ಬೆಂಗಳೂರು, ಜೂ.10- ರಾಜ್ಯಸಭಾ ಸದಸ್ಯರಾಗಿ ಮುಂದುವರೆಯಲು ಅಪೇಕ್ಷೆ ಪಟ್ಟಿರಲಿಲ್ಲ ಎಂದು ಸ್ಪಷ್ಟಪಡಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಎನ್‌ಡಿಎ ಮೈತ್ರಿಕೂಟದೊಂದಿಗಿನ ಜೆಡಿಎಸ್ ಸಂಬಂಧ ಮುಂದುವರೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ನನ್ನ ಸಂಬಂಧ ರಾಜ್ಯಸಭಾ ಸದಸ್ಯ ಸ್ಥಾನಕ್ಕಿಂತ ಮಿಗಿಲಾಗಿದೆ. ಕಳೆದ 10 ವರ್ಷಗಳಿಂದಲೂ ಅವರ ಮತ್ತು ನನ್ನ ವೈಯಕ್ತಿಕ ಸಂಬಂಧ ಸುಮಧುರವಾಗಿದ್ದು, ಮುಂದೆಯೂ ಮುಂದು ವರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಮೇ 26 ರಂದು ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರ ಪುಸ್ತಕ ಬಿಡುಗಡೆ ಮಾಡಿದ್ದೆ. ಆನಂತರ ಬಿಜೆಪಿಯ ಯಾವೊಬ್ಬ ನಾಯಕರನ್ನೂ ಭೇಟಿ ಮಾಡದೆ ಬೆಂಗಳೂರಿಗೆ ವಾಪಸ್ಸು ಮರಳಿದ್ದೆ. ಒಂದು ವೇಳೆ ರಾಜ್ಯಸಭಾ ಸ್ಥಾನದ ವ್ಯಾಮೋಹ ಇದ್ದಿದ್ದರೆ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿರಲಿಲ್ಲವೇ ? ಎಂದು ಅವರು ಪ್ರಶ್ನಿಸಿದರು.
ರಾಜ್ಯ ವಿಧಾನಸಭೆಯಲ್ಲಿ ಜೆಡಿಎಸ್‌ನ 18 ಶಾಸಕರಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ನೀಡಿದ್ದ ಹೇಳಿಕೆಯನ್ನು ಸ್ವಾಗತಿಸಿದ್ದೇನೆ ಎಂದರು.
ನನ್ನ ಮತ್ತು ಮೋದಿಯವರ ಸಂಬಂಧ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಸೀಮಿತವಿಲ್ಲ. ಅದಕ್ಕಿಂತ ಮಿಗಿಲಾಗಿದೆ. ರಾಜ್ಯದ ಜನರು ಈ ಬಗ್ಗೆ ತಪ್ಪು ತಿಳಿಯಬಾರದು ಎಂದು ಅವರು ಹೇಳಿದರು.
ಸ್ವಂತ ಶಕ್ತಿಯ ಮೇಲೆ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಬಹುದಾಗಿದ್ದರೂ ಎನ್‌ಡಿಎ ಮೈತ್ರಿಕೂಟದ ಜೊತೆ ನಮನ್ನು ಸೇರಿಸಿಕೊಂಡಿದ್ದಾರೆ.
ಗೋದ್ರಾ ಹತ್ಯೆ ಪ್ರಕರಣದಲ್ಲಿ ಮೋದಿಯವರನ್ನು ಸಾಕಷ್ಟು ಟೀಕೆ ಮಾಡಿದ್ದೆ. ಕಳೆದ 10 ವರ್ಷದಿಂದ ಅವರ ಮತ್ತು ನನ್ನ ಸಂಬಂಧ ಮುಂದುವರೆಯುತ್ತಾ ಬಂದಿದೆ. ಮೋದಿಯವರ ಆಡಳಿತದ ಬಗ್ಗೆ ನನ್ನ ಭಾವನೆಯನ್ನು ನಿರ್ಭಯವಾಗಿ ಹೇಳಿದ್ದೇನೆ. ಮೋದಿಯವರ ನಾಯಕತ್ವವನ್ನು ಸಮರ್ಥಿಸಿಕೊಂಡು ಮಾತನಾಡಿದ್ದೇನೆ ಎಂದರು.
140 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. 2047ರ ವೇಳೆಗೆ 5 ಟ್ರಿಲಿಯನ್ ಆರ್ಥಿಕ ಶಕ್ತಿಗೆ ತೆಗೆದುಕೊಂಡು ಹೋಗಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಕೇವಲ ನಮ ದೇಶದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ಮೋದಿಯವರನ್ನು ನಾಯಕರೆಂದು ಒಪ್ಪಿದ್ದಾರೆ. ಆ ಮಟ್ಟಕ್ಕೆ ಬೆಳೆದಿರುವ ಮತ್ತೊಬ್ಬ ಪ್ರತಿಸ್ಪರ್ಧಿ ನಾಯಕರಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಸಭಾ ಸದಸ್ಯರಾಗಿಲ್ಲದಿದ್ದರೂ ಮೋದಿ ಮತ್ತು ನನ್ನ ಸಂಬಂಧ ಮುಂದುವರೆಯಲಿದ್ದು, ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವಿಚಾರಕ್ಕೆ ಪತ್ರ ಬರೆಯುವುದು, ಭೇಟಿ ಮಾಡುವುದು ಮುಂದುವರೆಯಲಿದೆ. ಕೇಂದ್ರ ಸಂಪುಟದಲ್ಲಿ ಕುಮಾರಸ್ವಾಮಿ ಸಚಿವರಾಗಿ ಮುಂದುವರೆಯುತ್ತಾರೆ ಎಂದು ಅವರು ಹೇಳಿದರು.
