Homeರಾಜ್ಯಕೊನೆಗೂ ಸಿಕ್ಕಿಬಿದ್ದ ನಕಲಿ ಔಷಧಿ ಜಾಲದ ಕಿಂಗ್‌ಪಿನ್‌ , ಪ್ರಶಾಂತ್‌ ರಂಜನ್ ಅರೆಸ್ಟ್

ಕೊನೆಗೂ ಸಿಕ್ಕಿಬಿದ್ದ ನಕಲಿ ಔಷಧಿ ಜಾಲದ ಕಿಂಗ್‌ಪಿನ್‌ , ಪ್ರಶಾಂತ್‌ ರಂಜನ್ ಅರೆಸ್ಟ್

ಬೆಂಗಳೂರು,ಸೆ.28- ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನಕಲಿ ಔಷಧ ತಯಾರಿಕೆ ಮತ್ತು ಅಕ್ರಮ ಮಾರಾಟ ಜಾಲದ ಪ್ರಮುಖ ಸೂತ್ರಧಾರ ಪ್ರಶಾಂತ್‌ನನ್ನು ವಿಶೇಷ ತನಿಖಾ ತಂಡ(ಎಸ್‌‍ಐಟಿ) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆರೋಪಿ ಪ್ರಶಾಂತ್‌ ವಿದೇಶಕ್ಕೆ ಕಾಲ್ಕಿತ್ತಿದ್ದ. ಆತನ ಪತ್ತೆಗೆ ಎಸ್‌‍ಐಟಿ ಅಧಿಕಾರಿಗಳು ಈಗಾಗಲೇ ಲುಕ್‌ಔಟ್‌ ನೋಟಿಸ್‌‍ಜಾರಿ ಮಾಡಿದ್ದರು.

ಮೂಲಗಳ ಪ್ರಕಾರ ಅಜರ್‌ಬೈಜಾನ್‌ನಲ್ಲಿ ತಲೆಮರೆಸಿಕೊಂಡಿದ್ದ. ಅಲ್ಲಿಂದ ಆತ ನಗರಕ್ಕೆ ಹಿಂತಿರುಗುತ್ತಿದ್ದಾನೆಂಬ ಸುಳಿವಿನ ಮೇರೆಗೆ ಕಾರ್ಯಪ್ರವೃತ್ತರಾದ ಎಸ್‌‍ಐಟಿ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಜೀವ ರಕ್ಷಕ ಔಷಧಿಗಳ ಹೆಸರಿನಲ್ಲಿ ನಕಲಿ ಹಾಗೂ ಕಳಪೆ ಗುಣಮಟ್ಟದ ಮಾತ್ರೆ/ಔಷಧಗಳನ್ನು ಪೂರೈಸಲಾಗುತ್ತಿದ್ದ ದೊಡ್ಡ ಜಾಲವನ್ನು ಸಾರ್ವಜನಿಕರು ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪತ್ತೆಹಚ್ಚಲಾಗಿತ್ತು. ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿದ್ದ ಈ ಅಕ್ರಮ ಜಾಲದ ತನಿಖೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರತರಲು ಎಸ್‌‍ಐಟಿಗೆ ವಹಿಸಿತ್ತು.

ಬಳಿಕ ತನಿಖೆಯನ್ನು ಚುರುಕುಗೊಳಿಸಿದ್ದ ಎಸ್‌‍ಐಟಿ, ಇತ್ತೀಚೆಗಷ್ಟೇ ಈ ಜಾಲದ ಮತ್ತೊಬ್ಬ ಪ್ರಮುಖ ಆರೋಪಿ ವೀರೇಶ್‌ ಜೈನ್‌ನನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ವೀರೇಶ್‌ ಜೈನ್‌ ನೀಡಿದ ಹೇಳಿಕೆ ಹಾಗೂ ಸ್ಫೋಟಕ ಮಾಹಿತಿಗಳ ಆಧಾರದ ಮೇಲೆಯೇ ನಕಲಿ ಔಷಧಿ ಜಾಲದ ಮಾಸ್ಟರ್‌ಮೈಂಡ್‌ ಪ್ರಶಾಂತ್‌ ಎಂಬುದು ದೃಢಪಟ್ಟಿತ್ತು.

ಫಾರ್ಮ್‌ಹೌಸ್‌‍ ದಾಳಿಯಿಂದ ಬಯಲಾಗಿದ್ದ ಜಾಲ
ನಗರದ ಹೊರವಲಯದ ದೊಡ್ಡೇರಿ ಫಾರ್ಮ್‌ಹೌಸ್‌‍ನಲ್ಲಿ ಆ.18ರಂದು ನಡೆದ ದಾಳಿ ಈ ಪ್ರಕರಣದ ತನಿಖೆಗೆ ಪ್ರಮುಖ ತಿರುವು ನೀಡಿತ್ತು. ತಾವರೆಕೆರೆ ಠಾಣೆ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದಾಗ ಸುಮಾರು 5 ಕೋಟಿ ಮೌಲ್ಯದ ನಕಲಿ ಮತ್ತು ಅವಧಿ ಮೀರಿದ ಔಷಧಿಗಳ ಸಂಗ್ರಹ ಪತ್ತೆಯಾಗಿತ್ತು.

