ಬೆಂಗಳೂರು, ಸೆ.25- ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಸುದ್ದಿಗೋಷ್ಠಿಸಯಲ್ಲಿಂದು ಅವರು, ಈ ಹಿಂದೆ ರಾಹುಲ್ ಗಾಂಧಿ ಅವರು ಮಾಡಿದ್ದ ಎಲ್ಲಾ ಆರೋಪಗಳು ಸತ್ಯವಾಗುತ್ತಿವೆ. ಚುನಾವಣಾ ಆಯೋಗ, ಬಿಜೆಪಿಯ ಮೋರ್ಚಾದಂತೆ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಳೆದ 10 ತಿಂಗಳಲ್ಲಿ 14 ಬಾರಿ ಚುನಾವಣಾ ಆಯೋಗದ ಇತರ ಸದಸ್ಯರು ಮುಖ್ಯ ಆಯುಕ್ತರ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿಯ ಜೊತೆ ಶಾಮಿಲಾದ ಆಯೋಗದ ಮುಖ್ಯ ಆಯುಕ್ತರು ದೇಶ ದ್ರೋಹದ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಹುಮತ ಇದೆ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ 2023ರಲ್ಲಿ ಕಾನೂನು ತಿದ್ದುಪಡಿ ತಂದು ಚುನಾವಣಾ ಆಯುಕ್ತರನ್ನು ಬಂಧಿಸುವಂತಿಲ್ಲ ಎಂದು ನಿಯಮ ಮಾಡಿದೆ. 73 ವರ್ಷಗಳಿಂದ ಜಾರಿಯಲ್ಲಿದ್ದ ಕಾನೂನನ್ನು ಬದಲಾವಣೆ ಮಾಡಿರುವುದು ರಾಜಕೀಯ ಹುನ್ನಾರ. ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳನ್ನು ಹೊರಗಿಡಲಾಗಿದೆ. ಇದು ಕ್ರಿಕೆಟ್ ಆಟಗಾರನೊಬ್ಬ ಅಂಪೈರ್‌ನನ್ನು ಆಯ್ಕೆಮಾಡಿದಂತಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ 65 ಸಾವಿರ ಮತದಾರರನ್ನು ಪಟ್ಟಿಯಿಂದ ಅನಧಿಕೃತವಾಗಿ ಡಿಲಿಟ್ ಮಾಡಲಾಗಿದೆ. ಬಬುಲೇಶ್ವರ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಕಡೆ ಮತದಾರರ ಸಹಿಗಳಿಲ್ಲದೇ ಹಾಗೂ ಸೂಕ್ತ ಕಾರಣಗಳಿಲ್ಲದೇ ಹೆಸರು ಡಿಲಿಟ್ ಆಗಿದೆ ಎಂದರು.ರಾಜ್ಯದಲ್ಲಿ ಎಸ್‌ಐಆರ್ ಆರಂಭವಾದಾಗ ಸುಮಾರು 35 ರಿಂದ 45 ಲಕ್ಷ ಮತದಾರರ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗಬಹುದು ಎಂಬ ಅಂದಾಜಿತ್ತು. ಆದರೆ ನಿರೀಕ್ಷೆ ಮೀರಿ ಒಂದು ಕೋಟಿಗೂ ಹೆಚ್ಚಿನ ಮತದಾರರನ್ನು ಕೈಬಿಟ್ಟಿದ್ದಾರೆ. ಇದು ಪ್ರಶ್ನಾರ್ಹವಾಗಿದೆ ಎಂದರು.ಬಿಜೆಪಿ ನಾಯಕರ ಶಿಫಾರಸುಗಳನ್ನು ಆಧರಿಸಿ ತೆಗೆದುಕೊಂಡಿರುವ ಈ ಕ್ರಮ ಕಾನೂನು ಬಾಹಿರ.
ಬೆಳಗಾವಿಯ ಶಾಸಕ ಅಭಯ್ ಪಾಟೀಲ್ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದು, 2 ಸಾವಿರ ಮತದಾರರನ್ನು ಪಟ್ಟಿಯಿಂದ ಕೈಬಿಡುವಂತೆ ಸಲಹೆ ನೀಡಿದ್ದಾರೆ. ಆಯೋಗ ಇದಕ್ಕೆ ಪ್ರತ್ಯುತ್ತರಿಸಿದೆ. ಆದರೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಬಿಜೆಪಿಯ ಅಣತಿಯಂತೆ ನಡೆದುಕೊಂಡಿದ್ದಾರೆ ಎಂದು ದೂರಿದರು.
2024ರಿಂದೀಚೆಗೆ ಮೂರು ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆದಿದೆ. ಅಲ್ಲಿನ ಫಲಿತಾಂಶವು ಅನುಮಾನ ಮೂಡಿಸಿದೆ. ಈ ಅವಧಿಯಲ್ಲಿ 6 ರಾಜ್ಯಗಳ ಪೈಕಿ, ನಾಲ್ಕು ಕಡೆ ಚುನಾವಣಾ ಮುಖ್ಯಾಧಿಕಾರಿಯನ್ನು ಅಲ್ಲಿನ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದವರನ್ನೇ ನೇಮಿಸಲಾಗಿದೆ ಎಂದು ವಿವರಿಸಿದರು.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ಟೀಕೆಗಳು ಕೇಳಿ ಬಂದರೆ, ಬಿಜೆಪಿಯವರು ಉತ್ತರ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ. ನಂತರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆಗಳು ಮುಂದುವರಿಯಲಿವೆ ಎಂದು ಅವರು ವಿವರಿಸಿದರು.
ನಾಳೆಯ ಬೃಹತ್ ಪ್ರತಿಭಟನೆಗೆ ಯುವ ಕಾಂಗ್ರೆಸ್ ಬೆಂಬಲ
ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕುರಿತು ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನಾಳೆ ಆಯೋಜಿಸಿರುವ ಬೃಹತ್ ಪ್ರತಿಭಟನೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಬೆಂಬಲ ಸೂಚಿಸಿದೆ.
ಎಸ್‌ಐಆರ್ ಪ್ರಕ್ರಿಯೆಯ ವಿವಿಧ ನಿರ್ಧಾರಗಳಿಗೆ ಸಂಬಂಧಿಸಿದಂತೆ ಇಬ್ಬರು ಚುನಾವಣಾ ಆಯುಕ್ತರು ಕಳೆದ 10 ತಿಂಗಳಲ್ಲಿ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವರದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ರೀತಿಯ ಏಕಪಕ್ಷೀಯವಾದ ನಿರ್ಧಾರಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಆದಕಾರಣ, ಯುವ ಕಾಂಗ್ರೆಸ್ ಕೆಪಿಸಿಸಿ ಜೊತೆಗೂಡಿ ನಾಳೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ.
ಪ್ರಸ್ತುತ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ, ಮತದಾರರ ಹಕ್ಕುಗಳ ರಕ್ಷಣೆ ಹಾಗೂ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಕುರಿತು ಸ್ವತಂತ್ರ ತನಿಖೆ ಅಗತ್ಯವಾಗಿದೆ. ಈ ವಿಚಾರವಾಗಿ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ, ಬಂಧನ ಮತ್ತು ಸ್ವತಂತ್ರ ಪರಿಶೀಲನೆಗೆ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ್ ಗೌಡ ಪಾಲ್ಗೊಳ್ಳಲಿದ್ದು, ನೂರಾರು ಯುವ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ನೀಡಲಿದ್ದಾರೆ.
