ಬೆಂಗಳೂರು, ಜೂ. 3- ಉಪ ಮುಖ್ಯಮಂತ್ರಿಯಾಗಿದ್ದ ಡಿ.ಕೆ.ಶಿವಕುಮಾರ್ ಇಂದು ಮುಖ್ಯಮಂತ್ರಿಯಾಗಿ 12 ಜನ ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಲೋಕಭವನದಲ್ಲಿ ಸಂಜೆ 4.05ಕ್ಕೆ ನಡೆಯುವ ಸರಳ ಹಾಗೂ ಅರ್ಥಪೂರ್ಣ ಸಮಾರಂಭಕ್ಕಾಗಿ ಭಾರೀ ಸಿದ್ಧತೆಗಳು ನಡೆದಿವೆ. ಜ್ಯೋತಿಷಿಗಳ ಸಲಹೆ ಮೇರೆಗೆ ವೇದಿಕೆಯನ್ನು ಸಜ್ಜುಗೊಳಿಸಲಾಗಿದೆ. ಎಐಸಿಸಿಯ ಪ್ರಮುಖ ನಾಯಕರು, ಖ್ಯಾತ ಚಲನಚಿತ್ರ ನಟ-ನಟಿಯರು ಸೇರಿದಂತೆ ಸುಮಾರು 1 ಸಾವಿರ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನೆಗೆ ಭೇಟಿ ನೀಡಿ, ಆಶೀರ್ವಚನ ಪಡೆಯಲಿದ್ದು, ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿದ್ದಾರೆ. ಪ್ರಮಾಣವಚನ ಸ್ವೀಕಾರ ಬಳಿಕ, ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ.

ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ಲೋಕ ಭವನದವರೆಗೆ ಸುಮಾರು 5 ಸಾವಿರ ಜನರಿಗಾಗುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಸಂಚಾರ ವ್ಯವಸ್ಥೆ, ವಾಹನ ನಿಲುಗಡೆಯನ್ನು ಬದಲಾವಣೆ ಮಾಡಲಾಗಿದೆ. ವೇದಿಕೆಯ ಮೇಲೆ 20 ಜನರಿಗೆ ಆಸನ ವ್ಯವಸ್ಥೆ, ಸಮೀಪದಲ್ಲೇ 40ಕ್ಕೂ ಹೆಚ್ಚು ವಿವಿಧ ಧರ್ಮಗಳ ಮಠಾದೀಶರು, ಫಾದರ್‌ಗಳು, ಮೌಲ್ವಿಗಳು ಹಾಗೂ ಸಂತರಿಗೆ ವ್ಯವಸ್ಥೆ ಮಾಡಲಾಗಿದೆ. ಲೋಕಭವನದ ಒಳಗಡೆ ವಾಹನ ನಿಲುಗಡೆಯನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ಮುಖ್ಯ ದ್ವಾರದಿಂದ ಸಭಾಂಗಣದವರೆಗೂ ವಿಐಪಿಗಳನ್ನು ಕರೆದೊಯ್ಯಲು ಎಲೆಕ್ಟ್ರಿಕ್ ವಾಹನಗಳನ್ನು ಸಜ್ಜುಗೊಳಿಸಲಾಗಿದೆ.
ಡಿ.ಕೆ.ಶಿವಕುಮಾರ್ ಅವರ ಜೀವನದ ಅಮೃತಗಳಿಗೆಗಾಗಿ ನಾಡಿನ ವಿವಿಧ ಮಠಗಳು, ಧಾರ್ಮಿಕ ಸಂಸ್ಥೆಗಳು ಶುಭ ಹಾರೈಸಿವೆ. ಮೈಸೂರಿನ ಸುತ್ತೂರು ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಸಾದ, ಫಲಪುಷ್ಪಗಳನ್ನು ಆಶೀರ್ವಚನ ರೂಪದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕಳುಹಿಸಲಾಗಿದೆ.
