ಟೆಹ್ರಾನ್,ಏ.8: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ಭಾರೀ ದಾಳಿಗಳನ್ನು ನಡೆಸುವ ತಮ ಬೆದರಿಕೆಗಳನ್ನು ಹಿಂಪಡೆದುಕೊಂಡಿದ್ದು, ಅಮೆರಿಕಾ ಮತ್ತು ಇರಾನ್ ನಡುವೆ ಎರಡು ವಾರಗಳ ಯುದ್ಧ ವಿರಾಮಕ್ಕೆ ಒಪ್ಪಂದವಾಗಿದೆ. ಈ ಒಪ್ಪಂದದ ಭಾಗವಾಗಿ ಹೋರ್ಮುಜ್ ಸಮುದ್ರಸಂಧಿಯನ್ನು ಮತ್ತೆ ತೆರೆಯಲು ಸಹ ಒಪ್ಪಲಾಗಿದೆ.
ಟ್ರಂಪ್ ಅವರು ಇರಾನ್‌ಗೆ ಒಪ್ಪಂದಕ್ಕೆ ಒಪ್ಪಿಕೊಳ್ಳಲು ಗಡುವು ನೀಡಿದ್ದು, ಒಪ್ಪಲಿಲ್ಲವಾದರೆ ಅದರ ಸೇತುವೆಗಳು ಮತ್ತು ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಸಿದ್ದರು. ಆದರೆ ಗಡುವು ಮುಗಿಯಲು ಎರಡು ಗಂಟೆಗಳಷ್ಟಿರುವಾಗ ಅವರು ಯುದ್ಧ ತೀವ್ರತೆಯನ್ನು ಕಡಿಮೆ ಮಾಡುವ ನಿರ್ಧಾರ ಕೈಗೊಂಡರು.
ಇರಾನ್‌ನ ಸುಪ್ರೀಂ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ಯುದ್ಧ ವಿರಾಮವನ್ನು ಅಂಗೀಕರಿಸಿದೆ ಎಂದು ತಿಳಿಸಿದೆ. ಪಾಕಿಸ್ತಾನದಲ್ಲಿ ಅಮೆರಿಕದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದೆ. ಆದರೆ ಯುದ್ಧ ವಿರಾಮ ಯಾವಾಗಿನಿಂದ ಜಾರಿಗೆ ಬರುತ್ತದೆ ಎಂಬುದನ್ನು ಎರಡೂ ದೇಶಗಳು ಸ್ಪಷ್ಟಪಡಿಸಿಲ್ಲ.
ಇಂದು ಬೆಳಿಗ್ಗೆ ಇಸ್ರೇಲ್, ಇರಾನ್ ಹಾಗೂ ಗಲ್‌್ಫ ಪ್ರದೇಶಗಳಲ್ಲಿ ದಾಳಿಗಳು ನಡೆದಿರುವ ವರದಿಯಿದೆ.ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಈ ಯುದ್ಧ ವಿರಾಮಕ್ಕೆ ಬೆಂಬಲ ವ್ಯಕ್ತಪಡಿಸಿದರೂ, ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧದ ಯುದ್ಧಕ್ಕೆ ಇದು ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇರಾನ್ ತಕ್ಷಣ ಹೋರ್ಮುಜ್ ಸಮುದ್ರಸಂಧಿಯನ್ನು ತೆರೆಯಬೇಕು ಹಾಗೂ ಅಮೆರಿಕಾ, ಇಸ್ರೇಲ್ ಮತ್ತು ಇತರ ದೇಶಗಳ ಮೇಲೆ ದಾಳಿಗಳನ್ನು ನಿಲ್ಲಿಸಬೇಕು ಎಂಬ ಷರತ್ತಿನಡಿ ಇಸ್ರೇಲ್ ಬೆಂಬಲ ನೀಡಿದೆ. ಪಾಕಿಸ್ತಾನ ಪ್ರಧಾನಿ ಪ್ರಕಾರ, ಈ ಒಪ್ಪಂದ ಲೆಬನಾನ್‌ನಲ್ಲಿ ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಹೋರಾಟ ನಿಲ್ಲಿಸುವುದನ್ನೂ ಒಳಗೊಂಡಿದೆ. ಹಾಗಾಗಿ ಈ ಯುದ್ಧ ವಿರಾಮ ಪ್ರಕ್ರಿಯೆಯಲ್ಲಿ ಗೊಂದಲ ಉಂಟಾಗಿದೆ.
