Homeರಾಜ್ಯವೈ.ಮಂಜುನಾಥ್‌ ನಿವಾಸದಲ್ಲಿ ಇ.ಡಿ. ಶೋಧಕಾರ್ಯ ಮುಕ್ತಾಯ

ವೈ.ಮಂಜುನಾಥ್‌ ನಿವಾಸದಲ್ಲಿ ಇ.ಡಿ. ಶೋಧಕಾರ್ಯ ಮುಕ್ತಾಯ

ED concludes search operation at Y. Manjunath's residence

ಬೆಂಗಳೂರು, ಜೂ.25- ಅಕ್ರಮ ಆಸ್ತಿ ಸಂಪಾದನೆ, ವಿದೇಶದಲ್ಲಿ ಬಂಡವಾಳ ಹೂಡಿಕೆ, ಹವಾಲ ವಾಹಿವಾಟು ನಡೆಸಿರುವುದು ಸೇರಿದಂತೆ ಮತ್ತಿತರರ ಗಂಭೀರ ಆರೋಪಗಳ ಹಿನ್ನಲೆಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಭಾವಮೈದುನ ಹಾಗೂ ಬಳ್ಳಾರಿಯ ಬಿಜೆಪಿ ಮಾಜಿ ಸಂಸದ ದೇವೇಂದ್ರಪ್ಪ ಪುತ್ರ ಬೆಳಗಾವಿ ಅಬಕಾರಿ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ್‌ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನಡೆಸುತ್ತಿರುವ ಶೋಧಕಾರ್ಯ ಎರಡನೇ ದಿನದಲ್ಲಿ ಮುಕ್ತಾಯವಾಗಿದೆ.

ಎಲ್ಲಾ ಪ್ರಮುಖ ದಾಖಲೆಗಳೊಂದಿಗೆ ಇಡಿ ಅಧಿಕಾರಿಗಳ ತಂಡವು ಬೆಂಗಳೂರಿಗೆ ಆಗಮಿಸಿದ್ದು, ದಾಳಿಯ ಸಂಪೂರ್ಣ ವರದಿಯನ್ನು ಇಡಿ ನಿರ್ದೇಶಕರಿಗೆ ಸಲ್ಲಿಸಲಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್‌ ಅವರ ಆಪ್ತರಾಗಿರುವ ಗೋವಾ ಮೂಲದ ಲೋಬೋ ಎಂಬುವವರಿಗಾಗಿ ಇಡಿ ಅಧಿಕಾರಿಗಳು ಬೆಳಗಾವಿಯಲ್ಲಿ ತೀವ್ರ ಹುಡುಕಾಟ ನಡೆಸಿದ್ದರು.

ಆದರೆ ಬೆಳಗಾವಿಯಲ್ಲಿ ಲೋಬೋ ಪತ್ತೆಯಾಗದ ಹಿನ್ನೆಲೆಯಲ್ಲಿ, ಅವರನ್ನು ವಶಕ್ಕೆ ಪಡೆಯಲು ಇಡಿಯ ಎರಡು ವಿಶೇಷ ತಂಡಗಳು ಈಗಾಗಲೇ ಗೋವಾಗೆ ರವಾನೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಮನೆಯಲ್ಲಿ ನಡೆದ ಶೋಧಕಾರ್ಯದ ವೇಳೆ ಬೇನಾಮಿ ಬಾರ್‌ ಲೈಸೆನ್ಸ್ ಒಪ್ಪಂದದ ಪತ್ರಗಳು, ಅಕ್ರಮ ಆಸ್ತಿಯ ದಾಖಲೆಗಳು, ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ಪ್ರಮುಖ ವಸ್ತುಗಳು ಪತ್ತೆಯಾಗಿವೆ. ಇಡಿ ಅಧಿಕಾರಿಗಳು, ಬೆಳಗಾವಿಯ 6 ಕಡೆ ಸೇರಿದಂತೆ ರಾಜ್ಯದ 10 ಕಡೆಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಮಂಜುನಾಥ್‌ ಅವರ ಪತ್ನಿ ಮತ್ತು ಕುಟುಂಬಸ್ಥರು ಮನೆಯಲ್ಲೇ ಇದ್ದರು ಎನ್ನಲಾಗಿದೆ. ಬೆಂಗಳೂರಿನ ರೇಸ್‌‍ ಕೋರ್ಸ್‌ ರಸ್ತೆಯ ಸಮಿಟ್‌ ಅಪಾರ್ಟ್‌ಮೆಂಟ್‌‍ನಲ್ಲಿದ್ದ ವೈ. ಮಂಜುನಾಥ್‌ ಅವರನ್ನು ಅಧಿಕಾರಿಗಳು ಈಗಾಗಲೇ ವಶಕ್ಕೆ ಪಡೆದುಕೊಂಡಿದ್ದಾರೆ. ಅಗತ್ಯ ಕಂಡು ಬಂದರೆ, ಅವರನ್ನು ಇಡಿ ಅಧಿಕಾರಿಗಳು ಬಂಧಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಬಕಾರಿ ಇಲಾಖೆಗೆ ಸಂಬಂಧಿಸಿದ ಆರ್ಥಿಕ ಅವ್ಯವಹಾರ ಪ್ರಕರಣದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಈ ಕುರಿತು ಇದುವರೆಗೆ ಜಾರಿ ನಿರ್ದೇಶನಾಲಯವು ಯಾವುದೇ ಅಧಿಕೃತ ಹೇಳಿಕೆಯನ್ನು ಹೊರಡಿಸಿಲ್ಲ. ಅಲ್ಲದೆ, ಮಂಜುನಾಥ್‌ ಅವರ ಕುಟುಂಬದವರು ಕೂಡ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಸತತ 24 ಗಂಟೆಗಳ ಕಾಲ ನಡೆಸಿದ ಸುದೀರ್ಘ ಶೋಧಕಾರ್ಯದ ಬಳಿಕ ಇಡಿ ಅಧಿಕಾರಿಗಳು ಬೆಳಗಾವಿಯಿಂದ ನಿರ್ಗಮಿಸಿದ್ದಾರೆ.

