ಬೆಂಗಳೂರು,ಏ.8- ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ರಣರಂಗವಾಗಿ ಏರ್ಪಟ್ಟು, 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.
ಮುಕ್ತ ಮತ್ತು ನ್ಯಾಯಸಮತ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎರಡು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಭಾರಿ ಬಿಗಿಭದ್ರತೆ ಕೈಗೊಳ್ಳಲಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸಮರ್ಥ್ ಶಾಮನೂರು, ಬಿಜೆಪಿಯ ಶ್ರೀನಿವಾಸ ದಾಸ ಕರಿಯಪ್ಪ ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಉಮೇಶ್ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಮೇಲ್ನೋಟಕ್ಕೆ ಈ ಫಲಿತಾಂಶ ಆಡಳಿತಾರೂಢ ಕಾಂಗ್ರೆಸ್ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವಾದರೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದು ಮತದಾರರ ಒಲವು ಯಾರ ಪರ ಇದೆ ಎಂಬುದನ್ನು ಅರಿಯಲು ನೆರವಾಗಲಿದೆ.
ಪ್ರತಿಪಕ್ಷ ಬಿಜೆಪಿಗೆ ಈ ಚುನಾವಣೆಯು ಸವಾಲಾಗಿ ಪರಿಣಮಿಸಿದ್ದು ಒಂದು ವೇಳೆ ಎರಡು ಕ್ಷೇತ್ರಗಳಲ್ಲಿ ಗೆದ್ದರೆ ಮುಂಬರುವ ಸ್ಥಳೀಯ ಸಂಸ್ಥೆಗಳು ಮತ್ತು 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿಸಲು ಮುಂದಾಗಿದೆ. ಹೀಗಾಗಿ ಈ ಬಾರಿ ತನ್ನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆತು ಅಭ್ಯರ್ಥಿಗಳ ಪರ ಒಗ್ಗಟ್ಟಿನ ಪ್ರದರ್ಶನ ನಡೆಸಿರುವುದು ಈ ಚುನಾವಣೆಯ ವಿಶೇಷ.
ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೂ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಿದೆ. ಏಕೆಂದರೆ ಅವರ ನಾಯಕತ್ವ ಪಕ್ಷದಲ್ಲಿ ಮುಂದುವರಿಯಬೇಕು ಎಂಬುದಾದರೆ ಫಲಿತಾಂಶ ಸಕಾರಾತಕವಾಗಿ ಬರಬೇಕು. ಒಂದು ವೇಳೆ ಸ್ವಲ್ಪ ವ್ಯತ್ಯಾಸವಾದರೂ ಅಧ್ಯಕ್ಷ ಸ್ಥಾನದ ಕುರ್ಚಿ ಅಲುಗಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
25 ಜನ ಅಭ್ಯರ್ಥಿಗಳು ಕಣದಲ್ಲಿ
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ14 ಜನ ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಕಾಂಗ್ರೆಸ್‌ಗೆ ಇದು ಬಿಸಿ ತುಪ್ಪವಾಗಿದೆ.ಎಸ್ ಡಿಪಿಐನಿಂದ ಅಪ್ಸರ್ ಕೊಡ್ಲಿಪೇಟೆ ಕಣದಲ್ಲಿ ಇದ್ದಾರೆ. ಬಿಜೆಪಿ ಕಾಂಗ್ರೆಸ್ ಸೇರಿದಂತೆ ಕಣದಲ್ಲಿ ಒಟ್ಟು 25 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ.
ಭಿಗಿ ಭದ್ರತೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತಕ್ಷೇತ್ರ ವ್ಯಾಪ್ತಿಯ 284 ಮತಗಟ್ಟೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 234 ಮತಗಟ್ಟೆಗಳಿವೆ. ಉಳಿದ 50 ಮತಗಟ್ಟೆಗಳು ಗ್ರಾಮೀಣ ಪ್ರದೇಶದಲ್ಲಿವೆ. 76 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಅಂಗವಿಕಲ ಹಾಗೂ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಿಂದಲೇ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಸಖಿ, ಅಂಗವಿಕಲ, ಯುವ ಮತಗಟ್ಟೆಗಳ ಮೂಲಕ ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನಿಸಲಾಗುತ್ತಿದೆ. ಎಲ್ಲಾ ಮತಗಟ್ಟೆಗಳಿಗೆ 586 ಬ್ಯಾಲೆಟ್ ಯುನಿಟ್, 284 ಕಂಟ್ರೋಲ್ ಯುನಿಟ್ ಹಾಗೂ 284 ವಿವಿಪ್ಯಾಟ್‌ಗಳನ್ನು ಒದಗಿಸಲಾಗಿದೆ. ಹೆಚ್ಚುವರಿ ವಿದ್ಯುನಾನ ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ.
ಮತಗಟ್ಟೆಯ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಂಜೆ 6 ಗಂಟೆಗೆ ಮತಗಟ್ಟೆಯ ಪರಿಮಿತಿಯೊಳಗೆ ಇರುವ ಮತದಾರರಿಗೆ ಟೋಕನ್ ನೀಡಲಾಗುತ್ತದೆ. ಮತಗಟ್ಟೆಯೊಳಗೆ ಸರತಿಯಲ್ಲಿ ಕಾಯುವ ಈ ಮತದಾರರಿಗೆ ಮಾತ್ರ ಹಕ್ಕು ಚಲಾವಣೆ ಮಾಡುವ ಅವಕಾಶ ನೀಡಲಾಗುತ್ತದೆ.ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಸೇರಿ 681 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
60 ವೀಕ್ಷಕರು ಮತಗಟ್ಟೆಗಳ ಮೇಲೆ ನಿಗಾ ಇಡಲಿದ್ದಾರೆ. ಮತಯಂತ್ರಗಳ ಸಾಗಣೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್ಟಿಸಿ) 28 ಬಸ್, 39 ಮಿನಿ ಬಸ್ ಹಾಗೂ 5 ಜೀಪ್‌ಗಳನ್ನು ಬಳಸಲಾಗುತ್ತಿದೆ. ಡಿಮಸ್ಟರಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಾಲೆಯಲ್ಲಿ ತೆರೆದಿರುವ ಭದ್ರತಾ ಕೊಠಡಿಯಲ್ಲಿ ಮತಗಟ್ಟೆಗಳನ್ನು ಭದ್ರಪಡಿಸಲಾಗುತ್ತದೆ.