ಇರಾನ್ 10 ಅಂಶಗಳ ಯೋಜನೆಯ ವಿಭಿನ್ನ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಫಾರ್ಸಿ ಭಾಷೆಯ ಆವೃತ್ತಿಯಲ್ಲಿ ಅದರ ಅಣು ಕಾರ್ಯಕ್ರಮದ ಸಂವರ್ಧನೆಗೆ ಅನುಮತಿ ಎಂಬ ಪದ ಬಳಕೆಯಾಗಿದ್ದರೂ, ಇಂಗ್ಲಿಷ್ ಆವೃತ್ತಿಯಲ್ಲಿ ಅದು ಕಾಣಿಸಿಲ್ಲ.ಟ್ರಂಪ್ ಮೊದಲಿಗೆ ಈ ಯೋಜನೆಯನ್ನು ಕಾರ್ಯನಿರ್ವಹಣೆಗೆ ಯೋಗ್ಯ ಎಂದು ಹೇಳಿದರೂ, ನಂತರ ಅದನ್ನು ಮೋಸಪೂರಿತ ಎಂದು ಹೇಳಿದ್ದಾರೆ. ಇರಾನ್‌ನ ಅಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಯುದ್ಧದ ಪ್ರಮುಖ ಗುರಿಯಾಗಿತ್ತು.
ಇನ್ನು ಮಹತ್ವದ ಬೆಳವಣಿಗೆಯಲ್ಲಿ ಯುದ್ಧ ವಿರಾಮ ಘೋಷಣೆಯ ನಂತರ ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಸರ್ಕಾರ ಪರ ಪ್ರತಿಭಟನೆಗಳು ನಡೆದಿದ್ದು, ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಧ್ವಜಗಳನ್ನು ದಹಿಸಲಾಗಿದೆ.
ಹೋರ್ಮುಜ್ ಸಮುದ್ರಸಂಧಿಯಲ್ಲಿ ಸಾಗಾಟ ಶುಲ್ಕ:
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು, ಸಮುದ್ರಸಂಧಿ ಮೂಲಕ ಸಾಗಾಟ ಇರಾನ್ ಸೈನಿಕ ನಿಯಂತ್ರಣದಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ. ಇದರಿಂದ ಇರಾನ್ ತನ್ನ ನಿಯಂತ್ರಣವನ್ನು ಸಂಪೂರ್ಣವಾಗಿ ಸಡಿಲಗೊಳಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.ಈ ಯೋಜನೆಯ ಪ್ರಕಾರ, ಹಡಗುಗಳು ಸಮುದ್ರಸಂಧಿ ಮೂಲಕ ಸಾಗುವಾಗ ಇರಾನ್ ಮತ್ತು ಓಮಾನ್ ಎರಡೂ ದೇಶಗಳು ಶುಲ್ಕ ವಿಧಿಸಬಹುದು.
ಈ ಹಣವನ್ನು ಇರಾನ್ ಪುನರ್‌ನಿರ್ಮಾಣಕ್ಕಾಗಿ ಬಳಸುವ ಸಾಧ್ಯತೆ ಇದೆ.ಯುದ್ಧವನ್ನು ಕೊನೆಗೊಳಿಸಲು ಇರಾನ್ ಇತರ ಬೇಡಿಕೆಗಳಾಗಿ ಅಮೆರಿಕಾ ಸೇನೆಗಳನ್ನು ಪ್ರದೇಶದಿಂದ ಹಿಂತೆಗೆದುಕೊಳ್ಳುವುದು, ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವುದು ಹಾಗೂ ತನ್ನ ಸ್ಥಗಿತಗೊಂಡ ಆಸ್ತಿಗಳನ್ನು ಬಿಡುಗಡೆ ಮಾಡುವುದು ಸೇರಿವೆ.
ಯುದ್ಧ ಆರಂಭವಾದಾಗಿನಿಂದ ಟ್ರಂಪ್ ಹಲವು ಬಾರಿ ಗಡುವುಗಳನ್ನು ಮುಂದೂಡುತ್ತಿದ್ದಾರೆ. ಮಂಗಳವಾರ ಅವರು ಪಾಕಿಸ್ತಾನ ಪ್ರಧಾನಮಂತ್ರಿ ಶೆಹ್ಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಂ ಮುನೀರ್ ಅವರೊಂದಿಗೆ ನಡೆದ ಮಾತುಕತೆಗಳ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಷರೀಫ್ ಅವರು ಎರಡು ವಾರಗಳ ಕಾಲಾವಕಾಶ ನೀಡುವಂತೆ ಟ್ರಂಪ್ ಅವರಲ್ಲಿ ಮನವಿ ಮಾಡಿದ್ದರು.
ಬಹುತೇಕ ಪ್ರಮುಖ ವಿಷಯಗಳಲ್ಲಿ ಒಪ್ಪಂದವಾಗಿದ್ದು, ಎರಡು ವಾರಗಳಲ್ಲಿ ಅಂತಿಮ ಒಪ್ಪಂದ ಸಾಧ್ಯ,ಎಂದು ಟ್ರಂಪ್ ಹೇಳಿದ್ದಾರೆ. ಇಸ್ರೇಲ್‌ನಲ್ಲಿ ಈ ಒಪ್ಪಂದದ ಬಗ್ಗೆ ಕೆಲ ಆತಂಕಗಳಿದ್ದು, ಇನ್ನಷ್ಟು ಸಾಧನೆ ಸಾಧ್ಯವೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
