Homeಬೆಂಗಳೂರುಬೆಳ್ಳಂಬೆಳಗ್ಗೆ ಬೆಂಗಳೂರಿಗೆ ನುಗ್ಗಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಬಲಿಪಡೆದ ಕಾಡಾನೆ

ಬೆಳ್ಳಂಬೆಳಗ್ಗೆ ಬೆಂಗಳೂರಿಗೆ ನುಗ್ಗಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ಬಲಿಪಡೆದ ಕಾಡಾನೆ

ಬೆಂಗಳೂರು,ಸೆ.28-ಬೆಳ್ಳಂಬೆಳಗ್ಗೆ ಸಿಲಿಕಾನ್‌ ಸಿಟಿಯಲ್ಲಿ ಕಾಡಾನೆ ಅಟ್ಟಹಾಸಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ನಡೆದಿದೆ.ಮೈಸೂರು ರಸ್ತೆಯ ಅಂಚೆಪಾಳ್ಯ ಗ್ರಾಮದ ನಿವಾಸಿ ನಾಗರಾಜ್‌ (60) ಮೃತಪಟ್ಟ ವ್ಯಕ್ತಿ.ನಾಗರಾಜ್‌ ಅವರು ಎಂದಿನಂತೆ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿನಲ್ಲಿ ವಾಯುವಿಹಾರಕ್ಕೆ ತೆರಳಿದ್ದಾರೆ.

ಕೆಂಗೇರಿ ಸಮೀಪದ ಆರ್‌ ಆರ್‌ ವೈದ್ಯಕೀಯ ಕಾಲೇಜು ಹಿಂಭಾಗ ನಾಗರಾಜ್‌ ಅವರು ವಾಯುವಿಹಾರ ಮಾಡುತ್ತಿದ್ದಾಗ ಏಕಾಏಕಿ ಹಿಂದಿನಿಂದ ಬಂದ ಕಾಡಾನೆೆಯೊಂದು ದಾಳಿ ಮಾಡಿದೆ. ಅವರು ತಕ್ಷಣ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಸಾಧ್ಯವಾಗದೇ ಆನೆ ದಾಳಿಯಿಂದ ಗಂಭೀರ ಗಾಯಗೊಂಡಿದ್ದಾರೆ.

ಆ ಮಾರ್ಗದಲ್ಲಿ ಹೋಗುತ್ತಿದ್ದವರು ಗಮನಿಸಿ ತಕ್ಷಣ ಅವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಕಾಂಪೌಂಡ್‌ಗಳು ಸಹ ಉರುಳಿ ಬಿದ್ದಿವೆ.

ಜನ ವಸತಿ ಪ್ರದೇಶದಲ್ಲಿ ಕಾಡಾನೆ ಹೇಗೆ ಪ್ರತ್ಯಕ್ಷವಾಯಿತು ಎಂಬುವುದು ನಿಗೂಢವಾಗಿದೆ.ಈ ಘಟನೆಯಿಂದ ಸಿಲಿಕಾನ್‌ ಸಿಟಿಯ ಜನತೆ ಆತಂಕಗೊಂಡಿದ್ದಾರೆ.ಇತ್ತೀಚೆಗೆ ನಗರದ ಬನಶಂಕರಿ 6ನೇ ಹಂತ ಹಾಗೂ ಕರಿಯಣ್ಣಪಾಳ್ಯ ಸಮೀಪ ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಭೀತಿಯನ್ನುಂಟು ಮಾಡಿತ್ತು.ಚಿರತೆ ಓಡಾಟದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಕಾಡಾನೆಯೊಂದು ಪ್ರತ್ಯಕ್ಷವಾಗಿರುವುದು ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

RELATED ARTICLES
spot_img

Latest News