ಬೆಂಗಳೂರು,ಮಾ.9- ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆ ಹಾಗೂ ಇತರ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯವಿರುವ 890 ವಿಧಗಳ ಔಷಧಿಗಳನ್ನು 880.68 ಕೋಟಿ ರೂ. ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್ ವಿಧಾನಪರಿಷತ್‌ಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕರಾದ ಡಾ.ಧನಂಜಯ ಸರ್ಜಿ ಹಾಗೂ ಪ್ರತಾಪ ಸಿಂಹ ನಾಯಕ್ ಕೆ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಔಷಧಗಳನ್ನು ಖರೀದಿಸಲು ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆಗೆ ಅನುಮೋದನೆ ನೀಡಲಾಗಿದೆ. ಔಷಧಿ ಖರೀದಿಯನ್ನು ಪಾರದರ್ಶಕವಾಗಿ ಟೆಂಡರ್ ಕರೆದು ಮಾಡಲಾಗುತ್ತಿದೆ. ಹೆಚ್ಚು ಬಿಡ್‌ದಾರರು ಭಾಗವಹಿಸಲು ಅವಕಾಶವಾಗುವಂತೆ ಟೆಂಡರ್ ಷರತ್ತುಗಳನ್ನು ವಿಧಿಸಲಾಗಿದೆ ಎಂದರು.
ಔಷಧ ಸರಬರಾಜು ಮಾಡುವ ಮುನ್ನವೇ ಗುಣಮಟ್ಟದ ಪರೀಕ್ಷೆ ಮಾಡಲಾಗುವುದು. ಕೊರತೆ ಇರುವ ಔಷಧಗಳನ್ನು ತಾತ್ಕಾಲಿಕವಾಗಿ ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ. ವಾರ್ಷಿಕ ಔಷಧಿ ಖರೀದಿ ಬದಲು 3 ರಿಂದ 4 ತಿಂಗಳಿಗೊಮೆ ಅಗತ್ಯವಿರುವ ಔಷಧಿ ಖರೀದಿ ಮಾಡಲಾಗುತ್ತಿದೆ.
ಇದರಿಂದ ಅವಧಿ ಮುಗಿಯುವ ಔಷಧಿಗಳ ಸಂಖ್ಯೆ ತಪ್ಪಲಿದೆ. 232 ಕೋಟಿ ರೂ.ಗಳಷ್ಟು ಔಷಧಿಗಳನ್ನು ಒದಗಿಸಲಾಗಿದೆ. ಈ ತಿಂಗಳು, ಮುಂದಿನ ತಿಂಗಳು ಸರಬರಾಜು ಆಗಲಿದೆ ಎಂದು ಮಾಹಿತಿ ನೀಡಿದರು. 2025-26ನೇ ಸಾಲಿನಲ್ಲಿ ಕೆಎಸ್‌ಎಂಎಸ್‌ಸಿಎಲ್ ಸಂಸ್ಥೆಯಿಂದ 534 ಔಷಧಿಗಳಲ್ಲಿ ಆದ್ಯತೆ ಮೇಲೆ 496 ಔಷಧಿಗಳ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು, ಉಳಿದ 38 ಔಷಧಿಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಎಬಿ-ಎಆರ್‌ಕೆ, ಜೆಎಸ್‌ಎಸ್‌ಕೆ, ಎಆರ್‌ಎಸ್ ಅನುದಾನಗಳನ್ನು ಬಳಸಿಕೊಂಡು ಅಗತ್ಯ ಜೀವರಕ್ಷಕ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ನೀಡಲು ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 13 ಭ್ರೂಣ ಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದು ಶಾಸಕರಾದ ಡಾ.ಉಮಾಶ್ರೀ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಉಮಾಶ್ರೀ ಅವರ ಪರವಾಗಿ ಐವಾನ್ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭ್ರೂಣ ಹತ್ಯೆ ತಡೆಗಟ್ಟಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದಲ್ಲಿ ಇದುವರೆಗೂ ಕಾಯಿದೆ ಉಲ್ಲಂಘಿಸಿರುವ ಸ್ಕ್ಯಾನಿಂಗ್ ಸೆಂಟರ್ ಮಾಲೀಕರು, ವೈದ್ಯರ ವಿರುದ್ಧ 150 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈ ಪೈಕಿ 80 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. 70 ಪ್ರಕರಣಗಳು ನ್ಯಾಯಾಲಯಲ್ಲಿ ವಿವಿಧ ಹಂತಗಳಲ್ಲಿ ಬಾಕಿಯಲ್ಲಿ ಇರುತ್ತವೆ.
ರಾಜ್ಯದಲ್ಲಿ ಭ್ರೂಣಹತ್ಯೆ ಬಗ್ಗೆ ಮಾಹಿತಿ ಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡಲಾಗುತ್ತಿದ್ದು, ಕಳೆದ ವರ್ಷ ಮೂವರಿಗೆ ಬಹುಮಾನ ನೀಡಲಾಗಿದೆ. ಸಾರ್ವಜನಿಕರಲ್ಲಿ ಹೆಣ್ಣು ಭ್ರೂಣಹತ್ಯೆ ಮಾಡದಂತೆ ಜಾಗೃತಿ ವಹಿಸಲಾಗುತ್ತಿದೆ ಎಂದರು. ಭ್ರೂಣಹತ್ಯೆ ತಡೆಗಟ್ಟಲು ಮತ್ತು ಇದರ ಬಗ್ಗೆ ನಿಗಾ ಇಡಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಹೇಳಿದರು.
