ಬೆಂಗಳೂರು, ಜೂ. 13- ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತೆ ಮುಂದುವರೆದಿದೆ. ಹಲವಾರು ವಸ್ತುಗಳ ಬೆಲೆ ಏರಿಕೆ ನಡುವೆಯೇ ಇದೀಗ ಅಕ್ಕಿ ದರದಲ್ಲೂ ಗಣನೀಯ ಹೆಚ್ಚಳ ಕಂಡುಬಂದಿದ್ದು, ಗ್ರಾಹಕರಿಗೆ ಮತ್ತೊಂದು ಆರ್ಥಿಕ ಹೊರೆ ಎದುರಾಗಿದೆ.
ರಾಜ್ಯದ ಹಲವು ಭಾಗಗಳಲ್ಲಿ ವಿವಿಧ ತಳಿಯ ಅಕ್ಕಿಗಳ ಬೆಲೆ ಕೆಜಿಗೆ 5 ರಿಂದ 10ರವರೆಗೆ ಏರಿಕೆಯಾಗಿದೆ.ಮಾರುಕಟ್ಟೆಯಲ್ಲಿ ಅಕ್ಕಿಯ ಲಭ್ಯತೆ ಕಡಿಮೆಯಾಗಿರುವುದು ಹಾಗೂ ಬೇಡಿಕೆ ಹೆಚ್ಚಿರುವುದು ದರ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ವ್ಯಾಪಾರಿಗಳ ಪ್ರಕಾರ ಪ್ರಸ್ತುತ ಇರುವ ಸಂಗ್ರಹವು ನವೆಂಬರ್‌ವರೆಗೆ ಮಾತ್ರ ಸಾಕಾಗುವ ಸಾಧ್ಯತೆ ಇದ್ದು, ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.ದರ ಏರಿಕೆಯಿಂದ ಗೃಹ ಬಳಕೆದಾರರಷ್ಟೇ ಅಲ್ಲದೆ ಹೋಟೆಲ್, ಕ್ಯಾಂಟೀನ್ ಹಾಗೂ ಆಹಾರ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ. ಅಕ್ಕಿ ಖರೀದಿಗೆ ಗ್ರಾಹಕರು ಮುಗಿಬೀಳುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.
| ಅಕ್ಕಿಯ ತಳಿ | ಹಿಂದಿನ ದರ (ರೂ./ಕೆಜಿ) | ಸದ್ಯದ ದರ (ರೂ./ಕೆಜಿ) |
|---|---|---|
| ಸೋನಾಮಸುರಿ | 54 | 64 |
| ಕಾವೇರಿ ಸ್ಟೀಮ್ | 42 | 55 |
| ಸ್ಟೀಮ್ | 48 | 60 |
| ಸ್ಟೀಮ್ | 53 | 65 |
| ಕೊಲ್ಲಂ ಸ್ಟೀಮ್ | 58 | 68 |
ಪ್ರಮುಖ ಅಕ್ಕಿ ತಳಿಗಳ ಪರಿಷ್ಕೃತ ದರಗಳು
ಮೇಲಿನ ಅಕ್ಕಿ ತಳಿಗಳ ದರಗಳಲ್ಲಿ ಪ್ರತಿ ಕೆಜಿಗೆ ₹10 ರಿಂದ ₹13ರವರೆಗೆ ಏರಿಕೆಯಾಗಿದ್ದು, ಹೊಸ ದರಗಳು ಜಾರಿಗೆ ಬಂದಿವೆ.
ವ್ಯಾಪಾರಿಗಳ ಪ್ರಕಾರ 26 ಕೆಜಿ ಅಕ್ಕಿ ಚೀಲದ ಮೇಲೆ 150ರವರೆಗೆ ದರ ಹೆಚ್ಚಳ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಪೂರೈಕೆ ಪರಿಸ್ಥಿತಿ ಸುಧಾರಿಸದಿದ್ದರೆ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಈ ದಿಢೀರ್ ದರ ಏರಿಕೆಯಿಂದ ಮಧ್ಯಮ ವರ್ಗ ಹಾಗೂ ಕಡಿಮೆ ಆದಾಯದ ಕುಟುಂಬಗಳ ಮಾಸಿಕ ಖರ್ಚಿನ ಲೆಕ್ಕಾಚಾರ ಅಸ್ತವ್ಯಸ್ತವಾಗಿದ್ದು, ಸರ್ಕಾರ ಅಗತ್ಯ ಕ್ರಮ ಕೈಗೊಂಡು ಮಾರುಕಟ್ಟೆಯಲ್ಲಿ ಸ್ಥಿರತೆ ತರಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
