Tuesday, April 14, 2026
Homeರಾಜ್ಯಸಿದ್ದರಾಮಯ್ಯನವರಿಗೆ ದಾಖಲೆ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ : ಹೆಚ್ಡಿಕೆ

ಸಿದ್ದರಾಮಯ್ಯನವರಿಗೆ ದಾಖಲೆ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ : ಹೆಚ್ಡಿಕೆ

HD Kumaraswamy on Siddaramaiah' Record budget

ಬೆಂಗಳೂರು, ಮಾ.6- ರಾಜ್ಯದಲ್ಲಿ 17ನೇ ಬಜೆಟ್ ಮಂಡಿಸಿದ ಖುಷಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾದರೆ, ಜನರಿಗೆ ಬರೆ ಎಳೆಸಿಕೊಂಡ ಬಿಸಿ ತಟ್ಟಲಿದೆ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆಯನ್ನು ದಿಕ್ಕಾಪಾಲಾಗಿಸಿದ್ದಾರೆ ಕೇಂದ್ರದ ಭಾರಿ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ರಾಜ್ಯ ಬಜೆಟ್ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ಲೋಗನ್ ರಾಮಯ್ಯನವರ ಬಜೆಟ್ಟಿನ ಸುದೀರ್ಘ ಪ್ರಲಾಪ ಆಲಿಸಿದೆ. ಒಂದು ಮಾತು ಸ್ಪಷ್ಟ, ಕರ್ನಾಟಕದ ಆರ್ಥಿಕತೆ ಹಿಂಜರಿಕೆಯತ್ತ ಸಾಗಿದೆ. ಸಿಎಜಿ ವರದಿ, ರಿಸರ್ವ್ ಬ್ಯಾಂಕ್ ಕೊಟ್ಟಿರುವ ಎಚ್ಚರಿಕೆಗಿಂತ ದೊಡ್ಡ ಆರ್ಥಿಕ ಅಪಾಯಕ್ಕೆ ಸಿಲುಕಿದೆ ಕರ್ನಾಟಕ. ಮುಂದಿನ ದಿನಗಳು ಇನ್ನೂ ದುರ್ಬರವಾಗಲಿವೆ. ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಆಯವ್ಯಯ ಕರ್ಣಕಠೋರ ಮತ್ತು ರಾಜ್ಯಕ್ಕೆ ಭಾರ. ಮುಖ್ಯಮಂತ್ರಿಗಳು ಕೇಂದ್ರದ ನಿಂದನೆಯನ್ನು ಈ ಬಾರಿಯೂ ಮುಂದುವರಿಸಿದರು, ಅದು ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನೇ ಮರೆತು ತಮ್ಮ ಸರ್ಕಾರದ ಕೆಟ್ಟ ಮಾದರಿಯನ್ನು ಪ್ರಚಾರ ಮಾಡಿಕೊಂಡು ಆತ್ಮರತಿ ಮೆರೆದಿದ್ದಾರೆ. 16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು ಶೇ.3.61ರಿಂದ ಶೇ.4.7ಗೆ ಏರಿಸಲಾಗಿದೆ. ಇದರಿಂದ ಅನಾಮತ್ತಾಗಿ 11,000 ಕೋಟಿ ರೂ.ಗೂ ಹೆಚ್ಚು ಹಣ ರಾಜ್ಯಕ್ಕೆ ಹರಿದುಬರುತ್ತದೆ. ಕೇಂದ್ರದಿಂದ ಹಣ ಬರುವುದು ಕಡಿಮೆ ಆಗಿಲ್ಲ ಎಂಬುದನ್ನು ಅವರ ಬಜೆಟ್ ಪುಸ್ತಕವೇ ಹೇಳುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದ್ದಾರೆ. ಮುಖ್ಯಮಂತ್ರಿಗಳು ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ್ದು ಈಗ 4.48 ಲಕ್ಷ ಕೋಟಿ ರೂ.ಗಾತ್ರದ ಬಜೆಟ್. ರಾಜ್ಯದ ಈಗಿನ ಒಟ್ಟು ಸಾಲ 8.24 ಲಕ್ಷ ಕೋಟಿ ರೂ., ಈ ಸಾಲ 1.16 ಲಕ್ಷ ಕೋಟಿ ರೂ.ನಿಂದ 1.32 ಲಕ್ಷ ಕೋಟಿ ರೂ.ಗೆ ಏರಿದೆ. ಮುಂದಿನ ವರ್ಷಕ್ಕೆ 9 ಲಕ್ಷ ಕೋಟಿ ರೂ. ಮೀರುವುದು ಗ್ಯಾರಂಟಿ. ಈ ಸಾಲದ ಗ್ಯಾರಂಟಿ ಭೀತಿ ಹುಟ್ಟಿಸುತ್ತದೆ ಎಂದಿದ್ದಾರೆ.

ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಯಾವುದಕ್ಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ಸ್ಟೇಟ್ ಮಿನಿಸ್ಟರ್ ದರ್ಜೆ ದಯಪಾಲಿಸಿ ಪೊಗದಸ್ತಾಗಿ ಸಾಕುತ್ತಿದ್ದಾರೆ. ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು, ಈ ಸರ್ಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ. ವೋಟು ಕೊಟ್ಟ ಮಹಾಪಾಪಕ್ಕೆ ಜನತೆಯನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ಧಾರುಣ ಬಜೆಟ್ ಇದಾಗಿದೆ ಎಂದು ಅವರು ಟೀಕಿಸಿದ್ದಾರೆ. ಮುಂಬರುವ ಸರ್ಕಾರಗಳಿಗೆ ಕಾಂಗ್ರೆಸ್ ಸರ್ಕಾರ ಸೃಷ್ಟಿಸುವ ಸಾಲದ ಗುಂಡಿಯನ್ನು ಮುಚ್ಚುವುದೇ ಕೆಲಸ ಆಗಲಿದೆ ಎಂದು ಅವರು ಆರೋಪಿಸಿದ್ದಾರೆ.

RELATED ARTICLES

Latest News