ಬೆಳಗಾವಿ ನಗರದ ಟಿವಿ ಸೆಂಟರ್‌ನಲ್ಲಿರುವ ಮಂಜುನಾಥ್‌ ಅವರ ಮುಖ್ಯ ನಿವಾಸ ಸೇರಿದಂತೆ ಜಿಲ್ಲೆಯ ಒಟ್ಟು ಆರು ಕಡೆಗಳಲ್ಲಿ ನಿನ್ನೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ನಿನ್ನೆ ಮುಂಜಾನೆ 5.30 ಗಂಟೆಗೆ ಬೆಳಗಾವಿಯ ಟಿವಿ ಸೆಂಟರ್‌ ನಲ್ಲಿರುವ ಮಂಜುನಾಥ್‌ ಅವರ ನಿವಾಸಕ್ಕೆ ಲಗ್ಗೆಯಿಟ್ಟ ಬೆಂಗಳೂರು ಮತ್ತು ಗೋವಾದ ಇಡಿ ಅಧಿಕಾರಿಗಳ ಜಂಟಿ ತಂಡ, ಸತತ 24 ಗಂಟೆಗಳಿಂದ ಮನೆಯಿಂದ ಹೊರಗೆ ಬಂದಿಲ್ಲ. ಅಧಿಕಾರಿಗಳು ತಮಗೆ ಬೇಕಾದ ಉಪಾಹಾರ ಮತ್ತು ಊಟವನ್ನು ಮನೆಗೇ ತರಿಸಿಕೊಂಡು ಶೋಧ ಕಾರ್ಯ ಮತ್ತು ದಾಖಲೆಗಳ ಪರಿಶೀಲನೆ ನಡೆಸಿ ತಮ ವಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸರ್ಕಾರಿ ಸಂಬಳ ಪಡೆಯುತ್ತಲೇ ಕೋಟ್ಯಂತರ ರೂಪಾಯಿಗಳ ಅಕ್ರಮ ಎಸಗಿದ್ದಾರೆ ಎಂಬ ಗಂಭೀರ ಆರೋಪ ಮಂಜುನಾಥ್‌ ಮೇಲಿದೆ.

ಆದಾಯಕ್ಕಿಂತ ಅಧಿಕವಾಗಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸಂಪಾದನೆ, ಅಬಕಾರಿ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡೇ ಬೇರೆಯವರ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಬಾರ್‌ ಲೈಸೆನ್‌್ಸ ಹೊಂದಿರುವ ಆರೋಪ, ದೇಶದ ಗಡಿ ದಾಟಿ ನಡೆದಿರುವ ಆರ್ಥಿಕ ವಹಿವಾಟುಗಳು, ಹವಾಲಾ ಮಾರ್ಗಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಮೈಸೂರಿನ ಮುಂದುವರೆದ ಶೋಧ :
ಸಚಿವ ಸತೀಶ್‌ ಜಾರಕಿಹೊಳಿ ಸಂಬಂಧಿ ವೈ.ಮಂಜುನಾಥ್‌ ಅವರ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸ್ವಯಂಭೂ ನಿವಾಸದಲ್ಲೂ ಇಡಿ ಅಧಿಕಾರಿಗಳ ದಾಳಿ ಮುಂದುವರೆದಿದೆ. ಮೈಸೂರಿನ ಮನೆಯಲ್ಲಿ 2ನೇ ದಿನವೂ ಶೋಧ ಕಾರ್ಯ ನಡೆದಿದ್ದು, ಒಟ್ಟು 7 ಮಂದಿ ಇಡಿ ಅಧಿಕಾರಿಗಳು ಸೇರಿ ಮನೆಯನ್ನೇ ಜಾಲಾಡಿದ್ದಾರೆ.

ವೈ.ಮಂಜುನಾಥ್‌ ಆಪ್ತೆ ಇಡಿ ವಶಕ್ಕೆ :
ಮೈಸೂರಿನ ಮನೆಯಲ್ಲಿ ಮಂಜುನಾಥ್‌ ಆಪ್ತೆ ಯಮುನಾ ಹಾಗೂ ಅವರ ತಾಯಿಯನ್ನು ವಿಚಾರಣೆ ನಡೆಸಲಾಗಿದೆ. ಈ ನಿವಾಸಲ್ಲಿ ಬೇನಾಮಿ ಹೆಸರಿನ ಅನೇಕ ಬಾರ್‌ ಲೈಸೆನ್‌್ಸ, ಅಗ್ರಿಮೆಂಟ್‌ಗಳು ಪತ್ತೆಯಾಗಿದ್ದು, ಬ್ಯಾಂಕ್‌ ಲಾಕರ್‌ನಲ್ಲಿ ಮಹತ್ವದ ದಾಖಲೆಗಳು ಸಿಕ್ಕಿವೆ ಎಂದು ತಿಳಿದು ಬಂದಿದೆ.

RELATED ARTICLES

Latest News