ಪ್ರಕರಣದ ವ್ಯಾಪ್ತಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರದೆ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿತ್ತು.ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಪೊಲೀಸ್‌‍ ಅಧಿಕಾರಿಗಳು ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ಜಂಟಿ ಪೊಲೀಸ್‌‍ ಆಯುಕ್ತ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ರಚಿಸಿತ್ತು.

12 ಕೋಟಿ ಮೌಲ್ಯದ ಔಷಧಿ ಪೂರೈಕೆ ಆರೋಪ
ತನಿಖೆ ಮತ್ತಷ್ಟು ವಿಸ್ತರಿಸಿದಂತೆ, 2025ರ ಫೆಬ್ರವರಿಯಿಂದ ನಗರದ ಆಸ್ಪತ್ರೆಗಳು ಹಾಗೂ ಕರ್ನಾಟಕದ ಇತರ ಭಾಗಗಳಿಗೆ ಸುಮಾರು 12 ಕೋಟಿ ಮೌಲ್ಯದ ಶಂಕಿತ ನಕಲಿ ಔಷಧಿಗಳನ್ನು ಪೂರೈಸಿರುವ ಆರೋಪದ ಬಗ್ಗೆ ಎಸ್‌‍ಐಟಿ ತನಿಖೆ ನಡೆಸುತ್ತಿದೆ.

ವಿಶೇಷವಾಗಿ ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರನ್ನು ಬಳಸಿ ನಕಲಿ ಔಷಧಿಗಳನ್ನು ಮಾರುಕಟ್ಟೆಗೆ ತಳ್ಳಲಾಗಿದೆಯೇ ಎಂಬ ಅಂಶವೂ ತನಿಖೆಯಲ್ಲಿದೆ. ವಶಪಡಿಸಿಕೊಂಡ ಔಷಧಿಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳ ರಾಸಾಯನಿಕ ಸಂಯೋಜನೆ, ಗುಣಮಟ್ಟ ಹಾಗೂ ನಿಜವಾದ ಔಷಧಿಗಳೊಂದಿಗೆ ಇರುವ ವ್ಯತ್ಯಾಸವನ್ನು ಪರಿಶೀಲಿಸಲಾಗುತ್ತಿದೆ.

ಅಜರ್‌ಬೈಜಾನ್‌ನಲ್ಲಿ ಪ್ರಶಾಂತ್‌ ಪತ್ತೆ
ಪ್ರಕರಣ ಬೆಳಕಿಗೆ ಬಂದ ನಂತರ ಪ್ರಶಾಂತ್‌ ವಿದೇಶಕ್ಕೆ ತೆರಳಿದ್ದಾನೆ ಎಂಬ ಮಾಹಿತಿ ತನಿಖಾ ತಂಡಕ್ಕೆ ದೊರೆತಿತ್ತು. ಅಜರ್‌ಬೈಜಾನ್‌ನಲ್ಲಿ ಆತನ ಪಾಸ್‌‍ಪೋರ್ಟ್‌ಗೆ ಸಂಬಂಧಿಸಿದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಅಲ್ಲಿನ ಅಧಿಕಾರಿಗಳ ವಶಕ್ಕೆ ಆತ ಸಿಕ್ಕಿದ್ದಾನೆ ಎಂಬ ಮಾಹಿತಿ ಕೂಡ ಹೊರಬಂದಿತ್ತು. ಬಳಿಕ ಪ್ರಶಾಂತ್‌ನನ್ನು ಭಾರತಕ್ಕೆ ಕರೆತರಲು ಎಸ್‌‍ಐಟಿ ಅಂತರರಾಷ್ಟ್ರೀಯ ತನಿಖಾ ಸಹಕಾರದ ಮಾರ್ಗಗಳನ್ನು ಬಳಸಿತ್ತು.

ಆರೋಪಿ ಪ್ರಶಾಂತ್‌ನನ್ನು ಎಸ್‌‍ಐಟಿ ಅಧಿಕಾರಿಗಳು ಸದ್ಯ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಬಳಿಕ ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ. ನಕಲಿ ಔಷಧಿಗಳನ್ನು ಎಲ್ಲೆಲ್ಲಿ ತಯಾರಿಸಲಾಗುತ್ತಿತ್ತು, ಯಾವ್ಯಾವ ಔಷಧ ಅಂಗಡಿಗಳಿಗೆ ಹಾಗೂ ಆಸ್ಪತ್ರೆಗಳಿಗೆ ಪೂರೈಸಲಾಗಿತ್ತು ಮತ್ತು ಈ ಜಾಲದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ.

ಪ್ರಾಥಮಿಕ ವಿಚಾರಣೆ ಪೂರ್ಣಗೊಂಡ ನಂತರ ಆರೋಪಿಯನ್ನು ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಎಸ್‌‍ಐಟಿ ವಶಕ್ಕೆ ನೀಡುವಂತೆ ಮನವಿ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರಶಾಂತ್‌ ಬಂಧನದಿಂದಾಗಿ ನಕಲಿ ಔಷಧಿ ಜಾಲದ ಹಿಂದಿರುವ ಅನೇಕ ಪ್ರಭಾವಿಗಳ ಬಣ್ಣ ಬಯಲಾಗುವ ಸಾಧ್ಯತೆಯಿದೆ.

RELATED ARTICLES
spot_img

Latest News