ಮತದಾನದ ದಿನ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದ್ದು, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಸೇರಿದಂತೆ 1,000 ಪೊಲೀಸರನ್ನು ನಿಯೋಜಿಸಲಾಗಿದೆ.ಸಿಎಪಿಎಫ್ ಸೇರಿ ಇತರ ಭದ್ರತಾ ಪಡೆಯ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಪೊಲೀಸರು ಹಾಗೂ ಸಿಎಪಿಎಫ್ ಸಿಬ್ಬಂದಿ ಇರಲಿದ್ದಾರೆ.
ಬಾಗಲಕೋಟೆ
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎರಡೂ ಪಕ್ಷಗಳಿಗೆ ಅವುಗಳದ್ದೇ ಆದ ಸಕಾರಾತಕ ಮತ್ತು ನಕಾರಾತಕ ಅಂಶಗಳಿವೆ.
ಪ್ರತಿ ಮತಗಟ್ಟೆಗೆ ಒಬ್ಬ ಪ್ರಿಸೈಡಿಂಗ್ ಅಧಿಕಾರಿ ಹಾಗೂ 3 ಜನ ಪೊ?ಲಿಂಗ್ ಅಧಿಕಾರಿಗಳನ್ನು ಗುರುತಿಸಲಾಗಿದ್ದು, ಹೆಚ್ಚುವರಿ ಸಿಬ್ಬಂದಿ ಸೇರಿ ಒಟ್ಟು 1564 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಅಗತ್ಯತೆಗೆ ಅನುಗುಣವಾಗಿ ಮೈಕ್ರೋ ಆಬ್ಸರವರ್ ಹಾಗೂ ಪೊಲೀಸ್ ಇಲಾಖೆಯಿಂದ ಸಶಸ್ತ್ರ ಪಡೆಯನ್ನು ಸಹ ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ. 322 ಮತಗಟ್ಟೆಗಳಲ್ಲಿಯೂ ವೆಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮತದಾರರ ಮತ ಚಲಾವಣೆಗೆ ಪೊ?ರೀತ್ಸಾಹಿಸುವ ಉದ್ದೇಶದಿಂದ ಎರಡು ಪಿಂಕ್, ತಲಾ ಒಂದು ಯುವ, ಪಿಡಬ್ಲೂಡಿ, ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತದಾರರ ವಿವರ
ದಾವಣಗೆರೆ ದಕ್ಷಿಣ
ಒಟ್ಟು ಮತದಾರರು-2,31,683
ಪುರುಷರು- 1,13,683
ಮಹಿಳೆಯರು- 1,17,986
ಒಟ್ಟು ಮತಗಟ್ಟೆಗಳು- 284
ಬಾಗಲಕೋಟೆ
ಪುರುಷ ಮತದಾರರು-1,26,999
ಮಹಿಳಾ ಮತದಾರರು-1,32,775
ತೃತೀಯ ಲಿಂಗಿಗಳು-23
ಒಟ್ಟು- 2,59,797
ಒಟ್ಟು ಮತಗಟ್ಟೆ- 322
ಭದ್ರತೆಗೆ 16 ಕಂಪನಿ ಕೇಂದ್ರ ಪಡೆ
ಬೆಂಗಳೂರು,ಏ.8- ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ನಡೆಯಲಿರುವ ಉಪ ಚುನಾವಣೆಯ ಬಂದೋಬಸ್ತ್‌ಗಾಗಿ 16 ಕಂಪನಿ ಕೇಂದ್ರ ಪಡೆಗಳು ಬಂದಿವೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಹಿತೇಂದ್ರ ಅವರು ಹೇಳಿದರು.
ಈ ಸಂಜೆಯೊಂದಿಗೆ ಮಾತನಾಡಿದ ಅವರು, ಈ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಪೊಲೀಸರ ಜೊತೆಗೆ ತಲಾ 8 ಕೇಂದ್ರ ಪಡೆಗಳನ್ನು ನಿಯೋಜಿಸಿದ್ದೇವೆ ಎಂದರು. ಬಾಗಲಕೋಟೆ ವಿಧಾನ ಸಭಾ ಕ್ಷೇತ್ರಕ್ಕೆ ಎರಡು ಕಂಪನಿ ಸಿಐಎಸ್‌ಎಫ್, ಎರಡು ಕಂಪನಿ ಬಿಎಸ್‌ಎಫ್, ನಾಲ್ಕು ಕಂಪನಿ ಎಸ್‌ಎಸ್‌ಬಿ ಹಾಗೂ ದಾವಣಗೆರೆ ದಕ್ಷಿಣಕ್ಕೆ ಎರಡು ಸಿಆರ್‌ಪಿಎಫ್ ಮತ್ತು ಆರು ಸಿಐಎಸ್‌ಎಫ್ ಪಡೆಗಳನ್ನು ನಿಯೋಜಿಸಿರುವುದಾಗಿ ಅವರು ತಿಳಿಸಿದರು.
ನಾಳೆ ನಡೆಯಲಿರುವ ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹಿತೇಂದ್ರ ಹೇಳಿದರು.
