ಹಾಸನ, ಜು.21- ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಇಂದು ಕುಟುಂಬ ಸದಸ್ಯರೊಂದಿಗೆ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆಯಲ್ಲಿರುವ ಚನ್ನಮ ದೇವೇಗೌಡ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು.
ಜುಲೈ 30ರಂದು ನಡೆಯಲಿರುವ ಆರಾಧನಾ ಮಹೋತ್ಸವದವರೆಗೆ ಸಮಾಧಿ ಬಳಿ ಬೆಳಗಿಸಿರುವ ಅಖಂಡ ದೀಪ ನಿರಂತರವಾಗಿ ಉರಿಯುವಂತೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ದೇವೇಗೌಡರು ಸೂಚಿಸಿದರು. ಪ್ರತಿನಿತ್ಯ ಪೂಜೆ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವಂತೆ ಪುರೋಹಿತರಿಗೆ ಅವರು ನಿರ್ದೇಶನ ನೀಡಿದರು.
ಸಮಾಧಿ ಬಳಿ ಬೆಳಗಿಸಿರುವ ಅಖಂಡ ದೀಪ ಆರದಂತೆ ಅದರ ಸುತ್ತ ಹಾಲೋಬ್ರಿಕ್ಸ್ ಅಳವಡಿಸಿ ರಕ್ಷಣೆ ಮಾಡುವ ಕಾರ್ಯವನ್ನು ಪುತ್ರಿ ಅನಸೂಯ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಪುತ್ರರಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ, ಪುತ್ರಿ ಶೈಲಜಾ, ಸೊಸೆ ಭವಾನಿ ರೇವಣ್ಣ ಅವರು ಉಪಸ್ಥಿತರಿದ್ದರು.