ಕಳೆದ 2-3 ದಿನಗಳಿಂದಲೂ ದೇವೇಗೌಡರಿಗೆ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅವಕಾಶ ಸಿಗಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಗಳು ಬಿತ್ತರವಾದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ನೀಡಿದ್ದೇನೆ ಎಂದರು.
ಕಳೆದ 7 ದಶಕಗಳಿಂದಲೂ ನಾನು ರಾಜಕೀಯದಲ್ಲಿ ಇದ್ದೇನೆ. 1953-54 ರಲ್ಲಿ ಗುತ್ತಿಗೆದಾರ ವೃತ್ತಿಯಿಂದ ಜನಪರ ಸೇವೆ ಆರಂಭಿಸಿದೆ. ಈಗ 93 ವರ್ಷ ವಯಸ್ಸಾಗಿದೆ. ಆದರೂ ಜನಸೇವೆ ಮಾಡುವ ಹಂಬಲ ಮಾತ್ರ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮೋದಿಗೆ ಶ್ಲಾಘನೆ :
ಜವಾಹರಲಾಲ್ ನೆಹರೂ ಅವರಿಗಿಂತ ಹೆಚ್ಚು ಅವಧಿ ಮೋದಿಯವರು ಪ್ರಧಾನಿಯಾಗಿ ಕೆಲಸ ಮಾಡಿದ್ದಾರೆ. ದೇಶದ ಪ್ರಗತಿಗೆ ಹಲವಾರು ಕಾರ್ಯಕ್ರಮ ತಂದಿದ್ದಾರೆ. ಆರ್ಥಿಕಾಭಿವೃದ್ಧಿಗೂ ಪ್ರಯತ್ನ ಮಾಡಿದ್ದಾರೆ. ವಿಶ್ವಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಅವರು ಸಮರ್ಥ ನಾಯಕರಿದ್ದಾರೆ ಎಂದು ಶ್ಲಾಘಿಸಿದರು.
ಪಕ್ಷ ಸಂಘಟನೆಗೆ ಒತ್ತು :
ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಗೆ ಏನೇನು ಬೇಕೋ ಅದನ್ನು ಮಾಡುತ್ತೇನೆ. ಅದಕ್ಕೆ ಯಾರ ಹಂಗೂ ಇಲ್ಲ. ನಿರ್ಭಯವಾಗಿ ಪಕ್ಷಸಂಘಟನೆ ಮಾಡುತ್ತೇವೆ. ಮುಂದೆ ಜಿಬಿಎ, ಜಿ.ಪಂ., ತಾ.ಪಂ. ಸೇರಿದಂತೆ ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಜೆಡಿಎಸ್ ನಡುವೆ ಸೀಟು ಹೊಂದಾಣಿಕೆ ಮೈತ್ರಿ ಆಗಬೇಕು. ಅವರು ಕರೆದಾಗ ಹೋಗುತ್ತೇನೆ.
ಎಲ್ಲಿ ನನ್ನ ಅವಶ್ಯಕತೆ ಇದೆಯೋ ಅಲ್ಲಿ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಹಲಸು ಹಾಗೂ ಹುಣಸೆ ಹಣ್ಣಿನ ಮಂಡಳಿ ರಚನೆ ಮಾಡುವ ಭರವಸೆಯನ್ನು ಕೇಂದ್ರ ಸಚಿವರು ಈಡೇರಿಸಿಲ್ಲ. ಈ ಬಗ್ಗೆ ಮತ್ತೊಮೆ ಅವರಿಗೆ ಪತ್ರ ಬರೆದು ಮನವಿ ಮಾಡುತ್ತೇನೆ. ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚು ಸಮಸ್ಯೆ ಇದೆ ಎಂದರು.
ಕಬ್ಬನ್‌ಪಾರ್ಕ್ ಮತ್ತು ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಮಾವು, ಹಲಸಿನ ಮೇಳಕ್ಕೆ ಭೇಟಿ ನೀಡಿದ್ದೆ. ಅಲ್ಲಿ ಹಲಸಿನ ಹಣ್ಣು ಕಡಿಮೆ ಇದ್ದಿದ್ದು ಕಂಡುಬಂದಿತು. ಹಳೇ ಮೈಸೂರು ಭಾಗದಲ್ಲಿ ರಾಶಿ ರಾಶಿ ಹಲಸಿನಹಣ್ಣನ್ನು ನೋಡಬಹುದು. ಹಲಸಿನ ಹಣ್ಣಲ್ಲದೆ ಎಳೆಯ ಕಾಯಿಯನ್ನು ಅಡುಗೆಗೂ ಬಳಸುತ್ತಾರೆ. ಮಖಾನ ವಿಚಾರದಲ್ಲಿ ಒಂದು ವಾರದಲ್ಲಿ ನಿರ್ಣಯ ಮಾಡಿದ್ದರು. ಆದರೆ ಹಲಸು ಮಂಡಳಿ ರಚನೆ ವಿಚಾರದಲ್ಲಿ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ಚೌಡರೆಡ್ಡಿ ತೂಪಲ್ಲಿ, ಎಚ್.ಎಂ.ರಮೇಶ್‌ಗೌಡ, ಕೆ.ಎ.ತಿಪ್ಪೇಸ್ವಾಮಿ, ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ.ರಂಗನಾಥ, ಮುಖಂಡರಾದ ಗುರುರಾಜ ಹುಣಸಿಮರದ್, ಚಂದನ್ ಮತ್ತಿತರರಿದ್ದರು.
