Homeರಾಜ್ಯವಾಟ್ಸ್ಯಾಪ್‌ ಮೂಲಕ KSRTC ಬಸ್ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ

ವಾಟ್ಸ್ಯಾಪ್‌ ಮೂಲಕ KSRTC ಬಸ್ ಟಿಕೆಟ್‌ ಬುಕ್ಕಿಂಗ್‌ಗೆ ಅವಕಾಶ

ಬೆಂಗಳೂರು,ಸೆ.12- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಡಿಜಿಟಲ್‌ ಸೇವೆಗಳನ್ನು ವಿಸ್ತರಿಸುತ್ತಿದೆ.ಇದರ ಭಾಗವಾಗಿ ಒಂದು ಕರ್ನಾಟಕ ಮೊಬಿಲಿಟಿ ಆ್ಯಪ್‌ ಮೂಲಕ ರಾಜ್ಯದ ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಾರಿಗೆ ಸೇವೆಗಳನ್ನು ಒಂದೇ ಡಿಜಿಟಲ್‌ ವೇದಿಕೆಯಲ್ಲಿ ಒಗ್ಗೂಡಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರು ಸರ್ಕಾರದ ನೂರು ದಿನಗಳ ಕಾರ್ಯಕ್ರಮದಲ್ಲಿ ಈ ಆ್ಯಪ್‌ ಹಾಗೂ ವಾಟ್ಸ್ಯಾಪ್‌ ಟಿಕೆಟಿಂಗ್‌ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಮೊಬೈಲ್‌ ಆ್ಯಪ್‌ ಬಗ್ಗೆ :
ಸುರಕ್ಷಿತ ಲಾಗಿನ್‌ ವ್ಯವಸ್ಥೆಯ ಮೂಲಕ ಪ್ರಯಾಣಿಕರ ಗುರುತಿನ ದೃಢೀಕರಣ, ಹಿಂದಿನ ಬುಕ್ಕಿಂಗ್‌ಗಳ ವಿವರ ವೀಕ್ಷಣೆ ಹಾಗೂ ವಹಿವಾಟುಗಳ ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ.
ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಯಾಣಿಕರ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ದೂರುಗಳ ಸ್ಥಿತಿಯನ್ನು ಪರಿಶೀಲಿಸುವುದು, ಅಗತ್ಯವಿದ್ದಲ್ಲಿ ಮೇಲ್ದರ್ಜೆಗೆ ಕಳುಹಿಸುವುದು ಹಾಗೂ ಪರಿಹಾರದ ಪ್ರಗತಿಯನ್ನು ಟ್ರ್ಯಾಕ್‌ ಮಾಡುವ ಸೌಲಭ್ಯ ದೊರೆಯಲಿದೆ.

ವಾಟ್ಸ್ಯಾಪ್‌ ಮೂಲಕ ಟಿಕೆಟ್‌ ಬುಕ್ಕಿಂಗ್‌ :
ಪ್ರಯಾಣಿಕರ ಅನುಕೂಲಕ್ಕಾಗಿ ವಾಟ್ಸ್ಯಾಪ್‌ ಮೂಲಕ ಕೆಎಸ್‌‍ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಬಸ್‌‍ಗಳ ಟಿಕೆಟ್‌ ಬುಕ್ಕಿಂಗ್‌ ಸೌಲಭ್ಯವನ್ನು ಸಹ ಒದಗಿಸಲಾಗಿದೆ.ಪ್ರಯಾಣಿಕರು +91 6364940880 ವಾಟ್ಸ್ಯಾಪ್‌ ಸಂಖ್ಯೆಗೆ ಸಂದೇಶವನ್ನು ಕಳುಹಿಸುವ ಮೂಲಕ ಬುಕ್ಕಿಂಗ್‌ ಪ್ರಕ್ರಿಯೆಯನ್ನು ಆರಂಭಿಸಬಹುದು. ನಂತರ ವಾಟ್ಸಾಪ್‌ನಲ್ಲಿಯೇ ಲಭ್ಯವಾಗುವ ಸಂವಾದಾತಕ ವ್ಯವಸ್ಥೆಯು ಟಿಕೆಟ್‌ ಕಾಯ್ದಿರಿಸುವಿಕೆಯ ಸಂಪೂರ್ಣ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲಿದೆ.

ಪಾವತಿಗಾಗಿ ಯುಪಿಐ, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಹಾಗೂ ವಾಲೆಟ್‌ಗಳು ಸೇರಿದಂತೆ ವಿವಿಧ ಪಾವತಿ ವಿಧಾನಗಳನ್ನು ಬಳಸಬಹುದಾಗಿದೆ.ಪಾವತಿ ಯಶಸ್ವಿಯಾದ ನಂತರ ಬುಕ್ಕಿಂಗ್‌ ದೃಢೀಕರಣ ಹಾಗೂ ಇ-ಟಿಕೆಟ್‌ ಅನ್ನು ವಾಟ್ಸ್ಯಾಪ್‌ ಮತ್ತು ಇ-ಮೇಲ್‌ ಮೂಲಕ ಪ್ರಯಾಣಿಕರಿಗೆ ಹಂಚಿಕೊಳ್ಳಲಾಗುತ್ತದೆ. ವಾಟ್ಸ್ಯಾಪ್‌ ಮೂಲಕ ಟಿಕೆಟ್‌ ರದ್ದುಪಡಿಸಲು ಅವಕಾಶವಿದೆ ಎಂದು ಕೆಎಸ್‌‍ಆರ್‌ಟಿಸಿ ತಿಳಿಸಿದೆ.

RELATED ARTICLES
spot_img

Latest News