Homeರಾಷ್ಟ್ರೀಯಮುಷ್ಕರ ವಾಪಸ್‌‍ : ಎಂದಿನಂತೆ ಕಾರ್ಯನಿರ್ವಹಿಸಲಿವೆ ಬ್ಯಾಂಕ್‌ಗಳು

ಮುಷ್ಕರ ವಾಪಸ್‌‍ : ಎಂದಿನಂತೆ ಕಾರ್ಯನಿರ್ವಹಿಸಲಿವೆ ಬ್ಯಾಂಕ್‌ಗಳು

ನವದೆಹಲಿ, ಸೆ. 28 (ಪಿಟಿಐ): ವಾರದಲ್ಲಿ ಐದು ದಿನಗಳ ಕೆಲಸ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಷನ್‌ (ಐಬಿಎ) ನೀಡಿದ ಭರವಸೆಯ ಮೇರೆಗೆ ಬ್ಯಾಂಕ್‌ ಸಂಘಟನೆಗಳು ತಮ್ಮ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಹಿಂಪಡೆದಿವೆ. ಹೀಗಾಗಿ, ಇಂದಿನಿಂದ ಬ್ಯಾಂಕಿಂಗ್‌ ಕಾರ್ಯಾಚರಣೆಗಳು ಎಂದಿನಂತೆ ಮುಂದುವರಿಯಲಿವೆ.

ಸೆ. 28ರಿಂದ 30ರವರೆಗೆ ನಡೆಯಬೇಕಿದ್ದ ಈ ಮುಷ್ಕರಕ್ಕೆ ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್ಸ್‌ ಕರೆ ನೀಡಿತ್ತು.ಎಲ್ಲಾ ಶನಿವಾರಗಳನ್ನೂ ರಜಾದಿನಗಳೆಂದು ಘೋಷಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಐಬಿಎ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್‌ ಸಂಘಟನೆಗಳು ತಡರಾತ್ರಿ ಮುಷ್ಕರವನ್ನು ಹಿಂಪಡೆದವು.

ಉಳಿದ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸುವ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಮಿತಿಯನ್ನು ತಕ್ಷಣವೇ ರಚಿಸಲಾಗುವುದು. ಈ ಸಮಿತಿಯು ಎಲ್ಲ ಸಂಭಾವ್ಯ ಪರ್ಯಾಯಗಳನ್ನು ಪರಿಶೀಲಿಸಿ, ಎಲ್ಲ ಪಾಲುದಾರರೊಂದಿಗೆ ಚರ್ಚಿಸಿ, ಮುಖ್ಯವಾಗಿ ಗ್ರಾಹಕರಿಗೆ ಸ್ವೀಕಾರಾರ್ಹವಾದ ಪರಿಹಾರ ರೂಪಿಸಲಿದೆ ಎಂದು ತಡರಾತ್ರಿ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಬ್ಯಾಂಕ್‌ಗಳು ಭಾನುವಾರ ಹಾಗೂ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಿರುತ್ತವೆ.ಎ ಸ್ಕೇಲ್‌ ಮತ್ತು ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯಿಸುವ ಪಿಎಲ್‌ಐ ಯೋಜನೆಗೆ ಸಂಬಂಧಿಸಿದಂತೆ ಸಂಘಟನೆಗಳು ಹಾಗೂ ಸಂಘಗಳ ಅಭಿಪ್ರಾಯಗಳನ್ನು ಪರಿಗಣಿಸಿ ಸರ್ಕಾರಕ್ಕೆ ಬದಲಾವಣೆಗಳನ್ನು ಪ್ರಸ್ತಾಪಿಸಲು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಮಾರ್ಚ್‌ 8, 2024ರ ಸಭೆಯ ನಡವಳಿಕೆಗಳಲ್ಲಿ ಪಟ್ಟಿ ಮಾಡಲಾಗಿರುವ ಉಳಿದ ವಿಷಯಗಳ ತ್ವರಿತ ಇತ್ಯರ್ಥಕ್ಕಾಗಿ ಸಂಬಂಧಪಟ್ಟ ಪಕ್ಷಗಳ ನಡುವೆ ಚರ್ಚೆ ನಡೆಸಲಾಗುವುದು ಎಂದು ಹೇಳಲಾಗಿದೆ.ಮೂರು ದಿನಗಳ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾನುವಾರದಂದು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ತೆರೆಯಲಾಗಿತ್ತು.

RELATED ARTICLES
spot_img

Latest News