Homeರಾಜ್ಯದೆಹಲಿಯಲ್ಲಿ ಡಿಕೆಶಿ-ರಾಹುಲ್‌ ಭೇಟಿ : ಸಿಎಂ ಸ್ಥಾನಕ್ಕೆ ಪಟ್ಟು

ದೆಹಲಿಯಲ್ಲಿ ಡಿಕೆಶಿ-ರಾಹುಲ್‌ ಭೇಟಿ : ಸಿಎಂ ಸ್ಥಾನಕ್ಕೆ ಪಟ್ಟು

DK Shivkumar meets Rahul in Delhi: Demand for CM's post

ಬೆಂಗಳೂರು, ಫೆ.12- ಮಹತ್ವದ ಬೆಳವಣಿಗೆ ಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹಾಗೂ ಹೈಕಮಾಂಡ್‌ನ ಇತರ ಪ್ರಮುಖರನ್ನು ಭೇಟಿ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ನಾಯಕತ್ವದ ಬದಲಾವಣೆಗೆ ಸಂಬಂಧಪಟ್ಟಂತೆ ಈವರೆಗೂ ನಡೆಯುತ್ತಿದ್ದ ಬೆಳವಣಿಗೆಗಳು ರಾಹುಲ್‌ ಗಾಂಧಿ ಭೇಟಿ ಬಳಿಕ ಪ್ರಮುಖ ಘಟ್ಟದತ್ತ ದಾಪುಗಾಲಿಟ್ಟಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ರಾಹುಲ್‌ ಗಾಂಧಿ ಹೇಳಿದಂತೆ ಅರ್ಥಾತ್‌ ಹೈಕಮಾಂಡ್‌ ಸೂಚನೆಯಂತೆ ನಡೆದುಕೊಳ್ಳುವುದಾಗಿ ಪದೇ ಪದೇ ಪ್ರತಿಪಾದಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರು ರಾಹುಲ್‌ ಗಾಂಧಿಯವರ ಮೂಲಕ ಸಿದ್ದರಾಮಯ್ಯ ಅವರಿಗೆ ನಿರ್ದೇಶನ ಕೊಡಿಸಬೇಕು ಎಂದು ಸತತ ಪ್ರಯತ್ನ ನಡೆಸಿದ್ದರು. ಆದರೆ ಅದು ಯಾವುದೂ ಸಾಧ್ಯವಾಗಿರಲಿಲ್ಲ. ರಾಹುಲ್‌ ಗಾಂಧಿಯವರು ಡಿ.ಕೆ.ಶಿವಕುಮಾರ್‌ ಅವರ ಭೇಟಿಗೆ ಸಮಯವನ್ನೇ ನೀಡದೆ ಸತಾಯಿಸುತ್ತಿದ್ದರು.

ಪಟ್ಟು ಹಿಡಿದಿದ್ದ ಡಿ.ಕೆ. ಸಹೋದರರು ನಿನ್ನೆ ಸೋನಿಯಾ ಗಾಂಧಿ ನಿವಾಸದಲ್ಲಿ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿವರು ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಡಿ.ಕೆ.ಶಿವಕುಮಾರ್‌ ಅವರು, 2023ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ತಮಗೆ ಹೈಕಮಾಂಡ್‌ ನೀಡಿದ್ದ ಭರವಸೆಯನ್ನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ್ದ ಮಾತುಕತೆಯನ್ನು ನೆನಪಿಸಿದರು ಎಂದು ಮೂಲಗಳು ತಿಳಿಸಿವೆ.

ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಪಕ್ಷಕ್ಕೆ ಉಚಿತವಲ್ಲ. ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಸಹನೆಯಿಂದ ಇರುವಂತೆ ಹೈಕಮಾಂಡ್‌ ವರಿಷ್ಠರು ಡಿ.ಕೆ.ಶಿವಕುಮಾರ್‌ ಅವರಿಗೆ ಸಲಹೆ ನೀಡಿದರು ಎಂದು ಹೇಳಲಾಗಿದೆ.

ಈ ಮೊದಲು ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಲು ಡಿ.ಕೆ.ಶಿವಕುಮಾರ್‌ ಸತತ ಪ್ರಯತ್ನ ನಡೆಸಿದ್ದರು. ಮೈಸೂರಿನ ವಿಮಾನ ನಿಲ್ದಾಣದ ರನ್‌ ವೇನಲ್ಲಿ ರಾಹುಲ್‌ ಗಾಂಧಿಯವರನ್ನು ಅಡ್ಡ ಹಾಕಿ ಡಿ.ಕೆ.ಶಿವಕುಮಾರ್‌ ತಮ ಬೇಡಿಕೆಯನ್ನು ಮಂಡಿಸಿದ್ದರು. ದೆಹಲಿಗೆ ಬನ್ನಿ ಅಲ್ಲಿ ಮಾತನಾಡೋಣ, ಇಲ್ಲಿ ಬೇಡ ಎಂದು ಹೇಳುವ ಮೂಲಕ ರಾಹುಲ್‌ ಗಾಂಧಿ ಜಾರಿಕೊಂಡಿದ್ದರು.

