ಕೊಚ್ಚಿ, ಸೆ. 12 (ಪಿಟಿಐ): ಭಾರತದ ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ ಅವರ ತಂದೆ ವಿ. ಸಂತಕುಮಾರನ್ ನಾಯರ್ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರು ಇಲ್ಲಿನ ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಡರಾತ್ರಿ 9.45ಕ್ಕೆ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸದ್ಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿರುವ ಅವರ ಪಾರ್ಥಿವ ಶರೀರವನ್ನು ವಿದೇಶದಿಂದ ಸಂಬಂಧಿಕರು ಆಗಮಿಸಿದ ನಂತರ ಭಾನುವಾರ ಕೋತಮಂಗಲದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗುವುದು ಎಂದು ಮೂಲಗಳು ಹೇಳಿವೆ. ನಾಳೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕೋತಮಂಗಲದಲ್ಲಿರುವ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.
ಅಂತ್ಯಕ್ರಿಯೆಯು ಸಂಜೆ 4 ಗಂಟೆಗೆ ನಡೆಯಲಿದೆ. ನಾಯರ್ ಅವರು ನಿವೃತ್ತ ಎಲ್ಐಸಿ ವಲಯ ವ್ಯವಸ್ಥಾಪಕರಾಗಿದ್ದರು. ಅವರು ಪತ್ನಿ ಟಿ.ಎನ್. ಸಾವಿತ್ರಿದೇವಿ ಹಾಗೂ ಮಕ್ಕಳಾದ ದೀಪು, ನಿವೇದಿತಾ, ದಿವ್ಯಾ ಮತ್ತು ಶ್ರೀಶಾಂತ್ ಅವರನ್ನು ಅಗಲಿದ್ದಾರೆ.
