Sunday, April 19, 2026
Homeರಾಜ್ಯವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ವೈದ್ಯರ ವರ್ಗಾವಣೆ ವಿಚಾರ

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ವೈದ್ಯರ ವರ್ಗಾವಣೆ ವಿಚಾರ

Doctor transfer issue echoes in the Assembly

ಬೆಂಗಳೂರು, ಮಾ.13- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ವರ್ಗಾವಣೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ವಿಲೀನಗೊಳಿಸುವುದರ ವಿರುದ್ಧ ಪಕ್ಷಭೇದ ಮರೆತು ವಿಧಾನಸಭೆಯಲ್ಲಿಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಶ್ನೋತ್ತರದ ಬಳಿಕ ಜೆಡಿಎಸ್‌‍ನ ಶಾರದಾ ನಾಯಕ್‌, ಶಿವಮೊಗ್ಗದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿದ್ದ ತಜ್ಞ ವೈದ್ಯರನ್ನು ತಾಲೂಕು ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಲಾಗಿದೆ. ಹೀಗಾಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ವೈದ್ಯರನ್ನು ರಕ್ಷಣೆ ಕರ್ತವ್ಯದಿಂದ ಬಿಡುಗಡೆಗೊಂಡು ವರ್ಗಾವಣೆಯಲ್ಲಿ ನಿಯೋಜನೆಗೊಂಡಿರುವ ಸ್ಥಳದಲ್ಲಿ ವರದಿ ಮಾಡಿಕೊಳ್ಳುವಂತೆ ಬೆಂಗಳೂರಿನಿಂದ ಹಿರಿಯ ಅಧಿಕಾರಿಗಳು ಕರೆ ಮಾಡಿ, ತಜ್ಞ ವೈದ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಈ ಬಗ್ಗೆ ಈ ಮೊದಲು ವಿಧಾನಸಭೆಯಲ್ಲಿ ಚರ್ಚಿಸಲಾಗಿತ್ತು ಅರ್ಧ ಗಂಟೆ ವಿಸ್ತೃತ ಚರ್ಚೆಗೆ ಅವಕಾಶ ನೀಡುವುದಾಗಿ ಸಭಾಧ್ಯಕ್ಷರು ಭರವಸೆ ನೀಡಿದ್ದರು. ಅದರಂತೆ ಈಗಾಗಲೇ ಚರ್ಚೆಗೆ ಅವಕಾಶ ನೀಡಿ ಎಂದು ಪಟ್ಟು ಹಿಡಿದರು. ಇದಕ್ಕೆ ಬಿಜೆಪಿಯ ಸುನೀಲ್‌ ಕುಮಾರ್‌, ಚನ್ನಬಸಪ್ಪ, ಕಾಂಗ್ರೆಸ್‌‍ನ ಅಶೋಕ್‌ಕುಮಾರ್‌ ರೈ ಸೇರಿದಂತೆ ಹಲವಾರು ಮಂದಿ ಧ್ವನಿಗೂಡಿಸಿದರು.

ಒಂದು ಹಂತದಲ್ಲಿ ಎಲ್ಲಾ ಶಾಸಕರು ಗದ್ದಲ ಮಾಡಿ ವೈದ್ಯರ ವರ್ಗಾವಣೆಯನ್ನು ಹಿಂಪಡೆಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮುಚ್ಚುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್‌ ಸ್ವಯಂ ಪ್ರೇರಿತ ಹೇಳಿಕೆ ನೀಡಿ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ವೈದ್ಯರ ವರ್ಗಾವಣೆ ಮಾಡಬಾರದು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ ಎಂದರೂ ಕೂಡ ಸದಸ್ಯರು ಗದ್ದಲ ನಿಲ್ಲಿಸಲಿಲ್ಲ.

ಗೃಹ ಸಚಿವ ಪರಮೇಶ್ವರ್‌ ಮಧ್ಯ ಪ್ರವೇಶ ಮಾಡಿ, ಸಂಪುಟದಲ್ಲಿ ಚರ್ಚೆಗಳಾಗಿವೆ. ಒಂದು ವೇಳೆ ವೈದ್ಯರ ವರ್ಗಾವಣೆಯಾಗಿದ್ದರೆ ಅವರನ್ನು ಮರಳಿ ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ವಾಪಸ್‌‍ ಕಳುಹಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯವರು, ಆರೋಗ್ಯ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದರು.

ತಾಲೂಕು ಆಸ್ಪತ್ರೆಗಳಲ್ಲಿ ಪ್ರಸೂತಿ ಮತ್ತು ಮಕ್ಕಳ ಆರೋಗ್ಯಕ್ಕೆ ಒತ್ತು ನೀಡುವ ಸಲುವಾಗಿ ತಜ್ಞ ವೈದ್ಯರನ್ನು ಪುನರ್‌ ನಿಯೋಜನೆ ಮಾಡುತ್ತಿರುವುದಾಗಿ ಆರೋಗ್ಯ ಸಚಿವರು ವಿವರಣೆ ನೀಡಿದ್ದಾರೆ. ಸದ್ಯಕ್ಕೆ ಅದ್ಯಾವುದನ್ನು ಮಾಡದಂತೆ ಮುಖ್ಯಮಂತ್ರಿ ಅವರು ಕರೆ ನೀಡಿದ್ದಾರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸೇವೆ ಮುಂದುವರಿಯಲಿದೆ ಎಂದರು.

ಸದಸ್ಯರು ಇದನ್ನು ಒಪ್ಪದೆ ವರ್ಗಾವಣೆಯಾಗಿರುವ ವೈದ್ಯರು ಬೇರೆ ಕಡೆ ಕರ್ತವ್ಯಕ್ಕೆ ವರದಿ ಮಾಡಿಕೊಂಡರೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಮಸ್ಯೆಯಾಗುತ್ತದೆ ಎಂದು ಪ್ರತಿಪಾದಿಸಿದರು. ಸಭಾಧ್ಯಕ್ಷರು ಮಧ್ಯಪ್ರವೇಶ ಮಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವಿಲೀನವನ್ನು ಕೈ ಬಿಡಲು ಮತ್ತು ವೈದ್ಯರ ವರ್ಗಾವಣೆಯನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿ ಸಂಪುಟದಲ್ಲಿ ಸೂಚಿಸಿರುವುದಾಗಿ ಸಚಿವರು ಹೇಳುತ್ತಿದ್ದಾರೆ. ಸದ್ಯಕ್ಕೆ ಎಲ್ಲವೂ ಯಥಾ ಸ್ಥಿತಿಯಲ್ಲಿರಲಿದೆ. ಸೋಮವಾರ ಅರ್ಧ ಗಂಟೆ ಕಾಲ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ. ಈಗ ಸಚಿವರು ಇಲ್ಲ ಎಂದು ಸಮಾಧಾನ ಪಡಿಸಿದರು.

RELATED ARTICLES

Latest News