್ರಹಿಸಿ ಸೈಬರ್ ವಂಚಕರಿಗೆ ರವಾನೆ ಮಾಡುತ್ತಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ. ಈ ರೀತಿ ಪಡೆದ ಅಮಾಯಕ ಜನರ ಬ್ಯಾಂಕ್ ಖಾತೆಗಳನ್ನು ಮ್ಯೂಲ್ ಅಕೌಂಟ್‌ಗಳ ಮೂಲಕ ಆನ್‌ಲೈನ್ ವಂಚನೆ ನಡೆಸಿ ಹಣ ವರ್ಗಾವಣೆ ಮಾಡಿಕೊಂಡು ಎಟಿಎಂ ಮೂಲಕ ವಂಚಕರು ಹಣ ಡ್ರಾ ಮಾಡಿಕೊಳ್ಳುತ್ತಿದ್ದರು.
ಅಮಾಯಕ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದ ಸೈಬರ್ ವಂಚಕರಿಗೆ ಹೆಡೆಮುರಿ ಕಟ್ಟಲು ಪಣ ತೊಟ್ಟ ಸಿಐಡಿ ಪೊಲೀಸರು 13 ವಂಚಕರನ್ನು ಬಂಧಿಸಿದ್ದಾರೆ. ತಮ ಕಾರ್ಯಚರಣೆಯನ್ನು ಇಂದು ಕೂಡ ಮುಂದುವರೆಸಿರುವ ಪೊಲೀಸರು ಉಳಿದ ವಂಚಕರ ಬಂಧನಕ್ಕೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
