ಬೆಂಗಳೂರು, ಮೇ 16- ನಿರಂತರ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಸತತ ಇಳಿಕೆಯಾಗಿದ್ದು, ಗ್ರಾಹಕರಿಗೆ ಸಮಾಧಾನ ತಂದಿದೆ. ಆದರೆ, ಚಿನ್ನಾಭರಣ ಮಾರಾಟ ಮಾಡುವ ವರ್ತಕರನ್ನು ಚಿಂತೆಗೀಡು ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷ ಕಾಲ ಚಿನ್ನ ಖರೀದಿಸದಂತೆ ಕರೆ ನೀಡಿದ್ದ ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿ ದರಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡು ಆಭರಣಪ್ರಿಯರು ಆತಂಕಕ್ಕೆ ಒಳಗಾಗುವಂತೆ ಆಗಿತ್ತು. ಬಳಿಕವೂ ಅಲ್ಪ ಪ್ರಮಾಣದಲ್ಲಿ ಚಿನ್ನದ ದರ ಏರಿಕೆಯಾಗುತ್ತಲೇ ಇತ್ತು.
ಅಂದರೆ, ಮೇ 8ರಿಂದ ಅಲ್ಪ ಪ್ರಮಾಣದಲ್ಲಿ ಇಳಿಮುಖದತ್ತ ಸಾಗಿದ ಚಿನ್ನವು ಮೇ 11ರಿಂದ ಏರುಗತಿಯಲ್ಲಿ ಸಾಗಿತ್ತು. ನಿನ್ನೆಯಿಂದ ಮತ್ತೆ ಇಳಿಕೆಯಾಗುತ್ತಿದೆ.ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ 24 ಕ್ಯಾರೆಟ್‌ನ ಚಿನ್ನ ಒಂದು ಗ್ರಾಂಗೆ ನಿನ್ನೆ 442 ರೂ. ಇಳಿಕೆಯಾಗಿ 15,791 ರೂ.ಗೆ ತಲುಪಿತ್ತು. ಇಂದು ಬೆಳಿಗ್ಗೆ ಮತ್ತೆ ಒಂದು ಗ್ರಾಂಗೆ 98 ರೂ. ಕಡಿಮೆಯಾಗಿದ್ದು, 15,693 ರೂ. ನಷ್ಟಿದೆ.
22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ ನಿನ್ನೆ 405 ರೂ. ಇಂದು 90 ರೂ. ಕಡಿಮೆಯಾಗಿದೆ. ಪ್ರಸ್ತುತ ಒಂದು ಗ್ರಾಂಗೆ 14, 385 ರೂ. ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು 73 ರೂ. ಕಡಿಮೆಯಾಗಿದ್ದು, 11,770 ರೂ.ಗೆ ತಲುಪಿದೆ.
ಚಿನ್ನದಂತೆ ಬೆಳ್ಳಿಯೂ ಕಳೆದ ಮೂರು ದಿನಗಳಿಂದ ಇಳಿಮುಖವಾಗುತ್ತಿದೆ. ಮೇ 9ರಿಂದ ಸ್ಥಿರವಾಗಿದ್ದ ಬೆಳ್ಳಿ ದರ ಮೇ 12ರಂದು ಒಂದು ಕೆ.ಜಿ.ಗೆ 15 ಸಾವಿರ ರೂ. ಮೇ 13ರಂದು 20 ಸಾವಿರ ರೂ. ಏರಿಕೆಯಾಗಿ ಗ್ರಾಹಕರು ಗಾಬರಿ ಪಡುವಂತಾಗಿತ್ತು. ಆದರೆ, ಮೇ14 ರಿಂದ ಪ್ರತಿ ದಿನ 10 ಸಾವಿರ ರೂ. ಇಳಿಕೆಯಾಗುತ್ತಿದೆ. ಇಂದು ಸಹ 10 ಸಾವಿರ ರೂ. ಇಳಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿ ದರ 2.80 ಲಕ್ಷ ರೂ. ನಷ್ಟಿದೆ.
ಚಿನ್ನ ಮತ್ತು ಬೆಳ್ಳಿ ವ್ಯಾಪಾರದಲ್ಲಿ ಕುಸಿತವಾಗಿದ್ದು, ವರ್ತಕರು ಆತಂಕ್ಕೆ ಒಳಗಾಗಿದ್ದಾರೆ. ಆಭರಣಗಳ ತಯಾಕರು ಸಹ ಸಂಕಷ್ಟ ಎದುರಾಗುವ ಆತಂಕದಲ್ಲಿದ್ದಾರೆ.
