ಬೆಂಗಳೂರು, ಜೂ. 3- ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಇಂದು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ 13 ಜನ ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಪುಟದಲ್ಲಿ ಬಹುತೇಕ ಕಿರಿಯ ಹಾಗೂ ಅನುಭವಿಗಳಿಗೆ ಆಧ್ಯತೆ ನೀಡಲಾಗಿದೆ. ನಾಲ್ಕು ಉಪಮುಖ್ಯಮಂತ್ರಿಗಳ ಪ್ರಸ್ತಾವನೆಯನ್ನು ಕೈಬಿಟ್ಟಿರುವ ಹೈಕಮಾಂಡ್, ಡಾ.ಜಿ.ಪರಮೇಶ್ವರ್ ಅವರನ್ನು ಏಕೈಕ ಪ ಮುಖ್ಯಮಂತ್ರಿಯನ್ನಾಗಿ ನಿಯೋಜಿಸಿದೆ.
ನೂತನ ಸಂಪುಟ:
ಡಿ.ಕೆ.ಶಿವಕುಮಾರ್-ಮುಖ್ಯಮಂತ್ರಿ
ಡಾ.ಜಿ.ಪರಮೇಶ್ವರ್-ಉಪಮುಖ್ಯಮಂತ್ರಿ
ಸಚಿವರು:
ಕೆ.ಎಚ್.ಮುನಿಯಪ್ಪ
ಕೆ.ಜೆ.ಜಾರ್ಜ್
ಎಂ.ಬಿ.ಪಾಟೀಲ್
ರಾಮಲಿಂಗಾರೆಡ್ಡಿ
ಸತೀಶ್ ಜಾರಕಿಹೊಳಿ
ಕೃಷ್ಣ ಭೈರೇಗೌಡ
ಪ್ರಿಯಾಂಕ್ ಖರ್ಗೆ
ಯು.ಟಿ.ಖಾದರ್
ಈಶ್ವರ್ ಖಂಡ್ರೆ
ಯತೀಂದ್ರ ಸಿದ್ದರಾಮಯ್ಯ
ಬೈರತಿ ಸುರೇಶ್
ಶರಣ ಪ್ರಕಾಶ್ ಪಾಟೀಲ್
ಲೋಕಭವನದಲ್ಲಿ ಸಂಜೆ 4.05ಕ್ಕೆ ನಡೆಯುವ ಸರಳ ಹಾಗೂ ಅರ್ಥಪೂರ್ಣ ಸಮಾರಂಭಕ್ಕಾಗಿ ಭಾರೀ ಸಿದ್ಧತೆಗಳು ನಡೆದಿವೆ. ಜ್ಯೋತಿಷಿಗಳ ಸಲಹೆ ಮೇರೆಗೆ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಎಐಸಿಸಿಯ ಪ್ರಮುಖ ನಾಯಕರು, ಖ್ಯಾತ ಚಲನಚಿತ್ರ ನಟ-ನಟಿಯರು ಸೇರಿದಂತೆ ಸುಮಾರು 1 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಬಿಜೆಪಿಯ ಹಿರಿಯ ನಾಯಕರಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆವರ ಮನೆಗೆ ಭೇಟಿ ನೀಡಿದ ಡಿ.ಕೆ.ಶಿವಕುಮಾರ್ ದೇವರ ಕೋಣೆಗೆ ಹೋಗಿ ಕೈ ಮುಗಿದು ವಿಭೂತಿ ಹಣೆಗೆ ಹಚ್ಚಿಕೊಂಡು ನಂತರ ಹೊರಗೆ ಬಂದು ಯಡಿಯೂರಪ್ಪ ಅವರ ಅಭಿನಂದನೆ ಸ್ವೀಕರಿಸಿದ್ದಾರೆ. ಬಳಿಕ ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದಾರೆ.
ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನೆಗೆ ಭೇಟಿ ನೀಡಿ, ಆಶೀರ್ವಚನ ಪಡೆಯಲಿದ್ದು, ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿದ್ದಾರೆ. ಪ್ರಮಾಣವಚನ ಸ್ವೀಕಾರದ ಬಳಿಕ, ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.
ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಲೋಕ ಭವನದವರೆಗೆ ಸುಮಾರು 5 ಸಾವಿರ ಜನರಿಗಾಗುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಸಂಚಾರ ವ್ಯವಸ್ಥೆ, ವಾಹನ ನಿಲುಗಡೆಯನ್ನು ಬದಲಾವಣೆ ಮಾಡಲಾಗಿದೆ. ವೇದಿಕೆಯ ಮೇಲೆ 20 ಜನರಿಗೆ ಆಸನ ವ್ಯವಸ್ಥೆ, ಸಮೀಪದಲ್ಲೇ 40ಕ್ಕೂ ಹೆಚ್ಚು ವಿವಿಧ ಧರ್ಮಗಳ ಮಠಾಧೀಶರು, ಫಾದರ್‌ಗಳು, ಮೌಲ್ವಿಗಳು ಹಾಗೂ ಸಂತರಿಗೆ ವ್ಯವಸ್ಥೆ ಮಾಡಲಾಗಿದೆ. ಲೋಕಭವನದ ಒಳಗಡೆ ವಾಹನ ನಿಲುಗಡೆಯನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ಮುಖ್ಯ ದ್ವಾರದಿಂದ ಸಭಾಂಗಣದವರೆಗೂ ವಿಐಪಿಗಳನ್ನು ಕರೆದೊಯ್ಯಲು ಎಲೆಕ್ಟ್ರಿಕ್ ವಾಹನಗಳನ್ನು ಸಜ್ಜುಗೊಳಿಸಲಾಗಿದೆ.