ಡಿ.ಕೆ.ಶಿವಕುಮಾರ್‌ ಪಕ್ಷ ತಮಗೆ ವಹಿಸಿದ್ದ ಕೆಲಸಗಳನ್ನು ನಿಷ್ಠೆ ಯಿಂದ ಮುಂದುವರಿಸಿದ್ದರು.
ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿರುವ ಡಿ.ಕೆ. ಶಿವಕುಮಾರ್‌ ಅಸ್ಸಾಂ ವಿಧಾನಸಭೆ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ತೊಡಗಿಸಿಕೊಂಡಿದ್ದರು. ಅದರ ನಡುವೆ ಸೋನಿಯಾ ಗಾಂಧಿಯವರ ನಿವಾಸದಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.

ಇದು ರಾಜ್ಯ ರಾಜಕಾರಣದಲ್ಲಿ ಬೇರೆ ರೀತಿಯ ಸಂದೇಶ ರವಾನಿಸಿದೆ. ಡಿ.ಕೆ.ಶಿವಕುಮಾರ್‌ಗೆ ಸಚಿವರು, ಶಾಸಕರ ಬೆಂಬಲ ಇಲ್ಲ. ಹೈಕಮಾಂಡ್‌ ಕೃಪಾಕಟಾಕ್ಷದಿಂದ ಅವಕಾಶ ಸಿಕ್ಕರೆ ಸಿಗಬೇಕು ಎಂಬ ಕುಹಕಗಳಿದ್ದವು.

ಡಿ.ಕೆ.ಶಿವಕುಮಾರ್‌ ಐದು ಬಾರಿ ದೆಹಲಿಗೆ ಹೋಗಿದ್ದಾಗಲೂ ರಾಹುಲ್‌ ಗಾಂಧಿ ಭೇಟಿಯಾಗದೆ ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು. ರಾಜ್ಯದಲ್ಲಿ ಶಾಸಕರು, ಸಚಿವರಷ್ಟೆ ಅಲ್ಲ, ದೆಹಲಿಯಲ್ಲಿ ವರಿಷ್ಠರ ಬೆಂಬಲವೂ ಡಿ.ಕೆ.ಶಿವಕುಮಾರ್‌ಗೆ ಇಲ್ಲ ಎಂಬ ಗುಸುಗುಸು ಹರಿದಾಡಿತ್ತು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ವಿಶ್ವಾಸದಲ್ಲಿ ಶಾಸಕರು ಮತ್ತು ಸಚಿವರು ಡಿ.ಕೆ.ಶಿವಕುಮಾರ್‌ ಕಡೆಗೆ ಮುಖ ಮಾಡಿರಲಿಲ್ಲ. ಈಗ ರಾಹುಲ್‌ಗಾಂಧಿ ಭೇಟಿಯಾಗಿದ್ದಾರೆ ಎಂದು ತಿಳಿಯುತ್ತಿದ್ದಂತೆ ನಿಧಾನವಾಗಿ ಚಿತ್ರಣ ಬದಲಾಗಲಾರಂಭಿಸಿದೆ. ಅಸ್ಸಾಂ ವಿಧಾನಸಭೆಯ ಫಲಿತಾಂಶ ಡಿ.ಕೆ.ಶಿವಕುಮಾರ್‌ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ ಎಂಬ ಚರ್ಚೆಗಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಗೋಜಿಗೂ ತಲೆ ಕಡೆಸಿಕೊಳ್ಳದೆ, 2026-27ನೇ ಸಾಲಿನ ಬಜೆಟ್‌ ತಯಾರಿಕೆಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಮತ್ತೊದೆಡೆಗೆ ಡಿ.ಕೆ. ಶಿವಕುಮಾರ್‌ ಅವರಿಗೆ ಟಾಂಗ್‌ ನೀಡುವ ಉದ್ದೇಶದಂತೆ ಸಿದ್ದರಾಮಯ್ಯ ಅವರ ಬೆಂಬಲಿಗರು ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದು ಪಕ್ಷದ ಒಳಗಿನ ಬಿಕ್ಕಟ್ಟುಗಳನ್ನು ಮತ್ತಷ್ಟು ಅನಾವರಣಗೊಳಿಸುತ್ತಿದೆ.

RELATED ARTICLES

Latest News