ನಿನ್ನೆ ತಡರಾತ್ರಿ 11ಗಂಟೆಯಿಂದ 2ಗಂಟೆಯವರೆಗೂ ಡಿ.ಕೆ.ಶಿವಕುಮಾರ್, ಪತ್ನಿ ಉಷಾರವರ ಜೊತೆಗೂಡಿ ನಾಗರಬಾವಿಯಲ್ಲಿರುವ ಅಜ್ಜಯ್ಯನ ಪೀಠಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲಿನ ಶ್ರೀಗಳ ಜೊತೆಗೆ ಸುದೀರ್ಘ ಸಮಾಲೋಚನೆ ನಡೆಸಿ, ಸಲಹೆ ಸೂಚನೆ ಪಡೆದಿದ್ದಾರೆ.
ಲೋಕಭವನಕ್ಕೆ ಪಟ್ಟಿ ರವಾನೆ:
ಎರಡು ಹಂತದಲ್ಲಿ ಸಚಿವ ಸಂಪುಟ ರಚನೆಯಾಗಲಿದ್ದು, ಸಂಭವನೀಯ ಸಚಿವರ ಕುರಿತು ನಿನ್ನೆ ಹೈಕಮಾಂಡ್ ಜೊತೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಮಗ್ರ ಚರ್ಚೆ ನಡೆಸಿದ್ದರು. ಬಹುತೇಕ ಮೊದಲ ಹಂತದಲ್ಲಿ 12 ಮಂದಿ ಸಚಿವರ ಪಟ್ಟಿಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ. ಆ ಪಟ್ಟಿಯನ್ನು ಇಂದು ಬೆಳಗ್ಗೆ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಪ್ರಮಾಣವಚನ ಬೋಧಿಸಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರವಾನಿಸಿದ್ದಾರೆ.
ಮೂಲಗಳ ಪ್ರಕಾರ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಕೆ.ಎಚ್.ಮುನಿಯಪ್ಪ, ಸತೀಶ್‌ಜಾರಕಿಹೊಳಿ, ದಿನೇಶ್ ಗುಂಡೂರಾವ್, ಶರಣಪ್ರಕಾಶ್ ಪಾಟೀಲ್, ಯು.ಟಿ.ಖಾದರ್, ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೆಸರುಗಳ ಪಟ್ಟಿಯನ್ನು ಡಿ.ಕೆ.ಶಿವಕುಮಾರ್ ರಾಜ್ಯಭವನಕ್ಕೆ ಕಳುಸಿದ್ದಾರೆ ಎನ್ನಲಾಗಿದೆ.
ವಿಧಾನ ಸಭಾಧ್ಯಕ್ಷರಾಗಿರುವ ಯು.ಟಿ.ಖಾದರ್ ಇಂದು ಮ ಧ್ಯಾಹ್ನ ಉಪಾಧ್ಯಕ್ಷ ರುದ್ರಪ್ಪ ಲಮಾಣಿಯವರಿಗೆ ತಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರುಗಳಿಗೆ ರಾಜ್ಯ ಭವನಕ್ಕೆ ಬರುವಂತೆ ಸಂದೇಶ ರವಾನೆಯಾಗಿದೆ.
ಆರಂಭದಲ್ಲಿ ಉಪ ಮುಖ್ಯಮಂತ್ರಿಗಳ ಹುದ್ದೆ ಬೇಡ ಎಂದು ಡಿ.ಕೆ.ಶಿವಕುಮಾರ್ ಹಠ ಹಿಡಿದಿದ್ದರು. ಆದರೆ ಸಿದ್ದರಾಮಯ್ಯ ಅವರ ಬಿಗಿ ಪಟ್ಟಿನಿಂದಾಗಿ ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎನ್ನಲಾಗುತ್ತಿದೆ. ಆದರೆ ಅದು ಈವರೆಗೂ ಖಚಿತವಾಗಿಲ್ಲ. ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕರಾದ ಎಚ್.ಕೆ.ಪಾಟೀಲ್ ಅವರನ್ನು ನೇಮಿಸಲು ಪಕ್ಷ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