ಡಿ.ಕೆ.ಶಿವಕುಮಾರ್ ಅವರ ಜೀವನದ ಅಮೃತಗಳಿಗೆಗಾಗಿ ನಾಡಿನ ವಿವಿಧ ಮಠಗಳು, ಧಾರ್ಮಿಕ ಸಂಸ್ಥೆಗಳು ಶುಭ ಹಾರೈಸಿವೆ. ಮೈಸೂರಿನ ಸುತ್ತೂರು ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಸಾದ, ಫಲಪುಷ್ಪಗಳನ್ನು ಆಶೀರ್ವಾದ ರೂಪದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕಳುಹಿಸಲಾಗಿದೆ.
ನಿನ್ನೆ ತಡರಾತ್ರಿ 11ಗಂಟೆಯಿಂದ 2ಗಂಟೆಯವರೆಗೂ ಡಿ.ಕೆ.ಶಿವಕುಮಾರ್, ಪತ್ನಿ ಉಷಾರವರ ಜೊತೆಗೂಡಿ ನಾಗರಬಾವಿಯಲ್ಲಿರುವ ಅಜ್ಜಯ್ಯನ ಪೀಠಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿನ ಶ್ರೀಗಳ ಜೊತೆಗೆ ಸುದೀರ್ಘ ಸಮಾಲೋಚನೆ ನಡೆಸಿ, ಸಲಹೆ ಸೂಚನೆ ಪಡೆದಿದ್ದಾರೆ.
ಲೋಕಭವನಕ್ಕೆ ಪಟ್ಟಿ ರವಾನೆ:
ಎರಡು ಹಂತದಲ್ಲಿ ಸಚಿವ ಸಂಪುಟ ರಚನೆಯಾಗಲಿದ್ದು, ಸಂಭವನೀಯ ಸಚಿವರ ಕುರಿತು ನಿನ್ನೆ ಹೈಕಮಾಂಡ್ ಜೊತೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಮಗ್ರ ಚರ್ಚೆ ನಡೆಸಿದ್ದರು. ಬಹುತೇಕ ಮೊದಲ ಹಂತದಲ್ಲಿ 13 ಮಂದಿ ಸಚಿವರ ಪಟ್ಟಿಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ. ಆ ಪಟ್ಟಿಯನ್ನು ಇಂದು ಬೆಳಗ್ಗೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಪ್ರಮಾಣವಚನ ಬೋಧಿಸಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರವಾನಿಸಿದ್ದಾರೆ.
ಮೂಲಗಳ ಪ್ರಕಾರ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಕೆ.ಎಚ್.ಮುನಿಯಪ್ಪ, ಸತೀಶ್‌ಜಾರಕಿಹೊಳಿ, ಬೈರತಿ ಸುರೇಶ್, ಶರಣಪ್ರಕಾಶ್ ಪಾಟೀಲ್, ಯು.ಟಿ.ಖಾದರ್, ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೆಸರುಗಳ ಪಟ್ಟಿಯನ್ನು ಡಿ.ಕೆ.ಶಿವಕುಮಾರ್ ಲೋಕಭವನಕ್ಕೆ ಕಳುಸಿದ್ದಾರೆ ಎನ್ನಲಾಗಿದೆ.
ವಿಧಾನ ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಇಂದು ಮಧ್ಯಾಹ್ನ ಉಪಾಧ್ಯಕ್ಷ ರುದ್ರಪ್ಪ ಲಮಾಣಿಯವರಿಗೆ ತಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಲೋಕಭವನಕ್ಕೆ ಬರುವಂತೆ ಸಂದೇಶ ರವಾನೆಯಾಗಿದೆ.
ಆರಂಭದಲ್ಲಿ ಉಪ ಮುಖ್ಯಮಂತ್ರಿಗಳ ಹುದ್ದೆ ಬೇಡ ಎಂದು ಡಿ.ಕೆ.ಶಿವಕುಮಾರ್ ಹಠ ಹಿಡಿದಿದ್ದರು. ಆದರೆ ಸಿದ್ದರಾಮಯ್ಯ ಅವರ ಬಿಗಿ ಪಟ್ಟಿನಿಂದಾಗಿ ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆತ್ತಿದೆ.
ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್ ಅವರನ್ನು ನೇಮಿಸಲು ಪಕ್ಷ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ಅವರ ಹೆಸರು ಕೇಳಿ ಬಂದಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಅವರು ಈವರೆಗೂ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
