ಬೆಂಗಳೂರು, ಮಾ.14- ಎಲ್‌ಪಿಜಿ ಹೊತ್ತ ಹಡಗುಗಳು ಇರಾನ್‌ನ ಜಲಸಂಧಿಯಿಂದ ಭಾರತಕ್ಕೆ ಬರುತ್ತಿದ್ದು, ತೈಲ ಬಿಕ್ಕಟ್ಟು ನಿವಾರಣೆಯಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಉಲ್ಬಣ ಗೊಂಡಿದ್ದ ಸಿಲಿಂಡರ್ ಸಮಸ್ಯೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಸಂಘರ್ಷದಿಂದ ಇಂಧನ ಗ್ಯಾಸ್ ಕೊರತೆಯಿಂದ ಹೋಟೆಲ್‌ಗಳು, ಹಾಸ್ಟೆಲ್‌ಗಳು, ಪಿಜಿ, ದೇವಸ್ಥಾನಗಳು, ಗೃಹ ಬಳಕೆಯ ಸಿಲಿಂಡರ್‌ಗಳಿಗೂ ಕೊರತೆ ಉಂಟಾಗಿತ್ತು.
ಗ್ಯಾಸ್ ಅಭಾವ ತಲೆದೋರುತ್ತದೆ ಎಂಬ ಹಿನ್ನೆಲೆಯಲ್ಲಿ ಜನ ಮುಗಿಬಿದ್ದು ಬುಕ್ಕಿಂಗ್ ಮಾಡಲು ಶುರುವಿಟ್ಟುಕೊಂಡಿದ್ದರು. ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಂತು ಗ್ಯಾಸ್ ಪಡೆಯಲು ಮುಂದಾಗಿದ್ದರು. ಇಂದಿರಾ ಕ್ಯಾಂಟೀನ್‌ಗಳಲ್ಲೂ ಕೂಡ ಗ್ಯಾಸ್ ಅಭಾವ ತಲೆದೋರಿತ್ತು.
ಆಹಾರ ಸಚಿವ ಮುನಿಯಪ್ಪ ಅವರು ಎಲ್ಲ ಅನಿಲ ಕಂಪನಿಗಳು, ಹೋಟೆಲ್ ಮಾಲೀಕರೊಂದಿಗೆ ತುರ್ತು ಸಭೆ ನಡೆಸಿದ್ದರು. ಅನಿಲ ಕಂಪನಿಗಳ ಅಧಿಕಾರಿಗಳು ಆದ್ಯತೆ ಮೇರೆಗೆ ಗ್ಯಾಸ್ ಸರಬರಾಜು ಮಾಡುವುದಾಗಿ ಭರವಸೆ ನೀಡಿದ್ದರು.
ನಿನ್ನೆಯಷ್ಟೇ ಹಾರ್ಮುಜ್ ಜಲಸಂಧಿಯಿಂದ ಇಂಧನ ಹೊತ್ತ ಹಡಗು ಮುಂಬೈ ತಲುಪಿತ್ತು. ಎಲ್‌ಪಿಜಿ ಹೊತ್ತ ಇನ್ನೂ ಎರಡು ಹಡಗುಗಳು ಭಾರತಕ್ಕೆ ಆಗಮಿಸಲಿದ್ದು, ಗ್ಯಾಸ್ ಸಮಸ್ಯೆ ನಿವಾರಣೆಯಾಗಲಿದೆ.
ಇನ್ನೆರಡು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ. ಎಂದಿನಂತೆ ಹೋಟೆಲ್, ಹಾಸ್ಟೆಲ್, ದೇವಾಲಯ, ಮದುವೆ ಮಂಟಪ ಮತ್ತಿತರ ಚಟುವಟಿಕೆಗಳ ಪದಾರ್ಥಗಳ ತಯಾರಿಕೆಗೆ ಗ್ಯಾಸ್ ಸರಬರಾಜು ಆಗುವ ಸಾಧ್ಯತೆ ಇದೆ.
ನವದೆಹಲಿಯಲ್ಲಿ ವಿವಿಧ ಸಚಿವಾಲಯಗಳ ನಡುವಿನ ಚರ್ಚೆ ನಂತರ ಹಿರಿಯ ಅಧಿಕಾರಿಗಳೇ ದೇಶದಲ್ಲಿ ತೈಲ ಮತ್ತು ಅನಿಲ ಪೂರೈಕೆ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ತೈಲ ಮತ್ತು ಅನಿಲ ಪೂರೈಕೆ ಸಂಪೂರ್ಣ ಸ್ಥಿರವಾಗಿದ್ದು, ಯಾವುದೇ ಕೊರತೆ ಇಲ್ಲ.
50 ಲಕ್ಷ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳು ಪೂರೈಕೆಯಾಗುತ್ತಿವೆ. ಇಂಧನ ಪೂರೈಕೆ ಸ್ಥಿರವಾಗಿದೆ. ಪೆಟ್ರೋಲ್ ಬಂಕ್‌ಗಳು ಕೂಡ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
