ಬೆಂಗಳೂರು,ಸೆ.12- ವಾರಾಂತ್ಯ ಹಾಗೂ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾಲುಸಾಲು ರಜೆ ಇರುವುದರಿಂದ ಸಾರ್ವಜನಿಕರು ಊರುಗಳತ್ತ ಮುಖ ಮಾಡಿದ್ದು ಬಸ್ ನಿಲ್ದಾಣಗಳಲ್ಲಿ ಜನವೋ ಜನ.ಮೆಜೆಸ್ಟಿಕ್‌ನಲ್ಲಿ ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ಜನಜಾತ್ರೆಯೇ ಕಂಡುಬಂದಿತು.ತಡರಾತ್ರಿಯವರೆಗೂ ಜನರು ಬಸ್ಸುಗಳಿಗಾಗಿ ಕಾಯುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ನಿನ್ನೆ ಕೆಲಸ ಮುಗಿಸಿಕೊಂಡು ಬಹುತೇಕ ಜನರು ಊರುಗಳಿಗೆ ತೆರಳಲು ಮೆಜೆಸ್ಟಿಕ್, ಮೈಸೂರು ಬಸ್ ನಿಲ್ದಾಣ, ಶಾಂತಿನಗರ, ನವರಂಗ್, ಯಶವಂತಪುರ ಸೇರಿದಂತೆ ಪ್ರಮುಖ ಬಸ್ಸು ನಿಲ್ದಾಣಗಳಿಗೆ ಬಂದಿದ್ದರಿಂದ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿ ಕೆಲವರಿಗೆ ಬುಕ್ಕಿಂಗ್ ಮಾಡಿದ್ದ ಬಸ್ಸುಗಳೂ ಕೂಡಾ ಮಿಸ್ ಆದವು.
ಹಬ್ಬದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆಯೇ ಬಹುತೇಕ ಜನರು ಮುಂಜಾಗ್ರತಾ ಕ್ರಮವಾಗಿ ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದರು. ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಕೆಎಸ್‌ಆರ್‌ಟಿಸಿ ವತಿಯಿಂದ 2,400 ಹೆಚ್ಚುವರಿ ಬಸ್ಸುಗಳ ಸಂಚಾರವನ್ನು ಪ್ರಾರಂಭಿಸಿದ್ದರೂ ಸಹ ಜನಸಾಗರ ಕಡಿಮೆಯಾಗಿರಲಿಲ್ಲ.
ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ನಿರಂತರವಾಗಿ ಬಸ್ಸುಗಳು ತೆರಳುತ್ತಿದ್ದು ಎಲ್ಲಾ ಬಸ್ಸುಗಳೂ ಕೂಡಾ ತುಂಬಿ ತುಳುಕುತ್ತಿದ್ದವು. ಇಂದು ಬೆಳ್ಳಂಬೆಳಗ್ಗೆಯಿಂದಲೇ ಜನರು ಊರುಗಳಿಗೆ ತೆರಳುತ್ತಿದ್ದು, ಬಸ್ಸು ನಿಲ್ದಾಣಗಳಲ್ಲಿ ಜನಸಮೂಹ ಅಪಾರವಾಗಿತ್ತು.
ಟ್ರಾಫಿಕ್ ಜಾಮ್ :
ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯಲ್ಲಿ ಸಂಚಾರದಟ್ಟಣೆ ಹೆಚ್ಚಾಗಿತ್ತು. ನವರಂಗ್, ಯಶವಂತಪುರ, ಗೊರಗುಂಟೆಪಾಳ್ಯ, ಎಂಟನೇ ಮೈಲಿ, ದಾಸರಹಳ್ಳಿ, ನೆಲಮಂಗಲ ಟೋಲ್, ಕುಣಿಗಲ್ ಬೈಪಾಸ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದವು.
ರೈಲುಗಳಲ್ಲೂ ಜನಸಾಗರ :
ಗಣೇಶ ಹಬ್ಬವನ್ನು ರಾಜದಲ್ಲಷ್ಟೇ ಅಲ್ಲದೆ ಹೊರರಾಜ್ಯಗಳಲ್ಲೂ ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ಕೆಲಸ, ವಿದ್ಯಾಭ್ಯಾಸದ ನಿಮಿತ್ತ ನೆಲೆಸಿರುವ ಜನರೂ ಸಹ ಸ್ವಂತ ಊರುಗಳಿಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ರೈಲುಗಳಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು.
